ಮಂಗಳೂರು ವಿವಿ ಕಾಲೇಜಿನಲ್ಲಿ ‘ಕಾರಂತ’ ನಮನ ಕಾರ್ಯಕ್ರಮ

Update: 2018-10-10 12:57 GMT

ಮಂಗಳೂರು, ಅ.10: ಕಾರಂತರ ಸಾಹಿತ್ಯಿಕ ವ್ಯಾಪ್ತಿಯು ತುಂಬಾ ವಿಶಾಲವಾಗಿದ್ದು, ತನ್ನ ಅಪಾರ ಜ್ಞಾನದಿಂದ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಜ್ಞಾನ ವಿಕಾಸವನ್ನು ವಿಸ್ತರಿಸಿದ ಖ್ಯಾತಿಯು ಶಿವರಾಮ ಕಾರಂತ ಅವರಿಗೆ ಸಲ್ಲುತ್ತದೆ ಎಂದು ಸಹ ಪ್ರಾಧ್ಯಾಪಕ ಡಾ.ವರದರಾಜ ಚಂದ್ರಗಿರಿ ಹೇಳಿದರು.

ಮಂಗಳೂರು ವಿವಿಯ ಡಾ.ಕೆ.ಶಿವರಾಮ ಕಾರಂತ ಪೀಠ ಹಾಗೂ ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನ ಕನ್ನಡ ಸಂಘದ ವತಿಯಿಂದ ನಗರದ ವಿವಿ ಕಾಲೇಜ್‌ನಲ್ಲಿ ಬುಧವಾರ ನಡೆದ ಕಾರಂತ ನಮನ ವಿಚಾರಗೋಷ್ಠಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಯುವಜನತೆ ಮಾಹಿತಿಯನ್ನೇ ಜ್ಞಾನವೆಂದು ತಪ್ಪಾಗಿ ಗ್ರಹಿಸುತ್ತಿದ್ದಾರೆ. ಮಾಹಿತಿ ಸಂಗ್ರಹ ಜ್ಞಾನವಲ್ಲ. ಜ್ಞಾನ ಅನುಭವದಿಂದ ಮಾತ್ರ ಪಡೆಯಲು ಸಾಧ್ಯ. ಜ್ಞಾನವನ್ನು ತನ್ನದಾಗಿಸಿಕೊಂಡು ಕಾವ್ಯಲೋಕಕ್ಕೆ ಧಾರೆಯೆರೆದವರಲ್ಲಿ ಕಾರಂತರು ಮುಖ್ಯರಾಗುತ್ತಾರೆ. ಎಲ್ಲಾ ಸಂವೇದನೆಗಳಿಗೂ ನಾವು ತೆರೆದುಕೊಳ್ಳಬೇಕು ಎನ್ನುವುದನ್ನು ಕಾರಂತರು ತಾನು ರಚಿಸಿದ ಕೃತಿಗಳ ಮೂಲಕ ಪ್ರತಿಪಾದಿಸಿದ್ದಾರೆ. ತುರ್ತಾಗಿ ಅಗಬೇಕಾದ ಆತ್ಮಗೌರವ ಹಾಗೂ ಆತ್ಮವಿಶ್ವಾಸವನ್ನು ಬೆಳೆಸಿಕೊಳ್ಳಲು ಕಾರಂತರನ್ನು ಓದಬೇಕು. ಅವರು ಬರವಣಿಗೆ ಮೂಲಕ ನೀಡಿದ ಜ್ಞಾನದಲ್ಲಿ ಅಲ್ಪ ಜ್ಞಾನವನ್ನಾದರು ತನ್ನದಾಗಿಸಿಕೊಳ್ಳಲು ಪ್ರಯತ್ನಿಸಬೇಕು ಎಂದು ಡಾ. ವರದರಾಜ ಚಂದ್ರಗಿರಿ ಹೇಳಿದರು.

ಮಂಗಳೂರು ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕ ಡಾ.ಬಿ.ಶಿವರಾಮ ಶೆಟ್ಟಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ವಿವಿ ಕಾಲೇಜಿನ ಪ್ರಾಂಶುಪಾಲ ಡಾ.ಉದಯ್‌ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಕನ್ನಡ ಸಂಘದ ಉಪನಿರ್ದೇಶಕಿ ಡಾ.ರತ್ನಾವತಿ, ಮಂಗಳೂರು ವಿವಿ ಕಾರಂತ ಪೀಠ ಸಂಯೋಜಕ ಡಾ.ನಾಗರತ್ನ ರಾವ್ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News