ಅ.11ರಂದು ‘ಉಡುಪಿ ಹೆಲ್ಪ್‌ಲೈನ್’ ಸ್ವಯಂ ಸೇವಾ ಸಂಸ್ಥೆ ಉದ್ಘಾಟನೆ

Update: 2018-10-10 12:48 GMT

ಉಡುಪಿ, ಅ.10: ಶುಭ ಸಮಾರಂಭಗಳಲ್ಲಿ ಹೆಚ್ಚುವರಿಯಾಗಿ ಉಳಿದ ಆಹಾರವನ್ನು ಅಗತ್ಯ ಇರುವವರಿಗೆ ತಲುಪಿಸುವ ಉದ್ದೇಶದಿಂದ ಹುಟ್ಟಿಕೊಂಡ ‘ಉಡುಪಿ ಹೆಲ್ಪ್‌ಲೈನ್’ ಸ್ವಯಂ ಸೇವಾ ಸಂಸ್ಥೆಯ ಉದ್ಘಾಟನಾ ಸಮಾರಂಭವು ಅ.11ರಂದು ಬೆಳಗ್ಗೆ 11:30ಕ್ಕೆ ಬ್ರಹ್ಮಗಿರಿ ಲಯನ್ಸ್ ಭವನದಲ್ಲಿ ನಡೆಯಲಿದೆ.

ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಸ್ಥೆಯ ಮಾಧ್ಯಮ ಉಸ್ತುವಾರಿ ಸ್ಟೀವನ್ ಕುಲಾಸೋ ಉದ್ಯಾವರ, ವಾಟ್ಸಾಪ್ ಗ್ರೂಪ್ ಮೂಲಕ ಆರಂಭಗೊಂಡ ಈ ಸಂಸ್ಥೆಯು ಸಮಾರಂಭ ಹಾಗೂ ಹೊಟೇಲ್ ಗಳಲ್ಲಿ ಹೆಚ್ಚುವರಿಯಾಗಿ ಉಳಿದ ಆಹಾರವನ್ನು ಅನಾಥಾಶ್ರಮ, ವೃದ್ಧಾಶ್ರಮ, ವಿಶೇಷ ಮಕ್ಕಳ ಶಾಲೆ, ವಲಸೆ ಕಾರ್ಮಿಕರ ಕಾಲೋನಿಗಳಿಗೆ ತಲುಪಿಸಿ ಹಸಿವು ನೀಗಿಸುವ ಕೆಲಸ ಮಾಡುತ್ತದೆ ಎಂದರು.

ಮುಂದಿನ ದಿನಗಳಲ್ಲಿ ತಾಲೂಕು ಮಟ್ಟದಲ್ಲಿ ತಂಡವನ್ನು ಕಟ್ಟಿ ಹೆಚ್ಚುವರಿ ಯಾಗಿ ಉಳಿದ ಆಹಾರನವನ್ನು ಸೂಕ್ತ ಸ್ಥಳಗಳಿಗೆ ತಲುಪಿಸುವ ವ್ಯವಸ್ಥೆ ಮಾಡಲು ನಿರ್ಧರಿಸಲಾಗಿದೆ. ಆಹಾರವನ್ನು ಶೇಖರಿಸಿಡಲು ಮತ್ತು ಆಹಾರ ವನ್ನು ತಲುಪಿಸಲು ಪಾತ್ರೆಗಳು ಹಾಗೂ ವಾಹನ ಮತ್ತು ಆಹಾರಗಳನ್ನು ಶೇಖರಿಸಿಡಲು ಮನೆ ಮತ್ತು ರೆಫ್ರಿಜರೇಟರ್‌ಗಳ ಅಗತ್ಯವಿದ್ದು, ದಾನಿಗಳ ನೆರವನ್ನು ಯಾಚಿಸಲಾಗುತ್ತಿದೆ ಎಂದು ಅವರು ಹೇಳಿದರು.

ಸಂಸ್ಥೆಯನ್ನು ಜಿಲ್ಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಉದ್ಘಾಟಿಸಲಿರು ವರು. ಮುಖ್ಯ ಅತಿಥಿಗಳಾಗಿ ಜಯಕರ ಶೆಟ್ಟಿ ಇಂದ್ರಾಳಿ, ಜನಾರ್ದನ ತೋನ್ಸೆ, ಮಟ್ಟಾರು ರತ್ನಾಕರ ಹೆಗ್ಡೆ, ಯೋಗೀಶ್ ಶೆಟ್ಟಿ ಭಾಗವಹಿಸಲಿರುವರು. ಈ ಸಂದರ್ಭದಲ್ಲಿ ಸಮಾಜ ಸೇವೆಗೆ ತಮ್ಮ ಜೀವನವನ್ನು ಮುಡಿಪಾಗಿಟ್ಟ ಸಾಧಕರನ್ನು ಸನ್ಮಾನಿಸಲಾಗುವುದು ಎಂದರು.

ಸುದ್ದಿಗೋಷ್ಠಿಯಲ್ಲಿ ಅಧ್ಯಕ್ಷ ಮಹೇಶ್ ಪೂಜಾರಿ ಹೂಡೆ, ಉಪಾಧ್ಯಕ್ಷರಾದ ಷಾ ನವಾಜ್ ಹೊನ್ನಾಳ, ಸಫಾನ್ ಉಡುಪಿ, ಪ್ರಧಾನ ಕಾರ್ಯದರ್ಶಿ ರಫೀಕ್ ಕಲ್ಯಾಣಪುರ, ಕೋಶಾಧಿಕಾರಿ ಅನಿತಾ ಡಿಸೋಜ ಬೆಳ್ಮಣ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News