ಬೆಳ್ಳಿತೆರೆಯಲ್ಲಿ ಕಾರಂತರ ‘ಮೂಕಜ್ಜಿಯ ಕನಸುಗಳು’

Update: 2018-10-10 15:08 GMT

ಹಾರಾಡಿ (ಬ್ರಹ್ಮಾವರ), ಅ.10: ಕನ್ನಡದ ಮಹಾನ್ ಸಾಹಿತಿ ಡಾ.ಕೋಟ ಶಿವರಾಮ ಕಾರಂತರಿಗೆ ಪ್ರತಿಷ್ಠಿತ ಜ್ಞಾನಪೀಠ ಪ್ರಶಸ್ತಿಯನ್ನು ತಂದಿತ್ತ ‘ಮೂಕಜ್ಜಿಯ ಕನಸುಗಳು’ ಕಾದಂಬರಿ ಶೀಘ್ರದಲ್ಲೇ ಚಲನಚಿತ್ರ ರೂಪದಲ್ಲಿ ಬೆಳ್ಳಿತೆರೆಯಲ್ಲಿ ಕಾಣಿಸಿಕೊಳ್ಳಲಿದೆ. ಕಾರಂತರ 116ನೇ ಜನ್ಮದಿನವಾದ ಅ.10ರ ಬುಧವಾರ ಚಿತ್ರದ ಆರಂಭೋತ್ಸವ ಬ್ರಹ್ಮಾವರ ಸಮೀಪದ ಹಾರಾಡಿಯ ಮಹಾಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ನಡೆಯಿತು.

ತಮ್ಮ ಚಿತ್ರಗಳಿಗೆ 9 ಬಾರಿ ರಾಷ್ಟ್ರೀಯ ಪ್ರಶಸ್ತಿಗಳನ್ನು ಗೆದ್ದಿರುವ ಕನ್ನಡದ ಖ್ಯಾತ ನಿರ್ದೇಶಕ ಪಿ.ಶೇಷಾದ್ರಿ ಅವರು ತನ್ನ 11ನೇ ಚಿತ್ರವಾಗಿ ಡಾ.ಕಾರಂತರ ಅತ್ಯಂತ ಸಂಕೀರ್ಣ ಕಾದಂಬರಿ ಎನಿಸಿದ ‘ಮೂಕಜ್ಜಿಯ ಕನಸುಗಳು’ ಚಿತ್ರವನ್ನು ನಿರ್ದೇಶಿಸಲಿದ್ದಾರೆ.

ಕನ್ನಡದ ಖ್ಯಾತ ರಂಗ ಮತ್ತು ಚಿತ್ರನಟಿಯಾಗಿ ಹಲವು ಪ್ರಶಸ್ತಿಗಳನ್ನು ಗೆದ್ದಿರುವ ಬಿ.ಜಯಶ್ರೀ ಇದರಲ್ಲಿ ಮೂಕಜ್ಜಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಈಗಾಗಲೇ ಬಿ.ವಿ.ರಾಜಾರಾಮ್ ನಿರ್ದೇಶನದಲ್ಲಿ ರಂಗದ ಮೇಲೆ ‘ಮೂಕಜ್ಜಿ’ಯಾಗಿ ಅಭಿನಯಿಸಿ ಅನುಭವ ಹೊಂದಿರುವ ಬಿ.ಜಯಶ್ರೀ, ಬೆಳ್ಳಿತೆರೆಯ ಮೇಲೆಯೂ ಮೂಕಜ್ಜಿಯಾಗಿ ಕನ್ನಡದ ಅತ್ಯಂತ ಸಂಕೀರ್ಣ ವ್ಯಕ್ತಿತ್ವವೊಂದನ್ನು ಕಟ್ಟಿ ಕೊಡಲಿದ್ದಾರೆ.

ಚಿತ್ರ ತಂಡದ ಕಲಾವಿದರು, ತಂತ್ರಜ್ಞರೆಲ್ಲರೂ ಡಾ.ಕಾರಂತರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ಅವರ 116ನೇ ಜನ್ಮದಿನೋತ್ಸವವನ್ನು ಆಚರಿಸಿದರು. ಇದೇ ವೇಳೆ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಡಾ.ಕಾರಂತರ ಆಪ್ತ ಸಹಾಯಕಿಯಾಗಿದ್ದ ಮಾಲಿನಿ ಮಲ್ಯ ಅವರು ಚಿತ್ರೀಕರಣಕ್ಕೆ ಚಾಲನೆ ನೀಡಿದರು.

ಚಲನಚಿತ್ರ ಕಲಾವಿದರು ಹಾಗೂ ತಂತ್ರಜ್ಞರು ಸೇರಿ ರಚಿಸಿರುವ ನವ್ಯಚಿತ್ರ ಕ್ರಿಯೇಷನ್ಸ್ ಬ್ಯಾನರ್‌ನಡಿ 4ನೇ ಚಿತ್ರವಾಗಿ ‘ಮೂಕಜ್ಜಿಯ ಕನಸುಗಳು’ ನಿರ್ಮಾಣಗೊಳ್ಳುತ್ತಿದೆ. ಶೇಷಾದ್ರಿ ನಿರ್ದೇಶನದ 11ನೇ ಚಿತ್ರ ಇದಾಗಿದ್ದು, ಬೆಳ್ಳಿತೆರೆಯಲ್ಲಿ ಮೂಡಿಬರುತ್ತಿರುವ ಆರನೇ ಚಿತ್ರ ಇದಾಗಲಿದೆ.

ಹಾರಾಡಿ, ಬ್ರಹ್ಮಾವರ, ನಂಚಾರು, ಪರ್ಕಳ, ಮಣಿಪಾಲ ಆಸುಪಾಸಿನಲ್ಲಿ ಮುಂದಿನ 25 ದಿನಗಳಲ್ಲಿ ಚಿತ್ರದ ಚಿತ್ರೀಕರಣ ಮುಕ್ತಾಯಗೊಳ್ಳಲಿದೆ. ಹಾರಾಡಿ ಮಹಾಲಿಂಗೇಶ್ವರ ದೇವಸ್ಥಾನದ ಎದುರಿಗಿರುವ ಅಶ್ವತ್ಥ ಮರದ ಕಟ್ಟೆಯಲ್ಲಿ ಚಿತ್ರದ ಮೊದಲ ದೃಶ್ಯದಲ್ಲಿ ಮೂಕಜ್ಜಿ ಹಾಗೂ ಆಕೆಯ ಮೊಮ್ಮಗ ಸುಬ್ರಾಯ (ಸುಬ್ಬ) ನಡುವಿನ ಸಂಭಾಷಣೆಯನ್ನು ಚಿತ್ರೀಕರಿಸಿಕೊಳ್ಳಲಾಯಿತು. ಮೂಕಜ್ಜಿಯಾಗಿ ಬಿ.ಜಯಶ್ರೀ ಹಾಗೂ ಸುಬ್ರಾಯನಾಗಿ ಚಿತ್ರನಟ ಅರವಿಂದ ಕುಪ್ಲೀಕರ್ ಅಭಿನಯಿಸಿದರು.

ಡಾ.ಕಾರಂತರ ಮೂಲಕತೆಯ ಆಧಾರದಲ್ಲಿ ಚಿತ್ರಕತೆಯನ್ನು ಪಿ.ಶೇಷಾದ್ರಿ ಅವರೇ ಬರೆದಿದ್ದಾರೆ. ಕನ್ನಡದ ಹಿರಿಯ ಹಾಗೂ ಪ್ರಶಸ್ತಿ ವಿಜೇತ ಛಾಯಾಗ್ರಾಹಕ ಜಿ.ಎಸ್.ಭಾಸ್ಕರ್ ಚಿತ್ರದ ಛಾಯಾಗ್ರಾಹಕರು. ಖ್ಯಾತ ಕೊಳಲು ವಾದಕ ಹಾಗೂ ಸಂಗೀತ ನಿರ್ದೇಶಕ ಪ್ರವೀಣ್ ಗೋಡ್ಕಿಂಡಿ ಅವರ ಸಂಗೀತ ಚಿತ್ರಕ್ಕಿದ್ದು, ಬಿ.ಎಸ್.ಕೆಂಪರಾಜ್ ಸಂಕಲನಕಾರರಾಗಿದ್ದಾರೆ.

ಚಿತ್ರದಲ್ಲಿ ಸುಮಾರು 50ರಿಂದ 60 ಪಾತ್ರಗಳಿದ್ದು, ಬೆಂಗಳೂರು ಮತ್ತು ಇತರೆಡೆಯ 7-8ಮಂದಿಯನ್ನು ಹೊರತು ಪಡಿಸಿದರೆ, ಉಳಿದೆಲ್ಲಾ ಪಾತ್ರಗಳಿಗೆ ಸ್ಥಳೀಯ ಪ್ರತಿಭೆ ಹಾಗೂ ರಂಗನಟರಿಗೆ ಅವಕಾಶ ಮಾಡಿಕೊಡಲಾಗುವುದು ಎಂದು ಶೇಷಾದ್ರಿ ತಿಳಿಸಿದರು.

ಇನ್ನು 3-4ದಿನ ಇಲ್ಲಿ ಚಿತ್ರೀಕರಣ ನಡೆಸಿ ಮುಂದೆ ಪರ್ಕಳದ ಶೆಟ್ಟಿಬೆಟ್ಟು ಮನೆಯಲ್ಲಿ ಚಿತ್ರದ ಪ್ರಮುಖ ಭಾಗದ ಚಿತ್ರೀಕರಣ ನಡೆಸಲಾಗುವುದು. ಮುಂದೆ ನಂಚಾರು ಗುಹೆಯಲ್ಲೂ ಕೆಲಭಾಗದ ಚಿತ್ರೀಕರಣ ನಡೆಯಲಿದೆ. ಒಟ್ಟಾರೆಯಾಗಿ ಕಾರಂತರ ಕತೆ ನಡೆಯುವ ಪ್ರದೇಶದ 30-40ಕಿ.ಮೀ. ವ್ಯಾಪ್ತಿಯಲ್ಲಿ ಚಿತ್ರದ ಚಿತ್ರೀಕರಣ ನಡೆಯಲಿದೆ ಎಂದರು.

ಕಾದಂಬರಿಗೆ 50 ವರ್ಷ

ಬಹುಮುಖ ಪ್ರತಿಭೆಯ ಡಾ.ಕೋಟ ಶಿವರಾಮ ಕಾರಂತರ ಕಾದಂಬರಿಗಳಲ್ಲಿ ‘ಮೂಕಜ್ಜಿಯ ಕನಸುಗಳು’ಗೆ ವಿಶಿಷ್ಟ ಸ್ಥಾನವಿದೆ. ಇದು ಕಾರಂತರಿಗೆ 1977ರಲ್ಲಿ ಜ್ಞಾನಪೀಠ ಪ್ರಶಸ್ತಿಯನ್ನು -ಕನ್ನಡಕ್ಕೆ ಮೂರನೇ- ತಂದಿತ್ತ ಕಾದಂಬರಿ. ಈ ಕಾದಂಬರಿ ಮೊದಲ ಬಾರಿ ಪ್ರಕಟಗೊಂಡಿದ್ದು 1968ರ ಅಕ್ಟೋಬರ್ ತಿಂಗಳಲ್ಲಿ. ಅಂದರೆ ಈ ಕಾದಂಬರಿ ಪ್ರಕಟಗೊಂಡು 50 ವರ್ಷಗಳಾಗಿವೆ ಎಂದು ಶೇಷಾದ್ರಿ ತಿಳಿಸಿದರು.

ಕಾದಂಬರಿಯೊಂದು ಪ್ರಕಟಗೊಂಡ 50ನೇ ವರ್ಷಕ್ಕೆ ಅದರ ಆಧಾರದಲ್ಲಿ ಚಲನಚಿತ್ರವನ್ನು ನಿರ್ದೇಶಿಸುವ ಹೆಮ್ಮೆ ನನ್ನದಾಗಿದೆ ಎಂದ ಅವರು, ಚಿತ್ರವನ್ನು 65 ಲಕ್ಷ ರೂ.ಬಜೆಟ್‌ನಲ್ಲಿ ಮುಗಿಸುವ ನಿರೀಕ್ಷೆ ಇದ್ದು, ಮುಂದಿನ ಫೆಬ್ರವರಿ ವೇಳೆ ಪ್ರದರ್ಶನಕ್ಕೆ ಸಿದ್ಧಗೊಳ್ಳಲಿದೆ ಎಂದು ನುಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News