ಸಂಚಾರ ನಿಯಮ ಉಲ್ಲಂಘನೆ: ತಡೆಯಲೆತ್ನಿಸಿದ ಪೊಲೀಸರಿಗೆ ಬೈಕ್ ಢಿಕ್ಕಿ ಹೊಡೆಸಿದ ಸವಾರ

Update: 2018-10-10 16:29 GMT

ಮಂಗಳೂರು, ಅ.10: ಬೈಕ್ ಸವಾರ ಹೆಲ್ಮೆಟ್ ಹಾಕದೇ ಸಂಚಾರ ನಿಯಮ ಉಲ್ಲಂಘಿಸಿದ್ದು, ಆತನನ್ನು ನಿಲ್ಲಿಸಲು ಹೋದ ಪೊಲೀಸರಿಗೇ ಆರೋಪಿ ಬೈಕ್‌ನ್ನು ಢಿಕ್ಕಿ ಹೊಡೆಸಿದ ಘಟನೆ ನಗರದ ಮೇರಿಹಿಲ್ ಇನ್‌ಲ್ಯಾಂಡ್ ಅಪಾರ್ಟ್‌ಮೆಂಟ್ ಹತ್ತಿರ ಬುಧವಾರ ಬೆಳಗ್ಗೆ ನಡೆದಿದೆ.

ಎಎಸ್ಸೈ ನಾರಾಯಣ ನಾಯ್ಕ ಗಾಯಗೊಂಡವರು ಎಂದು ಗುರುತಿಸಲಾಗಿದೆ. ಎಎಸ್ಸೈ ನಾರಾಯನ್ ನಾಯ್ಕ ಮತ್ತು ಸಿಪಿಸಿ ಸಂಗಪ್ಪ ಅವರಿಗೆ ಸಂಚಾರ ಪಶ್ವಿಮ ಠಾಣಾ ವ್ಯಾಪ್ತಿಗೆ ಸಂಬಂಧಿಸಿದ ಹೈವೇ ಪೆಟ್ರೋಲ್ ವಾಹನದಲ್ಲಿ ಅ.10ರಂದು ಬೆಳಗ್ಗೆ 9ಕ್ಕೆ ಮೇರಿಹಿಲ್ ವಿಕಾಸ್ ಕಾಲೇಜ್ ಪಾಯಿಂಟ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು.

ಈ ವೇಳೆ ಮೇರಿಹಿಲ್ ಇನ್‌ಲ್ಯಾಂಡ್ ಅಪಾರ್ಟ್‌ಮೆಂಟ್ ಹತ್ತಿರ ಸಂಚಾರ ಉಲ್ಲಂಘನೆ ಮಾಡುವ ವಾಹನಗಳ ತಪಾಸಣೆ ಮಾಡುತ್ತಿದ್ದರು. ಆಗ ಪದವಿನಂಗಡಿಯಿಂದ ಮೇರಿಹಿಲ್ ಕಡೆಗೆ ಪ್ರೀತಮ್ ಎಂಬವರು ದುಡುಕುತನ ಹಾಗೂ ನಿರ್ಲಕ್ಷತನದಿಂದ ಹೆಲ್ಮೇಟ್ ಧರಿಸದೇ ಚಲಾಯಿಸಿಕೊಂಡು ಬರುತ್ತಿ ದ್ದರು. ಇದನ್ನು ಗಮನಿಸಿದ ಎಎಸ್ಸೈ ನಾರಾಯಣ ನಾಯ್ಕ ವಾಹನವನ್ನು ನಿಲ್ಲಿಸಲು ಸೂಚನೆ ನೀಡಿದ್ದಾರೆ. ಆಗ ಸವಾರ ಬೈಕ್‌ನ್ನು ನಿಲ್ಲಿಸದೇ ಎಎಸ್ಸೈ ನಾರಾಯಣ ನಾಯ್ಕ ಅವರಿಗೆ ಢಿಕ್ಕಿ ಹೊಡೆಸಿದ್ದಾನೆ.

ಪರಿಣಾಮ ಎಎಸ್ಸೈ ನಾರಾಯಣ ನಾಯ್ಕ ಮತ್ತು ಮೋಟಾರ್ ಸೈಕಲ್ ಸವಾರ ಕೂಡ ಡಾಮಾರು ರಸ್ತೆಗೆ ಬಿದ್ದು ಗಾಯಗೊಂಡಿದ್ದಾರೆ. ಈ ವೇಳೆ ಸಿಪಿಸಿ ಸಂಗಪ್ಪ ಗಾಯಾಳುಗಳನ್ನು ಉಪಚರಿಸಿ ಎಎಸ್ಸೈ ನಾರಾಯಣ ನಾಯ್ಕ ಅವರನ್ನು ಹೈವೇ ಪೆಟ್ರೋಲ್ ವಾಹನದಲ್ಲಿ ನಗರದ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಿದರು.

ಈ ಕುರಿತು ನಗರ ಉತ್ತರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News