ಮೀಟರ್ ಬಡ್ಡಿಮುಕ್ತ ಕರ್ನಾಟಕಕ್ಕಾಗಿ ‘ಬಡವರ ಬಂಧು’ ಯೋಜನೆ ಶೀಘ್ರ ಜಾರಿ: ಸಚಿವ ಬಂಡೆಪ್ಪ ಕಾಂಶಪೂರ್

Update: 2018-10-10 14:02 GMT

ಮಂಗಳೂರು, ಅ.10: ಮೀಟರ್ ಬಡ್ಡಿ ಮುಕ್ತ ಕರ್ನಾಟಕಕ್ಕಾಗಿ ಬೀದಿಬದಿ ವ್ಯಾಪಾರಿಗಳಿಗೆ ಸಾಲ ಸೌಲಭ್ಯ ನೀಡುವ ‘ಬಡವರ ಬಂಧು’ ಯೋಜನೆಗೆ ದೀಪಾವಳಿಗೆ ಮೊದಲು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಚಾಲನೆ ನೀಡಲಿದ್ದಾರೆ ಎಂದು ಸಹಕಾರ ಸಚಿವ ಬಂಡೆಪ್ಪ ಕಾಂಶಪೂರ್ ತಿಳಿಸಿದರು. 

ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನಲ್ಲಿ ಇಂದು ಪ್ರಗತಿ ಪರಿಶೀಲನೆ ನಡೆಸಿದ ಬಳಿಕ ಸುದ್ದಿಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡುತ್ತಿದ್ದರು.

ಈ ಯೋಜನೆಯಡಿ 2,000 ರೂ.ನಿಂದ 10,000 ರೂ.ವರೆಗೆ ಬೀದಿಬದಿ ವ್ಯಾಪಾರಿಗಳಿಗೆ ಮೊಬೈಲ್ ಸೇವೆ ಮೂಲಕ ಬಡ್ಡಿರಹಿತ ಸಾಲ ಸೌಲಭ್ಯವನ್ನು ಒದಗಿಸಲಾಗುವುದು. ಇದರಂತೆ ಬೆಂಗಳೂರಿನ 5,000 ಹಾಗೂ ಮಂಗಳೂರಿನ 3,000 ಫಲಾನುಭವಿಗಳು ಸೇರಿದಂತೆ ಒಟ್ಟು ರಾಜ್ಯದಲ್ಲಿ 53,000 ಬೀದಿಬದಿ ವ್ಯಾಪಾರಸ್ಥರಿಗೆ ಈ ಯೋಜನೆಯ ಪ್ರಯೋಜನ ಲಭ್ಯವಾಗಲಿದೆ ಎಂದು ಅವರು ಹೇಳಿದರು.

ಕಾಯಕ ಯೋಜನೆಗೂ ಶೀಘ್ರ ಚಾಲನೆ

ಸಹಕಾರ ಇಲಾಖೆಯು ಸ್ವಸಹಾಯ ಗುಂಪುಗಳು ಉದ್ಯಮ ಆರಂಭಿಸಲು 'ಕಾಯಕ ಯೋಜನೆ'ಯ ಮೂಲಕ 10 ಲಕ್ಷ ರೂ. ಸಾಲವನ್ನು ಒದಗಿಸಲಿದೆ. 5 ಲಕ್ಷ ರೂ.ಶೂನ್ಯ ಬಡ್ಡಿದರದಲ್ಲಿ ಹಾಗೂ ಉಳಿದ 5 ಲಕ್ಷ ರೂ. ಶೇ. 4ರ ಬಡ್ಡಿ ದರದಲ್ಲಿ ಫಲಾನುಭವಿಗಳಿಗೆ ಲಭ್ಯವಾಗಲಿದ್ದು, ಶೀಘ್ರವೇ ಎಲ್ಲಾ ಜಿಲ್ಲೆಗಳಲ್ಲಿಯೂ ಈ ಯೋಜನೆಗೆ ಚಾಲನೆ ದೊರೆಯಲಿದೆ ಎಂದು ಸಚಿವರು ಹೇಳಿದರು.

ರಾಜ್ಯದಲ್ಲಿ ಸಮ್ಮಿಶ್ರ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಸಾಲ ಮನ್ನಾ ಯೋಜನೆಯಡಿ ಜಿಲ್ಲೆಯ ರೈತರ 713 ಕೋಟಿ ರೂ. ಸಾಲ ಮನ್ನಾ ಆಗಲಿದೆ. ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಸರಕಾರದ ಸಂದರ್ಭ ಸಾಲ ಮನ್ನಾದಡಿ ಜಿಲ್ಲೆಯ 380 ಕೋಟಿ ರೂ. ರೈತರ ಸಾಲ ಮನ್ನಾ ಆಗಿದೆ. ಪ್ರಸಕ್ತ ಸಾಲಿನ ಸಾಲ ಮನ್ನಾ ಯೋಜನೆಗೆ ಸಂಬಂಧಿಸಿ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿನ ಮಾಹಿತಿಯನ್ನು ಸರಕಾರ ಪಡೆಯುತ್ತಿದೆ ಎಂದು ಸಚಿವರು ತಿಳಿಸಿದರು.

ಪ್ಯಾಕ್ಸ್‌ಗಳಲ್ಲಿ ಏಕರೂಪದ ಸಾಫ್ಟ್‌ವೇರ್ ಅಳವಡಿಕೆ

ದ.ಕ. ಜಿಲ್ಲೆಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಬ್ಯಾಂಕ್ (ಪ್ಯಾಕ್ಸ್)ಗಳಲ್ಲಿ ಈಗಾಗಲೇ ಕಾಮನ್ ಸಾಫ್ಟ್‌ವೇರ್ ಅಳವಡಿಸಲಾಗಿದ್ದು, ರಾಜ್ಯದ ಎಲ್ಲಾ ಪ್ಯಾಕ್ಸ್‌ಗಳಲ್ಲೂ ಈ ವ್ಯವಸ್ಥೆಯನ್ನು ಅಳವಡಿಸಲು ಚಿಂತನೆ ನಡೆದಿದೆ. ಈ ಬಗ್ಗೆ ಇಲಾಖೆಯು ಮುಂದಿನ 15 ದಿನಗಳಲ್ಲಿ ವರದಿ ನೀಡಲಿದ್ದು, ಬಳಿಕ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ಬಂಡೆಪ್ಪ ಕಾಂಶಪೂರ್ ತಿಳಿಸಿದರು.

ಸಹಕಾರಿ ಕ್ಷೇತ್ರದಡಿ ಈಗಾಗಲೇ ಬ್ಯಾಂಕಿಂಗ್ ವ್ಯವಸ್ಥೆ ಹಾಗೂ ಕೆಎಂಎಫ್ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಮುಂದೆ ವಿವಿಧ ಕ್ಷೇತ್ರಗಳಿಗೆ ಸಹಕಾರಿ ಕ್ಷೇತ್ರವನ್ನು ವ್ಯಾಪಿಸಲು ಉತ್ತೇಜನ ನೀಡಬೇಕಾಗಿದೆ ಎಂದು ಸಚಿವರು ಅಭಿಪ್ರಾಯಿಸಿದರು.

ಕಳೆದ ಸಾಲಿನ ಸಾಲ ಮನ್ನಾ ಯೋಜನೆಯಡಿ ದ.ಕ. ಜಿಲ್ಲೆಯ 380 ಕೋಟಿ ರೂ.ಗಳಲ್ಲಿ 2 ಕೋಟಿ ರೂ.ಗಳಷ್ಟೇ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಬ್ಯಾಂಕ್‌ಗಳಿಗೆ ಪಾವತಿಯಾಗಬೇಕಿದೆ. ಪ್ರಸಕ್ತ ಸಾಲಿನ ಸಾಲ ಮನ್ನಾ ಯೋಜನೆಗೆ ಸಂಬಂಧಿಸಿ ದಾಖಲೆಗಳನ್ನು ಸಲ್ಲಿಸಲು ರೈತರಿಗೆ ಸೂಚಿಸಲಾಗಿದೆ. ದಾಖಲೆಯಾಗಿ ಆಧಾರ್ ಕಾರ್ಡ್ ಹಾಗೂ ರೇಶನ್ ಕಾರ್ಡ್ ಮಾತ್ರವೇ ಕೇಳಲಾಗುತ್ತಿದೆ ಎಂದು ಸುದ್ದಿಗಾರರ ಪ್ರಶ್ನೆಗೆ ಸಚಿವರು ಸ್ಪಷ್ಟಪಡಿಸಿದರು.

ದ.ಕ. ಜಿಲ್ಲೆಯ ಕೃಷಿ ಪತ್ತಿನ ಸಹಕಾರಿ ಬ್ಯಾಂಕ್‌ನ ನೌಕರರು ಸೇರಿದಂತೆ ದ.ಕ. ಜಿಲ್ಲಾ ಕೇಂದ್ರ ಬ್ಯಾಂಕ್ ವತಿಯಿಂದ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಒಟ್ಟು 1 ಕೋಟಿ ರೂ.ಗಳನ್ನು ನೀಡಿದ್ದು, ಅಭಿನಂದನೆ ಸಲ್ಲಿಸುವುದಾಗಿ ಸಚಿವರು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ಅಧ್ಯಕ್ಷ ಡಾ.ಎಂ.ಎನ್.ರಾಜೇಂದ್ರ ಕುಮಾರ್, ರಾಜ್ಯ ಕಾಪೊರೇಟಿವ್ ಸೊಸೈಟಿಗಳ ರಿಜಿಸ್ಟ್ರಾರ್ ಎಂ.ಕೆ.ಅಯ್ಯಪ್ಪ, ಜಿಲ್ಲಾ ಸಹಕಾರಿ ಸಂಘಗಳ ಉಪ ನಿಬಂಧಕ ಬಿ.ಕೆ.ಸಲೀಂ, ಎಸ್‌ಸಿಡಿಸಿಸಿ ಬ್ಯಾಂಕ್‌ನ ಪದಾಧಿಕಾರಿಗಳು, ನಿರ್ದೇಶಕರು ಉಪಸ್ಥಿತರಿದ್ದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News