ಸಮೀರ್ ಕೊಲೆ ಬಳಿಕ ಚಿನ್ನಾಭರಣ ಕದ್ದೊಯ್ದ ಫಿರ್ದೌಸ್‌: ಪೊಲೀಸ್ ಆಯುಕ್ತರಿಗೆ ದೂರು

Update: 2018-10-10 13:39 GMT

ಮಂಗಳೂರು, ಅ.10: ಗಂಜಿಮಠ ನಿವಾಸಿ ಸಮೀರ್ ಕೊಲೆ ಪ್ರಕರಣದ ಆರೋಪಿಗಳು ಒಂದು ವೇಳೆ ಜಾಮೀನಿನಲ್ಲಿ ಬಿಡುಗಡೆಯಾದರೆ ಮತ್ತೆ ಇಂತಹ ದುಷ್ಕೃತ್ಯದಲ್ಲಿ ತೊಡಗುತ್ತಾರೆ. ಹಂತಕರಿಗೆ ಜೀವಾವಧಿ ಶಿಕ್ಷೆಯನ್ನೇ ನೀಡಬೇಕು ಎಂದು ಒತ್ತಾಯಿಸಿ ಸಮೀರ್ ಕುಟುಂಬಸ್ಥರು ನಗರ ಪೊಲೀಸ್ ಆಯುಕ್ತರಿಗೆ ದೂರು ಸಲ್ಲಿಸಿದರು.

ಮುಹಮ್ಮದ್ ಸಮೀರ್ ಕಾಣೆಯಾದ ಬಗ್ಗೆ ದೂರು ನೀಡಲು ಹೋದ ಸಂದರ್ಭ ಫಿರ್ದೌಸ್ ತನ್ನ ಹಾಗೂ ಮನೆಯಲ್ಲಿದ್ದ ಚಿನ್ನಾಭರಣಗಳನ್ನು ಕದ್ದೊಯ್ದಿದ್ದು, ತಮ್ಮ ಕುಟುಂಬಕ್ಕೆ ನ್ಯಾಯ ದೊರಕಿಸಿ ಕೊಡಬೇಕು ಎಂದು ಒತ್ತಾಯಿಸಿದರು.

ಮೃತ ಸಮೀರ್ ತನ್ನ ಹಿರಿಯ ಪುತ್ರನಾಗಿದ್ದು, ಸೌದಿ ಅರೆಬಿಯಾದಲ್ಲಿ ಕೆಲಸ ಮಾಡಿಕೊಂಡಿದ್ದ. ಆತನಿಗೆ ಕಳೆದ 3 ವರ್ಷದ ಹಿಂದೆ ಫಿರ್ದೌಸ್‌ಳೊಂದಿಗೆ ಮದುವೆ ಮಾಡಿಕೊಡಲಾಗಿತ್ತು. ದಂಪತಿಗೆ ಹೆಣ್ಣು ಮಗುವಿದೆ. ಆ.17ರಂದು ಸಮೀರ್ ಊರಿಗೆ ವಾಪಸಾಗಿದ್ದ. ಸೆ.4ರಂದು ನನ್ನ ಸಣ್ಣ ಮಗಳಾದ ಅಸ್ಮಳಿಂದ 22 ಪವನ್ ಚಿನ್ನವನ್ನು ಫಿರ್ದೌಸ್‌ ತೆಗೆದುಕೊಂಡು ಹೋಗಿದ್ದಳು. ಚಿನ್ನಾಭರಣವನ್ನು ಹಿಂದಿರುಗಿಸಿಲ್ಲ ಎಂದು ಸಮೀರ್‌ನ ತಂದೆ ಅಹ್ಮದ್‌ ಸಾಹೇಬ್ ಮನವಿಯಲ್ಲಿ ದೂರಿದರು.

ಸೆ.13ರಂದು ಸಮೀರ್ ತನ್ನ ಪತ್ನಿ ಫಿರ್ದೌಸ್ ಮತ್ತು ಮಗುವಿನೊಂದಿಗೆ ತಿರುಗಾಡಲು ಬೆಂಗಳೂರಿಗೆ ಹೋಗಿದ್ದು, ಸೆ.15ರಂದು ತಾಯಿಗೆ ಕರೆ ಮಾಡಿದ್ದಾರೆ. ನಂತರ ಅವರು ನಮ್ಮ ಸಂಪರ್ಕಕ್ಕೆ ಬಂದಿಲ್ಲ. ಸೆ.18ರಂದು ಫಿರ್ದೌಸ್ ತನ್ನ ಮಗುವಿನೊಂದಿಗೆ ಆಕೆಯ ತಂದೆಯ ಮನೆಯಾದ ಕಾಪುವಿಗೆ ತೆರಳಿದ್ದು, ಸಮೀರ್‌ನ ಬಗ್ಗೆ ಯಾವುದೇ ಸಮರ್ಪಕ ಮಾಹಿತಿ ನೀಡಿಲ್ಲ ಎಂದು ಮನವಿಯಲ್ಲಿ ತಿಳಿಸಿದರು.

ಸಮೀರ್ ಕಾಣೆಯಾದ ಬಗ್ಗೆ ನಾವು ಸೆ.19ರಂದು ದೂರು ನೀಡಲು ಹೋದ ಸಂದರ್ಭ ಆಕೆ ತನ್ನ ಹಾಗೂ ನನ್ನ ಮಗಳಾದ ಅಸ್ಮಳ 22 ಪವನ್ ಚಿನ್ನಾಭರಣಗಳನ್ನು ಕಳವು ಮಾಡಿಕೊಂಡು ಪರಾರಿಯಾಗಿದ್ದಾಳೆ. ನಂತರ ನಮಗೆ ಸಮೀರ್ ಕೊಲೆ ತಮಿಳುನಾಡಿನ ಕೊಡೈಕೆನಾಲ್ ರಸ್ತೆಯಲ್ಲಿ ಆದ ಬಗ್ಗೆ ಮಾಹಿತಿ ತಮಿಳುನಾಡಿನ ದೇವದಾನಪಟ್ಟಿ ಪೊಲೀಸರಿಂದ ದೊರೆಯಿತು ಎಂದರು.

ಬಳಿಕ ನನ್ನ ಇನ್ನೊಬ್ಬ ಪುತ್ರ ಮುಹಮ್ಮದ್ ಝಹೀರ್ ಸಂಶಯಗೊಂಡು ಫಿರ್ದೌಸ್ ಮತ್ತು ಆಕೆಯ ಪ್ರಿಯಕರ ಆಸಿಫ್ ವಿರುದ್ಧ ದೂರು ಸಲ್ಲಿಸಲಾಯಿತು. ಸಾಂದರ್ಭಿಕ ಸನ್ನಿವೇಶ ಮತ್ತು ಸಿಸಿಟಿವಿಯ ಫೂಟೇಜ್‌ಗಳನ್ನು ನೋಡುವಾಗ ಸಮೀರ್‌ನನ್ನು ಕೊಲೆಗೈದಿರುವುದು ಫಿರ್ದೌಸ್ ಮತ್ತು ಆಸಿಫ್ ಎನ್ನುವುದು ಖಚಿತವಾಗಿ ತಿಳಿದುಬಂದಿದೆ. ಸದ್ಯ ಆರೋಪಿಗಳಿಬ್ಬರೂ ಪೊಲೀಸ್ ಕಸ್ಟಡಿಯಲ್ಲಿದ್ದಾರೆ. ಆಕೆ ತೆಗೆದುಕೊಂಡು ಹೋಗಿರುವ ಚಿನ್ನಾಭರಣಗಳನ್ನು ಹಿಂದಿರುಗಿಸುವಂತೆ ನಗರ ಪೊಲೀಸ್ ಆಯುಕ್ತರಲ್ಲಿ ಮನವಿ ಮಾಡಿದರು.

ಮನವಿ ಸ್ವೀಕರಿಸಿದ ಪೊಲೀಸ್ ಆಯುಕ್ತ ಟಿ.ಆರ್.ಸುರೇಶ್ ಮಾತನಾಡಿ, ಪ್ರಕರಣಕ್ಕೆ ಸಂಬಂಧಿಸಿದಂತೆ ನಮ್ಮ ವ್ಯಾಪ್ತಿಯಲ್ಲಿ ಬರುವುದಾದಲ್ಲಿ ತನಿಖೆ ನಡೆಸುತ್ತೇವೆ ಎಂದು ತಿಳಿಸಿದರು. 

ಮನವಿ ಸಲ್ಲಿಸುವ ಸಂದರ್ಭದಲ್ಲಿ ಸಮೀರ್‌ನ ತಂದೆ ಅಹ್ಮದ್‌ ಸಾಹೇಬ್, ಶಾಕೀರ್ ಹುಸೈನ್, ಸಮೀನಾ ಬಾನು ಮತ್ತಿತರರು ಇದ್ದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News