ನಗದು ನಿಷೇಧ, ಜಿಎಸ್‌ಟಿಯಿಂದ ಆರ್ಥಿಕತೆ ನಾಶ: ರಾಹುಲ್ ಗಾಂಧಿ

Update: 2018-10-09 15:39 GMT

ಧೋಲ್‌ಪುರ (ರಾಜಸ್ಥಾನ್), ಅ. 9: ನಗದು ನಿಷೇಧ ಹಾಗೂ ಜಿಎಸ್‌ಟಿ ಭಾರತದ ಆರ್ಥಿಕತೆಯನ್ನು ನಾಶ ಮಾಡಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ.

ದೋಲ್‌ಪುರ ಮಾನಿಯಾ ಪ್ರದೇಶದಲ್ಲಿ ರ್ಯಾಲಿ ಉದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ ಅವರು, ನರೇಂದ್ರ ಮೋದಿ ಅವರು ಕಳೆದ ಚುನಾವಣೆ ಸಂದರ್ಭ ತಾನು ಚೌಕಿದಾರ್ ಆಗಲು ಬಯಸುತ್ತೇನೆ ಎಂದು ಹೇಳಿದ್ದರು. ಆದರೆ, ಇವರು ಯಾರನ್ನು ರಕ್ಷಿಸುತ್ತಿದ್ದಾರೆ ಎಂದು ಸ್ಪಷ್ಟಪಡಿಸಲಿಲ್ಲ. ಅವರಿಂದ ರೈತರಿಗೆ ಬದಲಾಗಿ 15ರಿಂದ 20 ಉದ್ಯಮಿಗಳಿಗೆ ಲಾಭವಾಗಿದೆ ಎಂದರು. ತನ್ನ ಪಕ್ಷ ನೇತೃತ್ವದ ಯುಪಿಎ ಸರಕಾರದ ಅಧಿಕಾರದ ಅವಧಿಯಲ್ಲಿ ರೈತರ 70,000 ಕೋ. ರೂ. ಸಾಲ ಮನ್ನಾ ಮಾಡಲಾಗಿದೆ. ಆದರೆ, ನರೇಂದ್ರ ಮೋದಿ ನೇತೃತ್ವದ ಸರಕಾರ 3.5 ಲಕ್ಷ ಕೋಟಿ ರೂ. ಕೆಟ್ಟ ಸಾಲವನ್ನು ಮನ್ನಾ ಮಾಡಿದೆ. ಆದರೆ, ಪ್ರಧಾನಿ ಅವರು ರೈತರ ಒಂದು ರೂಪಾಯಿ ಸಾಲವನ್ನು ಕೂಡ ಮನ್ನಾ ಮಾಡಿಲ್ಲ ಎಂದು ಅವರು ಆರೋಪಿಸಿದರು.

ಎರಡು ದಿನಗಳ ಭೇಟಿ ಹಿನ್ನೆಲೆಯಲ್ಲಿ ರಾಜ್ಯಕ್ಕೆ ಆಗಮಿಸಿದ ರಾಹುಲ್ ಗಾಂಧಿ ಅವರು, ನೀರವ್ ಮೋದಿ, ಮೆಹುಲ್ ಚೋಕ್ಸಿ, ಲಲಿತ್ ಅಂಬಾನಿ ಸಹಿತ ಹಲವು ಉದ್ಯಮಿಗಳು ಪ್ರಧಾನಿ ಅವರಿಂದ ಲಾಭ ಪಡೆದುಕೊಂಡಿದ್ದಾರೆ. ಆದರೆ, ಪ್ರಧಾನಿ ಅವರಿಂದ ರೈತರಿಗೆ ಹಾಗೂ ಯುವಕರಿಗೆ ಯಾವುದೇ ಪ್ರಯೋಜನವಾಗಿಲ್ಲ ಎಂದರು. ರಫೇಲ್ ಒಪ್ಪಂದದಲ್ಲಿ ಅವರ ಉದ್ಯಮಿ ಗೆಳೆಯನಿಗೆ ಲಾಭ ಆಗಿದೆ. ಆದರೆ, ಸಂಸತ್ತಿನಲ್ಲಿ ಪ್ರಧಾನಿ ಅವರು ಒಂದೇ ಒಂದು ಮಾತು ಆಡುತ್ತಿಲ್ಲ ಎಂದು ತಿಳಿಸಿದರು. ಕೇಂದ್ರ ಹಾಗೂ ರಾಜ್ಯ ಸರಕಾರಗಳು ಜನರು, ಸಣ್ಣ ಉದ್ಯಮಿಗಳು, ರೈತರು, ಮಹಿಳೆಯರು ಹಾಗೂ ಯುವಕರ ವಿರುದ್ಧ ನಿರ್ಲಕ್ಷಿಸುತ್ತಿದೆ ಎಂದು ರಾಹುಲ್ ಗಾಂಧಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News