ಅ. 22ರಿಂದ ಸುರತ್ಕಲ್‌ನಲ್ಲಿ ಅಕ್ರಮ ಟೋಲ್‌ಗೇಟ್ ಮುಚ್ಚಲು ಆಗ್ರಹಿಸಿ ಅನಿರ್ದಿಷ್ಟ ಧರಣಿ

Update: 2018-10-09 13:03 GMT

ಮಂಗಳೂರು, ಅ. 9: ಜನತೆಯ ತೀವ್ರ ವಿರೋಧ, ಹಲವು ಹಂತದ ಹೋರಾಟ ಹಾಗೂ ಸುರತ್ಕಲ್ ಟೋಲ್‌ಗೇಟ್ ಅನ್ನು ಹೆಜಮಾಡಿ ಟೋಲ್‌ಗೇಟ್‌ನೊಂದಿಗೆ ವಿಲೀನಗೊಳಿಸುವ ರಾಜ್ಯ ಸರಕಾರದ ಪ್ರಸ್ತಾಪದ ಹೊರತಾಗಿಯೂ ಎನ್‌ಐಟಿಕೆ ಸಮೀಪದ ಅಕ್ರಮ ಟೋಲ್ ಕೇಂದ್ರವನ್ನು ಮುಚ್ಚಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ನಿರಾಕರಿಸುತ್ತಿರುವುದನ್ನು ಖಂಡಿಸಿ ಅ.22ರಿಂದ ಸುರತ್ಕಲ್‌ನಲ್ಲಿ ಅಕ್ರಮ ಟೋಲ್‌ಗೇಟ್ ಮುಚ್ಚಲು ಆಗ್ರಹಿಸಿ ಅನಿರ್ದಿಷ್ಟ ಧರಣಿ ನಡೆಸಲಾಗುವುದು ಎಂದು ‘ಟೋಲ್ಗೇಟ್ ವಿರೋಧಿ ಹೋರಾಟ ಸಮಿತಿ ಸುರತ್ಕಲ್’ ಇದರ ಸಂಚಾಲಕ ಮುನೀರ್ ಕಾಟಿಪಳ್ಳ ಹೇಳಿದರು.

ನಗರದ ಖಾಸಗಿ ಹೊಟೇಲ್‌ನಲ್ಲಿ ಮಂಗಳವಾರ ಸುದ್ದಿಗೋಷ್ಠಿ ನಡೆಸಿದ ಅವರು 2018ರ ಜನವರಿ 3ರಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ಉಪಸ್ಥಿತಿಯಲ್ಲಿ ರಾಜ್ಯ ಸರಕಾರ ನಡೆಸಿದ ಮಹತ್ವದ ಸಭೆಯಲ್ಲಿ ಸುರತ್ಕಲ್ ಟೋಲ್ಗೇಟ್‌ನ್ನು ಹೆಜಮಾಡಿ ಟೋಲ್‌ಗೇಟ್‌ನಲ್ಲಿ ವಿಲೀನಗೊಳಿಸಬೇಕು, ಯಾವುದೇ ಕಾರಣಕ್ಕೂ ಸುರತ್ಕಲ್ ಟೋಲ್ ಕೇಂದ್ರವನ್ನು ಮುಂದುವರಿಸಬಾರದು ಎಂಬ ನಿರ್ಣಯ ಆಂಗೀಕಾರಗೊಂಡಿತ್ತು. ಆ ನಂತರವೂ ಸತತ ಎರಡು ಬಾರಿ ಟೋಲ್ಸಂಗ್ರಹದ ಗುತ್ತಿಗೆಯನ್ನು ನಿಯಮ ಬಾಹಿರವಾಗಿ ನವೀಕರಿಸಲಾಯಿತು.

ಸೆಪ್ಟಂಬರ್ 26ರಂದು ಟೋಲ್ಗೇಟ್ ಮುಚ್ಚಲು ಒತ್ತಾಯಿಸಿ ನಡೆದ ಪಾದಯಾತ್ರೆಯ ಮುನ್ನಾ ದಿನವೂ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸಂಸದ ನಳಿನ್ ಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ಹೆದ್ದಾರಿ ಪ್ರಾಧಿಕಾರದ ಸಭೆಯಲ್ಲಿ ಸುರತ್ಕಲ್ ಟೋಲ್ ಗೇಟ್ ಮುಚ್ಚುವ ಪ್ರಸ್ತಾಪವನ್ನು ಪುನರುಚ್ಚರಿಸಲಾಗಿತ್ತು. ಸಂಸದರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ವಿಲೀನ ಆದರಷ್ಟೇ ಸಾಲದು, ಸುರತ್ಕಲ್-ನಂತೂರು ರಸ್ತೆಯಲ್ಲಿ ಟೋಲ್ ಸಂಗ್ರಹ ರದ್ದತಿಯ ಪ್ರಸ್ತಾಪ ಕಳುಹಿಸಿ ಎಂದು ಅಧಿಕಾರಿಗಳಿಗೆ ಸೂಚಿಸಿದ್ದರು.

ಅಕ್ಟೋಬರ್ 30ಕ್ಕೆ ಸುರತ್ಕಲ್ ಟೋಲ್ ಸಂಗ್ರಹ ಗುತ್ತಿಗೆ ಮುಗಿಯುತ್ತಿದೆ. ಆದರೆ ಇದೀಗ ಮತ್ತೊಮ್ಮೆ ಟೋಲ್ ಸಂಗ್ರಹ ಗುತ್ತಿಗೆ ನವೀಕರಣದ ಟೆಂಡರ್ ಕರೆಯಲಾಗಿದೆ. ಇದು ನಿಯಮಗಳ ಉಲ್ಲಂಘನೆ ಮಾತ್ರವಲ್ಲ, ಜನಸಾಮಾನ್ಯರ ಮೇಲೆ ಮಾಡಿರುವ ಆಕ್ರಮಣವಾಗಿದೆ. ಹೆದ್ದಾರಿ ಪ್ರಾಧಿಕಾರದ ಈ ಸರ್ವಾಧಿಕಾರದ ನಡೆಯನ್ನು ಮಂಗಳೂರಿನ ಜನತೆ ಒಕ್ಕೊರಲಿನಿಂದ ವಿರೋಧಿಸಲಿದ್ದು, ಈ ನಿಯಮಬಾಹಿರ ನವೀಕರಣಕ್ಕೆ ಸಂಸದ ನಳಿನ್ ಕುಮಾರ್ ಕಟೀಲ್ ನೇರ ಹೊಣೆಯಾಗಿದ್ದಾರೆ ಎಂದು ಆರೋಪಿಸಿದರು.

ಸಂಸದರ ಜನವಿರೋಧಿ ನಡೆ, ಹೆದ್ದಾರಿ ಗುತ್ತಿಗೆದಾರರ ಪರವಾದ ನಿಲುವನ್ನು ಹೋರಾಟ ಸಮಿತಿಯು ತೀವ್ರವಾಗಿ ಖಂಡಿಸುತ್ತದೆ. ಈ ಅಕ್ರಮ ಟೋಲ್ ಸಂಗ್ರಹ, ಹೆದ್ದಾರಿ ದುರವಸ್ಥೆ, ಕೂಳೂರು ಸೇತುವೆಯ ಕರುಣಾಜನಕ ಸ್ಥಿತಿಯನ್ನು ಯಾವುದೆ ಕಾರಣಕ್ಕೂ ಒಪ್ಪಲಾಗದು. ಈಗ ಕರೆದಿರುವ ಟೋಲ್ ಸಂಗ್ರಹ ಗುತ್ತಿಗೆಯ ಟೆಂಡರ್ ಹಿಂಪಡೆಯಬೇಕು, ಅ.30ರ ನಂತರ ಯಾವುದೇ ಕಾರಣಕ್ಕೂ ಸುರತ್ಕಲ್ ಟೋಲ್ ಕೇಂದ್ರದಲ್ಲಿ ಸುಂಕ ಸಂಗ್ರಹಿಸಬಾರದು, ಕೂಳೂರು ಸೇತುವೆಯನ್ನು ತಕ್ಷಣ ದುರಸ್ಥಿಗೊಳಿಸಿ, ಹೊಸ ಸೇತುವೆ ನಿರ್ಮಾಣಗೊಳ್ಳುವವರಗೆ ಸಂಚಾರಕ್ಕೆ ಯೋಗ್ಯಗೊಳಿಸಬೇಕು ಎಂದು ಒತ್ತಾಯಿಸಿ ಅ.22ರಿಂದ ಸುರತ್ಕಲ್ ಜಂಕ್ಷನ್‌ನಲ್ಲಿ ವಿವಿಧ ಸಂಘಸಂಸ್ಥೆಗಳ ಸಹಭಾಗಿತ್ವದಲ್ಲಿ ಅನಿರ್ದಿಷ್ಟಾವಧಿ ಧರಣಿ ನಡೆಸಲಾಗುವುದು ಎಂದು ಮುನೀರ್ ಕಾಟಿಪಳ್ಳ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾಜಿ ಉಪಮೇಯರ್ ಪುರುಷೋತ್ತಮ ಚಿತ್ರಾಪುರ, ಕಾರ್ಪೊರೇಟರ್‌ಗಳಾದ ರೇವತಿ ಪುತ್ರನ್, ದಯಾನಂದ ಶೆಟ್ಟಿ, ಡಿವೈಎಫ್‌ಐ ದ.ಕ. ಜಿಲ್ಲಾಧ್ಯಕ್ಷ ಬಿ.ಕೆ. ಇಮ್ತಿಯಾಝ್, ದ.ಕ. ಜಿಲ್ಲಾ ಟ್ಯಾಕ್ಸಿಮೆನ್ಸ್ ಮತ್ತು ಮಾಕ್ಸಿಕ್ಯಾಬ್ ಎಸೋಸಿಯೇಶನ್ ಅಧ್ಯಕ್ಷ ದಿನೇಶ್ ಕುಂಪಲ, ಕುಳಾಯಿ ನಾಗರಿಕ ಸಮಿತಿಯ ಭರತ್ ಶೆಟ್ಟಿ ಕುಳಾಯಿ, ಸಾಮಾಜಿಕ ಕಾರ್ಯಕರ್ತರಾದ ರಾಜೇಶ್ ಶೆಟ್ಟಿ ಪಡ್ರೆ, ಗಂಗಾಧರ ಬಂಜನ್ ಉಪಸ್ಥಿತರಿದ್ದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News