ಮಾನಸಿಕ ಆರೋಗ್ಯ ಬಗ್ಗೆ ಜಾಗೃತಿ ಅತ್ಯಗತ್ಯ : ನ್ಯಾ. ಸತ್ಯನಾರಾಯಣಾಚಾರ್ಯ

Update: 2018-10-10 13:43 GMT

ಮಂಗಳೂರು, ಅ.10: ಮಾಹಿತಿ ತಂತ್ರಜ್ಞಾನಗಳ ವಿನೂತನ ಆವಿಷ್ಕಾರದಿಂದಾಗಿ ಯುವ ಜನಾಂಗ ವ್ಯಸನ ಹಾಗೂ ಖಿನ್ನತೆಗೆ ಒಳಗಾಗುತ್ತಿದ್ದು, ದೈಹಿಕ ಆರೋಗ್ಯದೊಂದಿಗೆ ಮಾನಸಿಕ ಆರೋಗ್ಯವು ಅತಿ ಅಗತ್ಯ ಎಂದು ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷ ಕಾಡ್ಲೂರು ಸತ್ಯನಾರಾಯಣಾಚಾರ್ಯ ಹೇಳಿದರು.

ದ.ಕ. ಜಿಲ್ಲಾಡಳಿತ, ಜಿಪಂ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, (ಮಾನಸಿಕ ಆರೋಗ್ಯ ವಿಭಾಗ), ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಪೊಲೀಸ್ ಇಲಾಖೆ ಮತ್ತು ಶ್ರೀನಿವಾಸ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಸ್ಟಡೀಸ್ ಇವುಗಳ ಸಹಯೋಗದೊಂದಿಗೆ ನಗರದ ಶ್ರೀನಿವಾಸ ಶಿಕ್ಷಣ ಸಂಸ್ಥೆಯಲ್ಲಿ ಬುಧವಾರ ನಡೆದ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಮಾನವ ಸಂಪನ್ಮೂಲದ ಸದ್ಭಳಕೆಗೆ ದೈಹಿಕ ಮತ್ತು ಮಾನಸಿಕ ಆರೋಗ್ಯದ ಅಗತ್ಯವಿದೆ. ಒತ್ತಡ ನಿವಾರಣೆ ಪ್ರಸಕ್ತ ದಿನಗಳಲ್ಲಿ ಸವಾಲಾಗಿ ಪರಿಣಮಿಸುತ್ತಿದ್ದು, ಎಲ್ಲ ಶಾಲಾ ಕಾಲೇಜುಗಳಲ್ಲಿ ಇಂದು ಕೌನ್ಸಿಲರ್‌ಗಳನ್ನು ಕಾಣುತ್ತಿದ್ದೇವೆ. ಮೊಬೈಲ್ನಿಂದ ಹಿಡಿದು ವಿವಿಧ ರೀತಿಯ ವ್ಯಸನಗಳಿಗೆ ಯುವ ಜನಾಂಗ ಬಲಿಯಾಗುತ್ತಿದ್ದು, ಜಾಗೃತಿ ಕಾರ್ಯಕ್ರಮಗಳಿಂದ ಉತ್ತಮ ಸಮಾಜ ನಿರ್ಮಾಣ ಸಾಧ್ಯ ಎಂದು ನ್ಯಾಯಾಧೀಶ ಸತ್ಯನಾರಾಯಣಾಚಾರ್ಯ ಹೇಳಿದರು.

ಕಾಲೇಜಿನ ಪ್ರಾಂಶುಪಾಲ ಡಾ.ಪಿ.ಎಸ್.ಐತಾಳ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಂ.ರಾಮಕೃಷ್ಣ ರಾವ್, ಮಂಗಳೂರು ಸಹಾಯಕ ಆಯುಕ್ತ ರವಿಚಂದ್ರ ನಾಯಕ್, ಸಂಪನ್ಮೂಲ ವ್ಯಕ್ತಿಯಾಗಿ ಮಾನಸಿಕ ರೋಗ ತಜ್ಞ ಡಾ.ಶ್ರೀನಿವಾಸ ಭಟ್ ಮಾತನಾಡಿದರು.
ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಕಾರ್ಯದರ್ಶಿ ನ್ಯಾ. ಮಲ್ಲನಗೌಡ ಪಾಟೀಲ್, ವೆನ್ಲಾಕ್ ಆಸ್ಪತ್ರೆಯ ಡಾ ದಮಯಂತಿ ಕೃಷ್ಣಮೋಹನ್, ಡಾ ಸುನಿಲ್, ಡಾ ರತ್ನಾಕರ್ ಪಾಲ್ಗೊಂಡರು. ಡಾ. ಜಯಂತ್ ಸ್ವಾಗತಿಸಿದರು. ಶ್ರೀನಿವಾಸ ಕಾಲೇಜಿನ ಎಂಎಸ್‌ಡಬ್ಲ್ಯು ವಿಭಾಗದ ಮುಖ್ಯಸ್ಥೆ ಡಾ. ಲವೀನಾ ಡಿಮೆಲ್ಲೋ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News