ಕುದ್ರೋಳಿ ಕಸಾಯಿಖಾನೆ ಅಭಿವೃದ್ಧಿಗೆ ಬಿಜೆಪಿಯಿಂದ ವಿರೋಧ: ಮಾಂಸ ವ್ಯಾಪಾರಸ್ಥರ ಸಂಘ ಖಂಡನೆ

Update: 2018-10-10 13:44 GMT

ಮಂಗಳೂರು, ಅ.10: ಮನಪಾ ಅಧೀನದಲ್ಲಿರುವ ಕುದ್ರೋಳಿಯ ಕಸಾಯಿಖಾನೆಯನ್ನು ಸ್ಮಾರ್ಟ್ ಸಿಟಿ ಯೋಜನೆಯಡಿ ಅಭಿವೃದ್ಧಿಗೊಳಿಸುವುದರ ವಿರುದ್ಧ ಬಿಜೆಪಿ ಮತ್ತು ಸಂಘ ಪರಿವಾರವು ವಿರೋಧ ವ್ಯಕ್ತಪಡಿಸುತ್ತಿರುವುದು ಖಂಡನೀಯ ಎಂದು ಜಮೀಯ್ಯತುಲ್ ಸಅದಾ ಅಸೋಸಿಯೇಶನ್ (ಮಾಂಸ ವ್ಯಾಪಾರಸ್ಥರ ಸಂಘ)ತೀವ್ರವಾಗಿ ಖಂಡಿಸಿದೆ.

ಕುದ್ರೋಳಿಯ ಕಸಾಯಿಖಾನೆಗೆ 75 ವರ್ಷಗಳ ಇತಿಹಾಸವಿದೆ. ಅದರ ದುರಸ್ತಿ ಮತ್ತು ಮೂಲಭೂತ ಸೌಕರ್ಯ ಕಲ್ಪಿಸಲು ಗೆ ಹಲವು ಬಾರಿ ಮನಪಾಕ್ಕೆ ಮನವಿ ಮಾಡಿಕೊಟ್ಟರೂ ಕೂಡಾ ಯಾವುದೇ ಪ್ರಯೋಜನವಾಗಿರಲಿಲ್ಲ. ನಗರದ ಸ್ವಚ್ಛತೆ ಮತ್ತು ಆರೋಗ್ಯದ ದೃಷ್ಟಿಯಿಂದ ಸುಸಜ್ಜಿತ ಕಸಾಯಿಖಾನೆ ನಿರ್ಮಿಸಲು ಇದೀಗ ಸ್ಮಾರ್ಟ್ ಸಿಟಿ ಯೋಜನೆಯನ್ನು ಬಳಸಿರುವುದು ಶ್ಲಾಘನೀಯ. ಈ ಬಗ್ಗೆ ಎಲ್ಲಾ ಕಾರ್ಪೊರೇಟರ್‌ಗಳ ಸಮ್ಮುಖ ನಡೆದ ಸಭೆಯಲ್ಲಿ ಚರ್ಚಿಸಿ ಸೂಕ್ತ ತೀರ್ಮಾನ ತೆಗೆದುಕೊಳ್ಳುವಾಗ ವೌನವಾಗಿದ್ದ ಬಿಜೆಪಿಗರು ಇದೀಗ ವಿರೋಧ ವ್ಯಕ್ತಪಡಿಸುತ್ತಿರುವುದು ಖಂಡನೀಯ.

ಪ್ರಧಾನಿಯ ಕನಸಿನಂತೆ ಕಸಾಯಿಖಾನೆ ಸ್ವಚ್ಛವಾಗುವುದು ಬೇಡವೇ? ಅಲ್ಲಿ ನೈರ್ಮಲ್ಯ ಕಾಪಾಡುವ ಅಗತ್ಯವಿಲ್ಲವೇ? ಕಸಾಯಿಖಾನೆ ಎಂದ ತಕ್ಷಣ ಅದನ್ನು ಭಾವನಾತ್ಮಕವಾಗಿ ತಳುಕು ಹಾಕುವುದು ಯಾತಕ್ಕೆ? ಈ ಹಿಂದೆ ಇದೇ ಕಸಾಯಿಖಾನೆಯ ನಿರ್ವಹಣೆಯನ್ನು ಬಿಜೆಪಿ-ಸಂಘಪರಿವಾರದವರು ಗುತ್ತಿಗೆ ಪಡೆದುದು ಮರೆತು ಹೋಯಿತೇ? ಕೇವಲ ರಾಜಕೀಯಕ್ಕೋಸ್ಕರ ಕಸಾಯಿಖಾನೆಯನ್ನು ವಿವಾದ ಮಾಡುವ ಬದಲು ಬಿಜೆಪಿಯ ಜನಪ್ರತಿನಿಧಿಗಳು ಒಂದು ಸೀಮಿತ ಸಮುದಾಯಕ್ಕೆ ಸೇರಿದವರಲ್ಲ ಎಂಬುದನ್ನು ತಿಳಿದುಕೊಳ್ಳಬೇಕಿದೆ ಎಂದು ಮಾಂಸ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಅಲಿ ಹಸನ್, ಜೆ. ಅಬ್ದುಲ್ ಖಾದರ್, ಯಾಸೀನ್ ಕುದ್ರೋಳಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News