ಲೋಕಸಭಾ ಉಪಚುನಾವಣೆ: ಶಿವಮೊಗ್ಗ ಕ್ಷೇತ್ರದಲ್ಲಿ 'ಕೈ' ಬೆಂಬಲಿಸಲು ದೇವೇಗೌಡ, ಸಿಎಂ ಕುಮಾರಸ್ವಾಮಿ ಸಮ್ಮತಿ ?

Update: 2018-10-09 17:52 GMT

ಶಿವಮೊಗ್ಗ, ಅ. 9: ದಿಢೀರ್ ಎದುರಾಗಿರುವ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಉಪ ಚುನಾವಣೆಗೆ, ಒಲ್ಲದ ಮನಸ್ಸಿನಿಂದಲೇ ಸಿದ್ದವಾಗಿರುವ ಪ್ರಮುಖ ರಾಜಕೀಯ ಪಕ್ಷಗಳಲ್ಲಿ ಅಭ್ಯರ್ಥಿ ಆಯ್ಕೆ ಪ್ರಕ್ರಿಯೆಗಳು ಚುರುಕುಗೊಂಡಿದೆ. ಕಾಂಗ್ರೆಸ್ ಪಾಳಯದಲ್ಲಿನ ಚಟುವಟಿಕೆ ಬೆಂಗಳೂರಿಗೆ ಶಿಫ್ಟ್ ಆಗಿದ್ದು, ಆ ಪಕ್ಷದ ಅಭ್ಯರ್ಥಿ ಯಾರಾಗಲಿದ್ದಾರೆಂಬ ಕುತೂಹಲ ಕೆರಳಿಸಿದೆ. 

ಈಗಾಗಲೇ ಜಿಲ್ಲಾ ಬಿಜೆಪಿ ನಾಯಕರು ಸಭೆ ಸೇರಿ, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಪುತ್ರ ಬಿ.ವೈ.ರಾಘವೇಂದ್ರರನ್ನು ಕಣಕ್ಕಿಳಿಸುವ ಒಮ್ಮತದ ನಿರ್ಧಾರ ಪ್ರಕಟಿಸಿದ್ದಾರೆ. ಜಿಲ್ಲಾ ಸಮಿತಿಗೂ ಬಿ.ವೈ.ಆರ್. ಹೆಸರನ್ನು ಶಿಫಾರಸ್ಸು ಮಾಡಲಾಗಿದ್ದು, ಅಧಿಕೃತ ಘೋಷಣೆಯಷ್ಟೆ ಬಾಕಿ ಉಳಿದಿದೆ. 
ಉಳಿದಂತೆ ಶಿವಮೊಗ್ಗ ಕ್ಷೇತ್ರದಲ್ಲಿ ಅಭ್ಯರ್ಥಿ ಕಣಕ್ಕಿಳಿಸದಿರುವ ಹಾಗೂ ಕಾಂಗ್ರೆಸ್ ಪಕ್ಷ ಕಣಕ್ಕಿಳಿಸುವ ಅಭ್ಯರ್ಥಿಗೆ ಬೆಂಬಲ ವ್ಯಕ್ತಪಡಿಸಲು, ಜೆಡಿಎಸ್ ಪಕ್ಷದ ವರಿಷ್ಠರಾದ ಹೆಚ್.ಡಿ.ದೇವೇಗೌಡ ಹಾಗೂ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಸಮ್ಮತಿ ವ್ಯಕ್ತಪಡಿಸಿದ್ದಾರೆ ಎಂದು ಆ ಪಕ್ಷದ ಉನ್ನತ ಮೂಲಗಳು ತಿಳಿಸಿವೆ. 

ಮತ್ತೊಂದೆಡೆ ಕಾಂಗ್ರೆಸ್ ಪಾಳಯದಲ್ಲಿ ಅಭ್ಯರ್ಥಿ ಆಯ್ಕೆ ಚಟುವಟಿಕೆಗಳು ಬಿರುಸುಗೊಂಡಿವೆ. ಆ ಪಕ್ಷದ ಜಿಲ್ಲೆಯ ನಾಯಕರು ಹಾಗೂ ಸ್ಪರ್ಧಾಕಾಂಕ್ಷಿಗಳು ಬೆಂಗಳೂರಿನಲ್ಲಿ ಬೀಡುಬಿಟ್ಟಿದ್ದಾರೆ. ಹಿರಿಯ ನಾಯಕರೊಂದಿಗೆ ಸಮಾಲೋಚನೆ ನಡೆಸಿದ್ದಾರೆ. ಸ್ಪರ್ಧಾಕಾಂಕ್ಷಿಗಳ ವಿವರ ಪರಾಮರ್ಶಿಸಿರುವ ರಾಜ್ಯ ನಾಯಕರು, ದೆಹಲಿ ವರಿಷ್ಠರಿಗೆ ಓರ್ವ ಅಭ್ಯರ್ಥಿಯ ಹೆಸರು ಶಿಫಾರಸ್ಸು ಮಾಡಲು ನಿರ್ಧರಿಸಿದ್ದಾರೆ ಎನ್ನಲಾಗಿದೆ. 

ಈ ಹಿನ್ನೆಲೆಯಲ್ಲಿ, ಮುಂದಿನ 2-3 ದಿನಗಳಲ್ಲಿ ಶಿವಮೊಗ್ಗ ಕ್ಷೇತ್ರದಲ್ಲಿ ಕಾಂಗ್ರೆಸ್‍ನಿಂದ ಕಣಕ್ಕಿಳಿಯುವ ಅಭ್ಯರ್ಥಿ ಹೆಸರು ಅಧಿಕೃತವಾಗಿ ಘೋಷಣೆಯಾಗುವ ನಿರೀಕ್ಷೆಯಿದೆ ಎಂದು ಶಿವಮೊಗ್ಗ ಜಿಲ್ಲೆಯ ಕಾಂಗ್ರೆಸ್ ನಾಯಕರೋರ್ವರು ತಿಳಿಸಿದ್ದಾರೆ. 

ಯಾರಾಗಲಿದ್ದಾರೆ ಹುರಿಯಾಳು?: ಮಾಜಿ ಸಚಿವ ಕಾಗೋಡು ತಿಮ್ಮಪ್ಪ, ಕೆಪಿಸಿಸಿ ಉಪಾಧ್ಯಕ್ಷ ಮಂಜುನಾಥ ಭಂಡಾರಿ, ಮಾಜಿ ಸಚಿವ ಕಿಮ್ಮನೆ ರತ್ನಾಕರ್, ಮುಖಂಡ ಹೆಚ್.ಎಸ್.ಸುಂದರೇಶ್ ಸೇರಿದಂತೆ ಸುಮಾರು ಆರು ಜನರ ಹೆಸರುಗಳು ಟಿಕೆಟ್ ರೇಸ್‍ನಲ್ಲಿವೆ. ಶಿವಮೊಗ ಕ್ಷೇತ್ರದಲ್ಲಿ ಬಿಜೆಪಿ ಪ್ರಾಬಲ್ಯವಿರುವುದರಿದ ಹಾಗೂ ಈಡಿಗ ಮತದಾರರ ಸಂಖ್ಯೆ ಹೆಚ್ಚಿರುವುದರಿಂದ ಮಾಜಿ ಸಚಿವ ಕಾಗೋಡು ತಿಮ್ಮಪ್ಪರನ್ನು ಕಣಕ್ಕಿಳಿಸಬೇಕೆಂಬ ಚಿಂತನೆ ಆ ಪಕ್ಷದ ವರಿಷ್ಠರದ್ದಾಗಿದೆ. 

ಕಾಗೋಡು ತಿಮ್ಮಪ್ಪ

ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸಾಗರ ಕ್ಷೇತ್ರದಲ್ಲಿ ಪರಾಭವಗೊಂಡ ನಂತರ ಚುನಾವಣಾ ರಾಜಕಾರಣದ ಬಗ್ಗೆಯೆ ಬೇಸರಗೊಂಡಿರುವ ಕಾಗೋಡು ತಿಮ್ಮಪ್ಪರವರು, ಉಪ ಚುನಾವಣೆಗೆ ಅಭ್ಯರ್ಥಿಯಾಗುವ ಸಾಧ್ಯತೆಗಳು ಅತ್ಯಂತ ವಿರಳವಾಗಿದೆ. 'ತಾವು ಸ್ಪರ್ಧಾಕಾಂಕ್ಷಿಯಲ್ಲ. ಹೈಕಮಾಂಡ್ ಹೇಳಿದರೂ ಕಣಕ್ಕಿಳಿಯುವುದಿಲ್ಲ' ಎಂಬ ಅಭಿಪ್ರಾಯವನ್ನು ಕಾಗೋಡು ವ್ಯಕ್ತಪಡಿಸುತ್ತಿದ್ದಾರೆ ಎಂದು ಹೇಳಾಗಿದೆ. 

ಕಿಮ್ಮನೆ ರತ್ನಾಕರ್

ಉಳಿದಂತೆ ಅಸೆಂಬ್ಲಿ ಎಲೆಕ್ಷನ್‍ನಲ್ಲಿ ತೀರ್ಥಹಳ್ಳಿ ಕ್ಷೇತ್ರದಿಂದ ಸ್ಪರ್ಧಿಸಿದ್ದ ಕಿಮ್ಮನೆ ರತ್ನಾಕರ್ ಹಾಗೂ ಕಳೆದ ಲೋಕಸಭೆ ಚುನಾವಣೆಯಲ್ಲಿ ಕಣಕ್ಕಿಳಿದಿದ್ದ ಮಂಜುನಾಥ ಭಂಡಾರಿಯವರ ಹೆಸರು ಪ್ರಮುಖವಾಗಿ ಕೇಳಿಬರುತ್ತಿವೆ. ಇವರಿಬ್ಬರಲ್ಲಿ ಓರ್ವರಿಗೆ ಟಿಕೆಟ್ ಖಚಿತ ಎಂದು ಆ ಪಕ್ಷದ ಮೂಲಗಳು ಹೇಳುತ್ತಿವೆ. ಈಗಾಗಲೇ ಈ ಇಬ್ಬರು ನಾಯಕರ ಅಭಿಪ್ರಾಯಗಳನ್ನು ಆ ಪಕ್ಷದ ಹಿರಿಯ ನಾಯಕರು ಆಲಿಸಿದ್ದಾರೆನ್ನಲಾಗಿದೆ. 

ಮಂಜುನಾಥ ಭಂಡಾರಿ

ಕಿಮ್ಮನೆ ಆಸಕ್ತಿ : ಭಂಡಾರಿ ನಿರಾಸಕ್ತಿ!
ಕಾಂಗ್ರೆಸ್‍ನ ಪ್ರಬಲ ಟಿಕೆಟ್ ಆಕಾಂಕ್ಷಿಗಳೆಂದೇ ಬಿಂಬಿತವಾಗಿರುವ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಹಾಗೂ ಕೆಪಿಸಿಸಿ ಉಪಾಧ್ಯಕ್ಷ ಮಂಜುನಾಥ ಭಂಡಾರಿಯವರೊಂದಿಗೆ ಆ ಪಕ್ಷದ ವರಿಷ್ಠರು ಪ್ರತ್ಯೇಕ ಸಮಾಲೋಚನೆ ನಡೆಸಿ, ಅಭಿಪ್ರಾಯ ಆಲಿಸಿದ್ದಾರೆ. ಸರ್ವರೀತಿಯಲ್ಲಿ 'ಕೈ' ಹಿಡಿಯುವುದಾದರೆ ತಾನು ಕಣಕ್ಕಿಳಿಯಲಿದ್ದೇನೆ ಎಂದು ಕಿಮ್ಮನೆ ರತ್ನಾಕರ್ ರವರು ಸ್ಪರ್ಧೆಯ ಆಸಕ್ತಿ ವ್ಯಕ್ತಪಡಿಸಿದ್ದಾರೆ ಎಂದು ಹೇಳಲಾಗಿದೆ. 

ಮತ್ತೊಂದೆಡೆ ಕಳೆದ ಲೋಕಸಭೆ ಚುನಾವಣೆಯಲ್ಲಿ ಕಣಕ್ಕಿಳಿದು ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದ ಹಾಗೂ ಪ್ರಬಲ ಟಿಕೆಟ್ ಆಕಾಂಕ್ಷಿಯೆಂದೇ ಬಿಂಬಿತವಾಗಿದ್ದ ಕೆ.ಪಿ.ಸಿ.ಸಿ. ಉಪಾಧ್ಯಕ್ಷ ಮಂಜುನಾಥ ಭಂಡಾರಿಯವರು, ಬದಲಾದ ರಾಜಕೀಯ ವಿದ್ಯಮಾನದ ಹಿನ್ನೆಲೆಯಲ್ಲಿ ಟಿಕೆಟ್ ರೇಸ್‍ನಿಂದ ದೂರ ಉಳಿಯಲು ನಿರ್ಧರಿಸಿದ್ದಾರೆ. ಈ ಕಾರಣದಿಂದಲೇ ಪಕ್ಷದ ವರಿಷ್ಠರ ಸಭೆಯಲ್ಲಿ, ಉಪ ಚುನಾವಣೆ ಕಣಕ್ಕಿಳಿಯಲು ನಿರಾಸಕ್ತಿ ವ್ಯಕ್ತಪಡಿಸಿದ್ದಾರೆ ಎಂದು ತಿಳಿದುಬಂದಿದೆ. 

ಕೈಚೆಲ್ಲಿದ ಜೆಡಿಎಸ್ ನಾಯಕರು!
2013 ರ ವಿಧಾನಸಭೆ ಚುನಾವಣೆಯಲ್ಲಿ ಶಿವಮೊಗ್ಗ ಜಿಲ್ಲೆಯ ಏಳು ಕ್ಷೇತ್ರಗಳಲ್ಲಿ 3 ರಲ್ಲಿ ಜೆಡಿಎಸ್ ಅಭ್ಯರ್ಥಿಗಳು ಜಯ ಸಾಧಿಸಿದ್ದರು. ಹಾಗೆಯೇ ನಗರ, ಗ್ರಾಮೀಣ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿಯೂ ಆ ಪಕ್ಷ ಉತ್ತಮ ಸಾಧನೆ ಮಾಡಿತ್ತು. ಹಲವೆಡೆ ಅಧಿಕಾರದ ಚುಕ್ಕಾಣಿ ಹಿಡಿದಿತ್ತು. ಈ ಕಾರಣದಿಂದ ಜೆಡಿಎಸ್ ವರಿಷ್ಠರು ಶಿವಮೊಗ್ಗದತ್ತ ಹೆಚ್ಚಿನ ಗಮನ ಕೇಂದ್ರಿಕರಿಸುತ್ತಿದ್ದರು. ಕಳೆದ 2014 ರ ಲೋಕಸಭೆ ಚುನಾವಣೆಯಲ್ಲಿ ಎಸ್.ಬಂಗಾರಪ್ಪರ ಪುತ್ರಿ ಗೀತಾ ಶಿವರಾಜ್‍ಕುಮಾರ್‍ರವರನ್ನು ಅಭ್ಯರ್ಥಿಯಾಗಿ ಕಣಕ್ಕಿಳಿಸಿದ್ದರು. 

ಆದರೆ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಜೆಡಿಎಸ್ ಸಾಧನೆ ಕಳಪೆಯಾಗಿತ್ತು. ಯಾವೊಂದು ಕ್ಷೇತ್ರದಲ್ಲಿಯೂ ಆ ಪಕ್ಷದ ಅಭ್ಯರ್ಥಿಗಳು ಜಯ ಸಾಧಿಸಿರಲಿಲ್ಲ. ಶಿವಮೊಗ್ಗ ಮಹಾನಗರ ಪಾಲಿಕೆ ಚುನಾವಣೆಯಲ್ಲಿ, 35 ರಲ್ಲಿ ಕೇವಲ 2 ವಾರ್ಡ್‍ಗಳಲ್ಲಿ ಆ ಪಕ್ಷದ ಅಭ್ಯರ್ಥಿಗಳು ಜಯಗಳಿಸಿದ್ದರು. ಜಿಲ್ಲೆಯಲ್ಲಿ ಪಕ್ಷದ ಸಂಘಟನೆ ದುರ್ಬಲ ಸ್ಥಿತಿಯಲ್ಲಿರುವುದನ್ನು ಮನಗಂಡ ಜೆಡಿಎಸ್ ವರಿಷ್ಠರು, ಉಪ ಚುನಾವಣೆಯಲ್ಲಿ ಶಿವಮೊಗ್ಗ ಕ್ಷೇತ್ರದಲ್ಲಿ ಅಭ್ಯರ್ಥಿ ಕಣಕ್ಕಿಳಿಸದೆ ಕಾಂಗ್ರೆಸ್ ಬೆಂಬಲಿಸುವ ನಿರ್ಧಾರ ಕೈಗೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. 

Writer - ವರದಿ: ಬಿ. ರೇಣುಕೇಶ್

contributor

Editor - ವರದಿ: ಬಿ. ರೇಣುಕೇಶ್

contributor

Similar News