ದೈಹಿಕ ಶಿಕ್ಷಣ ಶಿಕ್ಷಕರ ನೇಮಕ ಎಂದು?

Update: 2018-10-09 18:12 GMT

ಮಾನ್ಯರೇ,

ಪ್ರತಿ ಶಾಲೆಗೆ ಒಬ್ಬ ದೈಹಿಕ ಶಿಕ್ಷಣ ಶಿಕ್ಷಕ ಇರಲೇಬೇಕು ಎಂದು ಡಾ. ವೈದ್ಯನಾಥನ್ ವರದಿ ತಿಳಿಸಿತ್ತು. 100 ಮಕ್ಕಳಿರುವ ಶಾಲೆಗಳಿಗೆ ಕಡ್ಡಾಯವಾಗಿ ದೈಹಿಕ ಶಿಕ್ಷಣ ಶಿಕ್ಷಕರನ್ನು ನೇಮಿಸುವಂತೆ ಒತ್ತಾಯವಿದೆ.ಆದರೆ ಇಂತಹ ಬೇಡಿಕೆಗಳಿಗೆ ಇನ್ನೂ ಫಲ ಸಿಕ್ಕಿಲ್ಲ. ರಾಜ್ಯದ 25 ಸಾವಿರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗಳ ಪೈಕಿ ಶೇ. 20 ಶಾಲೆಗಳಲ್ಲೂ ದೈಹಿಕ ಶಿಕ್ಷಣ ಶಿಕ್ಷಕರು ಇಲ್ಲ. 2007ರಿಂದ ಇವರ ನೇಮಕವೇ ನಡೆದಿಲ್ಲ. ಕಳೆದ 7 ವರ್ಷಗಳಲ್ಲಿ ಹಲವು ಶಿಕ್ಷಣ ಸಚಿವರು ಬದಲಾದರೂ ನೇಮಕಾತಿಯ ಭರವಸೆ ಈಡೇರಿಲ್ಲ. ಇದ್ದ ಸುಮಾರು 10 ಸಾವಿರ ಮಂದಿ ದೈಹಿಕ ಶಿಕ್ಷಣ ಶಿಕ್ಷಕರಲ್ಲಿ 7 ಸಾವಿರ ಮಂದಿ ನಿವೃತ್ತ್ತರಾದರೂ ಆ ಜಾಗಕ್ಕೆ ಬೇರೆಯವರನ್ನು ನಿಯೋಜಿಸಿಲ್ಲ. ವೈರುಧ್ಯ ಎಂದರೆ 2012ರಿಂದ 6 ಭಾಷೆಗಳಲ್ಲಿ ದೈಹಿಕ ಶಿಕ್ಷಣ ಪಠ್ಯ ಪುಸ್ತಕವನ್ನು ಮಕ್ಕಳಿಗೆ ನೀಡಲಾಗುತ್ತದೆ. ಆದರೆ ಮಕ್ಕಳು ಈ ಪಠ್ಯ ಪುಸ್ತಕವನ್ನು ಪ್ರತಿದಿನ ಶಾಲೆಗೆ ತಂದು ವಾಪಸ್ ಕೊಂಡೊಯ್ಯುತ್ತಿದ್ದಾರೆ. ಅಲ್ಲದೆ ರಾಜ್ಯಾದ್ಯಂತ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ದೈಹಿಕ ಶಿಕ್ಷಣ ಶಿಕ್ಷಕರ ಕೊರತೆ ಇದ್ದರೂ, ಸರಕಾರ ಇರುವ ಶಿಕ್ಷಕರನ್ನು ಸಹ-ಶಿಕ್ಷಕರ ಪಟ್ಟಿಗೆ ಸೇರಿಸಿ ವರ್ಗಾವಣೆಗೆ ಮುಂದಾಗಿರುವುದು ಬೋಧಕ ವಲಯದಲ್ಲಿ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ. ವಿಷಾದಕರ ಸಂಗತಿ ಎಂದರೆ ಶಿಕ್ಷಕರು ಮತ್ತು ಸರಕಾರದ ನಡುವೆ ಮಕ್ಕಳ ಕ್ರೀಡಾಸಕ್ತಿ ಬಲಿಯಾಗುತ್ತಿವೆ.
ಕ್ರೀಡೆಗಳಿಂದ ಮಕ್ಕಳಿಗೆ ನಾಯಕತ್ವ ಗುಣ, ಧೈರ್ಯ, ಪ್ರಾಮಾಣಿಕತೆ, ಸಹಕಾರ, ಶಿಸ್ತು, ಸಂಯಮ, ದೈಹಿಕ ಶಕ್ತಿ, ರೋಗನಿರೋಧಕ ಗುಣ, ಉತ್ತಮ ಆರೋಗ್ಯ ಸಿಗುತ್ತದೆ. ಆದರೆ ಮಕ್ಕಳು ಈ ಎಲ್ಲದರಿಂದ ವಂಚಿತರಾಗುತ್ತಿದ್ದಾರೆ. ಸರಕಾರ ಇನ್ನಾದರೂ ಈ ಸಮಸ್ಯೆಯ ಬಗ್ಗೆ ಗಮನಕೊಟ್ಟು ಅತೀ ಶೀಘ್ರದಲ್ಲಿ ಶಿಕ್ಷಕರ ನೇಮಕ ಮಾಡಿಕೊಂಡು ಮಕ್ಕಳ ಆರೋಗ್ಯಕರ ಬದುಕಿಗೆ ಸಹಕಾರಿಯಾಗಬೇಕಾಗಿದೆ.

Writer - -ನಬಿಸಾಬ್ ದೋಟಿಹಾಳ, ಕೊಪ್ಪಳ

contributor

Editor - -ನಬಿಸಾಬ್ ದೋಟಿಹಾಳ, ಕೊಪ್ಪಳ

contributor

Similar News