ತಿತ್ಲಿ ಚಂಡಮಾರುತದ ಪ್ರಭಾವ: ಕರಾವಳಿಯ ಕಡಲು ಪ್ರಕ್ಷುಬ್ಧ

Update: 2018-10-10 12:55 GMT

ಮಂಗಳೂರು, ಅ.10: ಬಂಗಾಳಕೊಲ್ಲಿಯಲ್ಲಿ ಉಂಟಾದ ವಾಯುಭಾರ ಕುಸಿತದ ಪರಿಣಾಮ ಆಂಧ್ರ ಮತ್ತು ಒಡಿಶಾದಲ್ಲಿ ಕಾಣಿಸಿಕೊಂಡ ತಿತ್ಲಿ ಚಂಡಮಾರುತದ ಪ್ರಭಾವ ಪಶ್ಚಿಮ ಕರಾವಳಿಯ ಮೇಲೂ ಆಗಿದೆ.

ಬುಧವಾರ ಬೆಳಗ್ಗಿನಿಂದಲೇ ಪಣಂಬೂರು, ಉಳ್ಳಾಲ, ಸೋಮೇಶ್ವರ-ಉಚ್ಚಿಲದ ಹಲವು ಕಡೆ ಕಡಲಿನ ಅಬ್ಬರ ಮಿತಿ ಮೀರಿದೆ. ಈ ಹಿಂದೆ ಎಂದೂ ಕೂಡಾ ಕಂಡರಿಯದಂತಹ ವಾತಾವರಣ ಕಡಲ ತೀರದಲ್ಲಿ ಕಂಡು ಬಂದಿದೆ. ಸಮುದ್ರದ ಅಲೆಗಳು ಭಾರೀ ಎತ್ತರಕ್ಕೆ ಅಪ್ಪಳಿಸುತ್ತಿದ್ದು, ಮೀನುಗಾರರು ಭಯಭೀತಿಗೊಂಡು ಸಮುದ್ರಕ್ಕಿಳಿಯಲಿಲ್ಲ ಎಂದು ತಿಳಿದು ಬಂದಿದೆ.

ಆ ಹಿನ್ನಲೆಯಲ್ಲಿ ಪಣಂಬೂರು ಬೀಚ್‌ನಲ್ಲಿ ಮುಂಜಾಗ್ರತಾ ಕ್ರಮ ವಹಿಸಲು ಹವಾಮಾನ ಇಲಾಖೆ ಸೂಚಿಸಿದೆ. ಈ ನಡುವೆ ಕರಾವಳಿಯಲ್ಲಿ ಭಾರೀ ಮಳೆಯಾಗುವ ಸಂಭವವೂ ಇದೆ ಎನ್ನಲಾಗಿದೆ. ಬುಧವಾರ ಬೆಳಗ್ಗೆ 10 ಗಂಟೆಯ ಸುಮಾರಿಗೆ ಮೋಡ ಕವಿದ ವಾತಾವರಣ ಕಂಡು ಬಂದರೂ ಕೂಡಾ ಬಳಿಕ ಸಹಜ ಸ್ಥಿತಿಗೆ ತಲುಪಿದೆ. ಅ.13ರವರೆಗೆ ಮೀನುಗಾರರು ಸಮುದ್ರಕ್ಕೆ ತೆರಳದಂತೆ ಸೂಚನೆ ನೀಡಲಾಗಿದೆ.

ಸೋಮೇಶ್ವರ ಉಚ್ಚಿಲ ಸಮೀಪದ ಪೆರಿಬೈಲ್ನಲ್ಲಿ ಕಡಲಿನ ಅಲೆಗಳು ಸಮುದ್ರ ಪಕ್ಕದ ರಸ್ತೆಯನ್ನೂ ದಾಟಿ ಮುನ್ನುಗ್ಗಿವೆ. ಅಲ್ಲದೆ ನಾಲ್ಕೈದು ಮನೆಯೊಳಗೆ ನೀರು ನುಗ್ಗಿವೆ. ಈ ಅನಿರೀಕ್ಷಿತ ಘಟನೆಯಿಂದ ಸ್ಥಳೀಯರು ಆತಂಕಿತರಾಗಿದ್ದು, ಸೂಕ್ತ ಕ್ರಮಕ್ಕೆ ಸ್ಥಳೀಯರು ಮನವಿ ಮಾಡಿದ್ದಾರೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News