ಮೂಕಜ್ಜಿಯನ್ನು ದೃಶ್ಯಮಾಧ್ಯಮಕ್ಕೆ ತರುವ ಸಂಭ್ರಮ ನನ್ನದು: ಪಿ.ಶೇಷಾದ್ರಿ

Update: 2018-10-10 14:25 GMT

ಹಾರಾಡಿ (ಬ್ರಹ್ಮಾವರ), ಅ.10: ಕಾರಂತರ ಮೂಕಜ್ಜಿಯ ಕನಸುಗಳನ್ನು ಚಲನಚಿತ್ರವಾಗಿ ಬೆಳ್ಳಿತರಬೇಕೆನ್ನುವುದು ನನ್ನ ನಾಲ್ಕು ವರ್ಷಗಳ ಕನಸಾಗಿತ್ತು. ಕಾದಂಬರಿ ಪ್ರಕಟಗೊಂಡ 50ನೇ ವರ್ಷಕ್ಕೆ ಈ ಕನಸು ನನಸಾಗುವ ಗಳಿಗೆ ಬಂದಿದೆ. ಜ್ಞಾನಪೀಠ ಪ್ರಶಸ್ತಿ ಗೆದ್ದು, ಸಾಹಿತ್ಯ ಅಸ್ಮಿತೆಯನ್ನು ಉಳಿಸಿಕೊಂಡಿರುವ ಕಾದಂಬರಿಯನ್ನು ದೃಶ್ಯ ಮಾಧ್ಯಮಕ್ಕೆ ತರುವ ಸಂಭ್ರಮ ನನ್ನದು ಎಂದು ಕನ್ನಡ ಖ್ಯಾತ ನಿರ್ದೇಶಕ ಪಿ.ಶೇಷಾದ್ರಿ ಹೇಳಿದ್ದಾರೆ.

ಹಾರಾಡಿಯ ಮಹಾಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿರುವ ಅಶ್ವತ್ಥ ಕಟ್ಟೆಯಲ್ಲಿ ‘ಮೂಕಜ್ಜಿಯ ಕನಸುಗಳು’ ಚಿತ್ರದ ಚಿತ್ರೀಕರಣಕ್ಕೆ ಚಾಲನೆ ನೀಡುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಅವರು ಈ ಸಂಭ್ರಮವನ್ನು ಹಂಚಿ ಕೊಂಡರು.

18 ವರ್ಷಗಳ ಹಿಂದೆ ಬೊಳುವಾರು ಮಹಮ್ಮದ್ ಕುಂಞ ಅವರ ‘ಮುನ್ನುಡಿ’ ಚಿತ್ರದ ವೇಳೆ ನಾವು ಗೆಳೆಯರೆಲ್ಲಾ ಸೇರಿ ರಚಿಸಿಕೊಂಡ ನವ್ಯಚಿತ್ರ ಕ್ರಿಯೇಷನ್ಸ್ ಮೂಲಕ ಈ ಚಿತ್ರವನ್ನು ನಿರ್ಮಿಸಲಾಗುತ್ತಿದೆ. ಚಿತ್ರದ ಮುಖ್ಯ ಪಾತ್ರ ‘ಮೂಕಜ್ಜಿ’ಗಾಗಿ 10-15 ಮಂದಿಯನ್ನು ಸಂದರ್ಶಿಸಿದರೂ ಕೊನೆಗೆ ಬಿ.ಜಯಶ್ರೀ ಅವರೇ ಪಾತ್ರಕ್ಕೆ ಆಯ್ಕೆಯಾದರು ಎಂದರು.

ಈ ಚಿತ್ರದ ಮೂಲಕ ಕಾದಂಬರಿಯನ್ನು ಓದಿದವರು ಹಾಗೂ ಓದದವರನ್ನೂ ತಲುಪಿ ಅವರ ಅರಿವನ್ನು ಹೆಚ್ಚಿಸುವ ಪ್ರಯತ್ನ ನಡೆಸುವುದಾಗಿ ತಿಳಿಸಿದ ಶೇಷಾದ್ರಿ, ಕಾದಂಬರಿಯ ಆಶಯಕ್ಕೆ ಧಕ್ಕೆಯಾಗದಂತೆ ಅಲ್ಪಸ್ವಲ್ಪ ಬದಲಾವಣೆಯನ್ನು ಚಿತ್ರಕತೆಯಲ್ಲಿ ಮಾಡಿಕೊಂಡಿರುವುದಾಗಿ ತಿಳಿಸಿದರು.

ಚಿತ್ರದ ಮೂಲಕ ನಾನು ಕಂಡ ಮೂಕಜ್ಜಿಯನ್ನು ಜನರ ಮುಂದಿಡಲು ಪ್ರಯತ್ನಿಸುವುದಾಗಿ ಹೇಳಿದ ಶೇಷಾದ್ರಿ, ಇದರಲ್ಲಿ ಕುಂದಾಪುರ ಕನ್ನಡ ಹಾಗೂ ಹವ್ಯಕ ಕನ್ನಡ ಬಳಸಿರುವುದಾಗಿ ತಿಳಿಸಿದರು.

ಸವಾಲಿನ ಪಾತ್ರ: ಇದೊಂದು ನನಗೆ ಅತ್ಯಂತ ಸವಾಲಿನ ಕಷ್ಟಕರ ಪಾತ್ರ. ನಾನು ಮೂಕಜ್ಜಿಯಾಗಿ ನಾಟಕದಲ್ಲಿ ಪಾತ್ರ ಮಾಡಿರಬಹುದು. ಆದರೆ ಚಿತ್ರ ಮಾಧ್ಯಮವೇ ಬೇರೆ. ಹೀಗಾಗಿ ದೊಡ್ಡದೊಂದು ಜವಾಬ್ದಾರಿ ನನ್ನ ಮುಂದಿದೆ. ಅದನ್ನು ಸಮರ್ಥವಾಗಿ ನಿಭಾಯಿಸಲು ಪ್ರಯತ್ನಿಸುತ್ತೇನೆ. ಅದರಲ್ಲಿ ಎಷ್ಟರ ಮಟ್ಟಿಗೆ ಯಶಸ್ವಿಯಾಗುತ್ತೇನೆ ಎಂಬುದನ್ನು ಚಿತ್ರ ನೋಡಿಯೇ ತಿಳಿದುಕೊಳ್ಳಿ ಎಂದು ‘ಮೂಕಜ್ಜಿ’ ಬಿ.ಜಯಶ್ರೀ ನುಡಿದರು.

ಅಪಚಾರವಾಗಬಾರದು: ಕಾರಂತರ ಆಶಯಕ್ಕೆ ವಿರುದ್ಧ, ಅಪಚಾರ ಆಗದಂತೆ ಚಿತ್ರವನ್ನು ಮಾಡಿ ಎಂಬುದು ನನ್ನ ಮನವಿ. ಕಾರಂತರ ಕಾದಂಬರಿಗೆ ಶೇಷಾದ್ರಿ ನ್ಯಾಯ ಒದಗಿಸುತ್ತಾರೆ ಎಂಬ ಬಗ್ಗೆ ನನಗೆ ವಿಶ್ವಾಸವಿದೆ. ಅವರ ‘ಬೆಟ್ಟದ ಜೀವ’ವನ್ನು ನಾನು ಮೆಚ್ಚಿಕೊಂಡಿದ್ದೇನೆ ಎಂದು ಡಾ.ಕಾರಂತರ ಆಪ್ತ ಸಹಾಯಕಿಯಾಗಿ ಅವರ ಎಲ್ಲಾ ಕೃತಿಗಳ ಹಕ್ಕುಸಾಮ್ಯವನ್ನು ಹೊಂದಿರುವ ಮಾಲಿನಿ ಮಲ್ಯ ನುಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News