ಮೆಲ್ಕಾರ್: ಟ್ಯುಟೋರಿಯಲ್ ಶಿಕ್ಷಕನಿಂದ ವಿದ್ಯಾರ್ಥಿಗಳಿಗೆ ಹಲ್ಲೆ ಆರೋಪ; ಬೀದಿಯಲ್ಲಿ ಹೊಡೆದಾಡಿಕೊಂಡ ಯುವಕರು

Update: 2018-10-10 04:54 GMT

ಬಂಟ್ವಾಳ, ಅ.10: ಮೆಲ್ಕಾರ್ ಜಂಕ್ಷನ್ ನ ಎಮಿನೇಟ್ ಟ್ಯೂಟೋರಿಯಲ್ ಶಿಕ್ಷಣ ಸಂಸ್ಥೆಯಲ್ಲಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿಗಳಿಗೆ ಇಲ್ಲಿನ ಶಿಕ್ಷಕ ಇರ್ಶಾದ್ ಎಂಬಾತ ಹಲ್ಲೆ ನಡೆಸಿದ್ದಾನೆ ಎನ್ನಲಾದ ಪ್ರಕರಣಕ್ಕೆ ಸಂಬಂಧಿಸಿ ನಂದಾವರ ಹಾಗೂ ಶಾಂತಿಅಂಗಡಿ ಮೂಲದ ಯುವಕರು ಮಂಗಳವಾರ ಸಂಜೆ ಶಿಕ್ಷಣ ಸಂಸ್ಥೆಯ ಹೊರಭಾಗದ ಬೀದಿಯಲ್ಲಿ ಹೊಡೆದಾಡಿಕೊಂಡಿದ್ದಾರೆ. 

ಹೊಡೆದಾಟಕ್ಕೆ ಸಂಬಂಧಿಸಿದಂತೆ ಬಿ ಮೂಡ ಗ್ರಾಮದ ಶಾಂತಿಅಂಗಡಿ ನಿವಾಸಿ ಅಬೂಬಕರ್ ಎಂಬವರ ಪುತ್ರ ರಮ್ಜಿನ್(21) ಎಂಬವರು ನೀಡಿದ ದೂರಿನಂತೆ ಬಂಟ್ವಾಳ ನಗರ ಪೊಲೀಸರು ಮಂಗಳವಾರ ರಾತ್ರಿ ಪ್ರಕರಣ ದಾಖಲಿಸಿಕೊಂಡಿದ್ದು, ಟ್ಯುಟೋರಿಯಲ್ ಮಾಲಕ ಇರ್ಶಾದ್ ಎಂಬಾತನನ್ನು ಪೊಲೀಸರು ರಾತ್ರಿಯೇ ವಶಕ್ಕೆ ಪಡೆದುಕೊಂಡಿದ್ದು, ವಿಚಾರಣೆ ನಡೆಸುತ್ತಿದ್ದಾರೆ. 

ದೂರುದಾರ ರಮ್ಜಿನ್‍ನ ಸ್ನೇಹಿತರಾದ ನಿಯಾನ್, ನಿಝಾನ್, ಸಲ್ಮಾನ್ ಫಾರಿಶ್ ಹಾಗೂ ಮುಹಮ್ಮದ್ ಮುಸ್ತಫಾ ಅವರು ಮೆಲ್ಕಾರಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಇರ್ಶಾದ್ ಮಾಲಕತ್ವದ ಎಮಿನೇಟ್ ಟ್ಯುಟೋರಿಯಲ್ ನಲ್ಲಿ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದು, ಈ ಪೈಕಿ ಮೂವರ ಮೇಲೆ ಸೋಮವಾರ ಇರ್ಶಾದ್ ಹಲ್ಲೆ ನಡೆಸಿದ್ದರೆಲಾಗಿದೆ. ಈ ಸಂಬಂಧ ರಮ್ಜಿನ್ ಮಂಗಳವಾರ ಸಂಜೆ ಮುಸ್ತಫಾ, ಇಬ್ರಾಹಿಂ ಹಾಗೂ ಅರ್ಫಾಝ್ ಎಂಬವರ ಜೊತೆ ಸೇರಿ ಇರ್ಶಾದ್ ಅವರಲ್ಲಿ ವಿಚಾರಿಸುತ್ತಿದ್ದ ವೇಳೆ ಇಲ್ಯಾಸ್, ಸುಹೈಲ್, ಇರ್ಶಾದ್ ಹಾಗೂ ಇರ್ಫಾನ್ ಎಂಬವರು ಹಲ್ಲೆ ನಡೆಸಿದ್ದಾರೆ ಎಂದು ದೂರಲಾಗಿದೆ. ಘಟನಾ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಬಂಟ್ವಾಳ ನಗರ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿ ಗುಂಪನ್ನು ಚದುರಿಸಿ ಪರಿಸ್ಥಿತಿ ನಿಯಂತ್ರಿಸಿದ್ದಾರೆ. ಹಲ್ಲೆಯಿಂದ ರಮ್ಜಿನ್ ಹಾಗೂ ಮುಸ್ತಫಾ ಅವರ ತಲೆಗೆ ಗಾಯಗಳಾಗಿದ್ದು, ಬಂಟ್ವಾಳ ಸರಕಾರಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ. 

ಪ್ರಕರಣಕ್ಕೆ ಸಂಬಂಧಿಸಿ ಬಂಟ್ವಾಳ ನಗರ ಠಾಣೆಯಲ್ಲಿ ಅಪರಾಧ ಕ್ರಮ ಸಂಖ್ಯೆ 399/2018 ಕಲಂ 323, 324, 504 ಜೊತೆಗೆ 149 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ ಎಂದು ಜಿಲ್ಲಾ ಎಸ್ಪಿ ರವಿಕಾಂತೇಗೌಡ ಮಾಹಿತಿ ನೀಡಿದ್ದಾರೆ.

ಟ್ಯುಟೋರಿಯಲ್ ಮಾಲಕ ಇರ್ಶಾದ್‍ನನ್ನು ಮಂಗಳವಾರ ರಾತ್ರಿಯೇ ವಶಕ್ಕೆ ಪಡೆದುಕೊಂಡಿರುವ ಪೊಲೀಸರು ಉಳಿದ ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News