ಕಸಾಯಿಖಾನೆ ಅಭಿವೃದ್ಧಿ ವಿವಾದ: ಸಚಿವ ಖಾದರ್‌ರ ಪರ ನಿಂತ ದ.ಕ. ಜಿಲ್ಲಾ ಜೆಡಿಎಸ್

Update: 2018-10-09 12:50 GMT

ಮಂಗಳೂರು, ಅ. 9: ಸ್ಮಾರ್ಟ್ ಸಿಟಿ ಯೋಜನೆಯಡಿ ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿರುವ ಕುದ್ರೋಳಿಯ ಕಸಾಯಿಖಾನೆಯ ಅಭಿವೃದ್ಧಿ ಸೇರ್ಪಡೆಯ ವಿಚಾರವು ವಿವಾದಗೊಳ್ಳುತ್ತಿರುವ ಮಧ್ಯೆಯೇ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್‌ ಪರ ದ.ಕ. ಜಿಲ್ಲಾ ಜೆಡಿಎಸ್ ನಿಂತಿದೆ.

ಮಂಗಳವಾರ ನಗರದ ಖಾಸಗಿ ಹೊಟೇಲ್‌ನಲ್ಲಿ ಸುದ್ದಿಗೋಷ್ಠಿ ನಡೆಸಿದ ಜೆಡಿಎಸ್ ಜಿಲ್ಲಾಧ್ಯಕ್ಷ ಮುಹಮ್ಮದ್ ಕುಂಞಿ, ಕಸಾಯಿಖಾನೆಯ ವಿಚಾರದಲ್ಲಿ ಸಚಿವ ಖಾದರ್ ಸಲಹೆಯನ್ನಷ್ಟೇ ನೀಡಿದ್ದಾರೆ. ಅವರು ಏಕಪಕ್ಷೀಯವಾಗಿ ಯಾವುದೇ ತೀರ್ಮಾನ ತೆಗೆದುಕೊಂಡಿಲ್ಲ. ಕಸಾಯಿ ಖಾನೆಯ ಅಭಿವೃದ್ಧಿಗೆ 15 ಕೋ.ರೂ. ಬಿಡುಗಡೆಯೂ ಆಗಿಲ್ಲ. ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಬಳಸಿ ಎಂದು ಅಧಿಕಾರಿಗಳ, ಜನಪ್ರತಿನಿಧಿಗಳ ಮಟ್ಟದಲ್ಲಿ ನಡೆದ ಸಭೆಯಲ್ಲಿ ಸಲಹೆ ನೀಡಿದ್ದಾರೆ. ಈ ಸಭೆಯಲ್ಲಿ ಬಿಜೆಪಿಯ ಜನಪ್ರತಿನಿಧಿಗಳೂ ಇದ್ದರು. ಆವಾಗ ಮೌನ ತಾಳಿದ್ದ ಬಿಜೆಪಿಗರು ಇದೀಗ ಚುನಾವಣೆಯ ದೃಷ್ಟಿಯಲ್ಲಿ ಖಾದರ್ ವಿರುದ್ಧ ಆರೋಪ ಮಾಡುವುದು ಸರಿಯಲ್ಲ ಎಂದರು.

ರಾಜ್ಯದಲ್ಲಿ ಜೆಡಿಎಸ್-ಕಾಂಗ್ರೆಸ್ ಸರಕಾರ ಉತ್ತಮ ಆಡಳಿತ ನೀಡುತ್ತಿವೆ. ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ತನ್ನ ಜವಾಬ್ದಾರಿ ನಿಭಾಯಿಸುತ್ತಿದ್ದಾರೆ. ಯಾವುದೇ ಪಕ್ಷಪಾತ ಮಾಡುವುದಿಲ್ಲ. ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಚೆನ್ನಾಗಿದೆ. ಅಲ್ಲದೆ ಕಸಾಯಿಖಾನೆಯ ನೈರ್ಮಲ್ಯದ ದೃಷ್ಟಿಯಿಂದ ಅಭಿವೃದ್ಧಿಪಡಿಸುವ ಯೋಜನೆಗೆ ಖಾದರ್ ಮುಂದಾಗಿರುವುದರಲ್ಲಿ ಯಾವುದೇ ತಪ್ಪಿಲ್ಲ ಎಂದು ಮುಹಮ್ಮದ್ ಕುಂಞಿ ನುಡಿದರು.

ಕೊಣಾಜೆ ಸಮೀಪದ ಪಜೀರ್‌ನ ಕಾರ್ತಿಕ್‌ರಾಜ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲೆಗೆ ಬೆಂಕಿ ಹಚ್ಚುವುದಾಗಿ ಹೇಳಿಕೊಂಡಿದ್ದ ಸಂಸದ ನಳಿನ್ ಇದೀಗ ‘ಕಸಾಯಿಖಾನೆ ಮತ್ತು ಖಾದರ್’ ವಿಚಾರವನ್ನು ಮುಂದಿಟ್ಟು ಜನರ ದಾರಿ ತಪ್ಪಿಸುತ್ತಿದ್ದಾರೆ. ಭಾವನಾತ್ಮಕವಾಗಿ ವಿಭಜಿಸುವ ಪ್ರಯತ್ನ ಮಾಡುತ್ತಿದ್ದಾರೆ. ಬಿಜೆಪಿ ಪ್ರಚೋದನಕಾರಿ ಮಾತುಗಳ ಮೂಲಕ ಜಿಲ್ಲೆಯ ಸ್ವಾಸ್ಥ ಕೆಡಹುವ ಬದಲು ಜಿಲ್ಲೆಯ ಅಭಿವೃದ್ಧಿಗೆ ಸೂಕ್ತ ಸಲಹೆಗಳನ್ನು ನೀಡಲಿ ಎಂದು ಮುಹಮ್ಮದ್ ಕುಂಞಿ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಪಕ್ಷದ ಮುಖಂಡರಾದ ವಸಂತ ಪೂಜಾರಿ, ಎಂ.ಕೆ.ಖಾದರ್ ಮತ್ತಿತರರಿದ್ದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News