ಮಾನಸಿಕ ಸಮಸ್ಯೆಗಳಿಗೆ ವೈಜ್ಞಾನಿಕ ನೆಲೆಯಲ್ಲಿ ಪರಿಹಾರ ಅಗತ್ಯ: ಜಿ. ರಾಜಶೇಖರ್

Update: 2018-10-10 11:25 GMT

ಉಡುಪಿ, ಅ.10: ಮಾನಸಿಕ ಆರೋಗ್ಯದಲ್ಲಿ ದೇವರು, ದ್ವೆವ, ನಂಬಿಕೆ ಯಾವುದಕ್ಕೂ ಸ್ಥಾನ ಇಲ್ಲ. ಮಾನಸಿಕ ಆರೋಗ್ಯ ಎಂಬುದು ಒಂದು ವಿಜ್ಞಾನ. ಹಾಗಾಗಿ ನಾವು ಮಾನಸಿಕ ಸಮಸ್ಯೆಗಳನ್ನು ವೈಜ್ಞಾನಿಕ ನೆಲೆಯಲ್ಲಿ ಪರಿಹಾರ ಕಂಡು ಕೊಳ್ಳಬೇಕು ಎಂದು ಹಿರಿಯ ಚಿಂತಕ ಜಿ.ರಾಜಶೇಖರ್ ಹೇಳಿದ್ದಾರೆ.

ಉಡುಪಿ ಡಾ.ಎ.ವಿ.ಬಾಳಿಗಾ ಸ್ಮಾರಕ ಆಸ್ಪತ್ರೆಯ ಆಶ್ರಯದಲ್ಲಿ ಆಸ್ಪತ್ರೆಯ ಕಮಲ್ ಎ.ಬಾಳಿಗಾ ಸಭಾಂಗಣದಲ್ಲಿ ಬುಧವಾರ ಆಯೋಜಿಸಲಾದ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆಯ ಪ್ರಯುಕ್ತ ‘ಬದಲಾಗುತ್ತಿರುವ ಜಗತ್ತಿನಲ್ಲಿ ಯುವಜನತೆ ಮತ್ತು ಮಾನಸಿಕ ಆರೋಗ್ಯ’ ಮಾಹಿತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.

ದೇಹಕ್ಕೆ ಮಾತ್ರವಲ್ಲ ಮನಸ್ಸಿಗೂ ಆರೋಗ್ಯದ ಸಮಸ್ಯೆಗಳು, ವ್ಯಾದಿಗಳು ಕೂಡ ಇರುತ್ತವೆ. ಪರಿಹಾರ ಇಲ್ಲದ ಯಾವ ರೋಗವೂ ಇಲ್ಲ. ಸಂಕಲ್ಪ ಇದ್ದರೆ ಎಲ್ಲ ರೋಗಕ್ಕೆ ಪರಿಹಾರ ಕಂಡುಕೊಳ್ಳಬಹುದು. ದೇಹ ರೋಗಗಳಿಗೆ ಪರಿಹಾರ ಕಂಡುಕೊಳ್ಳುವ ಹಾಗೆ ಮನಸ್ಸಿನ ರೋಗ, ಸಮಸ್ಯೆಗಳಿಗೆ, ಸಂಕಷ್ಟಗಳಿಗೆ ಪರಿಹಾರ ಕೂಡ ಇದೆ. ಈ ಬಗ್ಗೆ ಜನರಿಗೆ ಅರ್ಥ ಮಾಡಿಸುವ ಕೆಲಸ ಮಾಡಬೇಕು ಎಂದರು.

ವಿಶ್ವ ಮಾನಸಿಕ ಆರೋಗ್ಯದ ಜೊತೆ ಶಿವರಾಮ ಕಾರಂತರ ಜನ್ಮದಿನವನ್ನು ಕೂಡ ನಾವು ಆಚರಿಸಬೇಕಾದ ಅಗತ್ಯವಿದೆ. ವೈಜ್ಞಾನಿಕ ಮನೋಧರ್ಮವನ್ನು ರೂಢಿಸಿಕೊಂಡ ಕಾರಂತರು ಮನಸ್ಸಿನ ಆರೋಗ್ಯದ ಸಮಸ್ಯೆಯನ್ನು ಆರೋಗ್ಯದ ಸಮಸ್ಯೆ ಎಂಬುದಾಗಿ ಗುರುತಿಸಿದ್ದಾರೆಯೇ ಹೊರತು ಅದು ವಿಕೃತಿ, ಪೂರ್ವ ಜನ್ಮದ ಪಾಪ, ಪರಂಪರೆಯಿಂದ ಬಂದ ಶಾಪ ಅಂತ ನಂಬುದಿಲ್ಲ. ಶರೀರದ ಮುಂದುವರೆದ ಭಾಗವೇ ಮನಸ್ಸು. ಮನಸ್ಸಿನ ಇನ್ನೊಂದು ಮುಖವೇ ಶರೀರ. ಹಾಗಾಗಿ ಅವು ಎರಡೂ ಒಂದೇ ಎಂಬುದಾಗಿ ಕಾರಂತರು ತಮ್ಮ ‘ಮೈಮನ ಗಳ ಸುಳಿಯಲ್ಲಿ’ ಕಾದಂಬರಿಯಲ್ಲಿ ಹೇಳುತ್ತಾರೆ ಎಂದು ಅವರು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಡಾ.ಎ.ವಿ.ಬಾಳಿಗಾ ಸಮೂಹ ಸಂಸ್ಥೆಗಳ ನಿರ್ದೇಶಕ ಡಾ. ಪಿ.ವಿ.ಭಂಡಾರಿ ಮಾತನಾಡಿ, 14ರ ಹರೆಯದವರಲ್ಲಿ ಮಾನಸಿಕ ಕಾಯಿಲೆ ಗಳು ಶೇ.50ರಷ್ಟು ಕಾಣಿಸಿಕೊಳ್ಳುತ್ತದೆ. ಜನಸಾಮಾನ್ಯರಲ್ಲಿ ಮುಂದೆ ನ್ಯೂನತೆಗಳು ಕಾಣಿಸಿಕೊಳ್ಳಲು ಮೂರನೆ ಮುಖ್ಯ ಕಾರಣ ಖಿನ್ನತೆ ಆಗಲಿದೆ ಎಂದು ವರ್ಲ್ಡ್ ಫೆಡರೇಶನ್ ಆಫ್ ಮೆಂಟಲ್ ಹೆಲ್ತ್ ಅಧ್ಯಯನ ಹೇಳುತ್ತದೆ. 13ರಿಂದ 25 ವರ್ಷಗಳೊಳಗಿನ ಮಕ್ಕಳು ಸಾಯಲು ಪ್ರಮುಖ ಎರಡನೆ ಕಾರಣ ಆತ್ಮಹತ್ಯೆ. ಮೊಬೈಲ್, ಹಣ, ಮಾಧ್ಯಮ, ಮೋಟಾರ್ ಬೈಕ್‌ಗಳು ಇಂದು ಯುವ ಜನತೆಯ ಮಾನಸಿಕ ಆರೋಗ್ಯ ಹಾಳು ಮಾಡುತ್ತಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಬ್ರಹ್ಮಾವರ ರೋಟರಿ ಕ್ಲಬ್ ಅಧ್ಯಕ್ಷ ಸುಧೀರ್ ಶೆಟ್ಟಿ, ಶಂಕರಪುರ ರೋಟರಿ ಅಧ್ಯಕ್ಷ ಚಂದ್ರ ಪೂಜಾರಿ, ಸಮಾಜ ಸೇವಕರಾದ ವಿಶು ಶೆಟ್ಟಿ, ನಿತ್ಯಾನಂದ ಒಳಕಾಡು ಅವರನ್ನು ಸನ್ಮಾನಿಸಲಾಯಿತು. ಮನೋವೈದ್ಯ ಡಾ.ದೀಪಕ್ ಮಲ್ಯ, ಮನೋ ಸಾಮಾಜಿಕ ಸಲಹೆಗಾರರಾದ ಡಾ.ಕೆ.ಎಲ್. ಲತಾ ಉಪಸ್ಥಿತರಿದ್ದರು. ಗಿರೀಶ್ ಎಂ.ಎನ್. ಸ್ವಾಗತಿಸಿದರು. ಸುಚಿತ್ರಾ ವಂದಿಸಿದರು. ನಾಗರಾಜ್ ಹಾಗೂ ಪಂಚಮಿ ಕಾರ್ಯಕ್ರಮ ನಿರೂಪಿಸಿದರು.

ಶಿವರಾಮ ಕಾರಂತರು ತನ್ನ ಜೀವನದ ಪ್ರತಿಯೊಂದು ಸಮಸ್ಯೆಯನ್ನು ವೈಜ್ಞಾನಿಕ ನೆಲೆಯಲ್ಲಿ ವಿಶ್ಲೇಷಣೆ ಮಾಡಿ ಪರಿಹಾರ ಕಂಡು ಕೊಳ್ಳುತ್ತಿದ್ದರು. ವಿಶ್ಲೇಷಣೆ, ಪರಿಶೀಲನೆ, ಪ್ರಯೋಗಿಸದೆ ಕೇವಲ ಗುರು ಹಿರಿಯರು, ಮಠಾ ಧೀಶರು, ಧರ್ಮದ ಮುಖ್ಯಸ್ಥರು ಹೇಳಿದರು ಎಂಬ ಕಾರಣಕ್ಕೆ ಅವರು ಯಾವ ಮಾತನ್ನು ಹೇಳಿಕೆಯನ್ನು ಅವರು ನಂಬುತ್ತಿರಲಿಲ್ಲ. ತನ್ನ ಅನುಭವದಲ್ಲಿ ಕಂಡುಕೊಂಡ ಸತ್ಯಕ್ಕೆ ಅವು ಕಡೆಯವರೆಗೂ ನಿಷ್ಠರಾಗಿದ್ದರು. ಕೊನೆಯವರೆಗೂ ಅವರು ದೇವರನ್ನು ನಂಬದ ಆಸ್ತಿಕನಾಗಿಯೇ ಉಳಿದುಕೊಂಡಿದ್ದರೆಂದು ಚಿಂತಕ ಜಿ.ರಾಜಶೇಖರ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News