ತಂದೆಯ ಕೊಲೆ, ಅಣ್ಣನ ಕೊಲೆಯತ್ನ ಪ್ರಕರಣ: ಆರೋಪಿಗೆ ಅ.11ರಂದು ಶಿಕ್ಷೆ ಪ್ರಕಟ ?

Update: 2018-10-10 16:32 GMT

ಮಂಗಳೂರು, ಅ.10: ಆಸ್ತಿಯ ವಿಚಾರದಲ್ಲಿ ತಂದೆಯನ್ನು ಕೊಲೆಗೈದು, ಅಣ್ಣನನ್ನು ಕತ್ತಿಯಿಂದ ಕಡಿದು ಕೊಲೆಗೆ ಯತ್ನಿಸಿದ ಆರೋಪ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಸಾಬೀತಾಗಿದ್ದು, ಅ.11ರಂದು ಶಿಕ್ಷೆ ಪ್ರಕಟವಾಗುವ ನಿರೀಕ್ಷೆ ಇದೆ.

ಕಾರ್ಕಳ ಅಜೆಕಾರು ಡಾಲ್ಪಿ ಗೋವಿಯಸ್ (41) ಶಿಕ್ಷೆಗೊಳಗಾದ ಅಪರಾಧಿ. ಈತನ ವಿರುದ್ಧ ದಾಖಲಾಗಿದ್ದ ಕೊಲೆ, ಕೊಲೆ ಯತ್ನ, ಸಾಕ್ಷ ನಾಶ, ಅಕ್ರಮ ಪ್ರವೇಶ, ಸೊತ್ತು ನಷ್ಟ ಉಂಟು ಮಾಡಿರುವ ಪ್ರಕರಣಗಳು ಸಾಬೀತಾಗಿರುವುದಾಗಿ ನ್ಯಾಯಾಧೀಶ ಕಡ್ಲೂರು ಸತ್ಯನಾರಾಯಣಾಚಾರ್ಯ ತೀರ್ಪು ನೀಡಿದ್ದಾರೆ.

ಪ್ರಕರಣದ ಹಿನ್ನೆಲೆ: ನ್ಯಾಯಾಲಯದ ತಡೆಯಾಜ್ಞೆ ಇದ್ದರೂ ಅಪರಾಧಿ ಆಸ್ತಿಯ ವಿಚಾರದಲ್ಲಿ 2017 ಏ.14ರಂದು ಹೊಸಬೆಟ್ಟು ಕರಿಂಗಾನದಲ್ಲಿರುವ ತಂದೆಯ ಮನೆಗೆ ಅಕ್ರಮ ಪ್ರವೇಶ ಮಾಡಿ ಅಡುಗೆ ಕೋಣೆಯಲ್ಲಿದ್ದ ತಂದೆ ಪೌಲ್ ಗೋವಿಯಸ್ ಅವರನ್ನು ನೆಲಕ್ಕೆ ದೂಡಿ ಹಾಕಿ ಕತ್ತು ಹಿಸುಕಿ ಕೊಲೆ ಮಾಡಿದ್ದ. ಸಾಕ್ಷ ನಾಶ ಮಾಡುವ ಉದ್ದೇಶದಿಂದ ಮನೆಯ ಒಳಗೆ ಅಳವಡಿಸಿದ್ದ ಸಿಸಿಟಿವಿ, ಡಿವಿಆರ್‌ಗಳನ್ನು ಎಳೆದು ತೆಗೆದುಕೊಂಡು ಹೋಗಿ ಎಸೆದಿದ್ದ.

ಈ ಸಂದರ್ಭ ಚರ್ಚ್‌ಗೆ ಹೋಗಿದ್ದ ಅಣ್ಣ ಸ್ಟೇನಿ ಗೋವಿಯಸ್ ಮನೆಗೆ ಬಂದು ಸ್ಕೂಟರ್ ನಿಲ್ಲಿಸುತ್ತಿದ್ದಂತೆ ಕೊಲೆ ಮಾಡುವ ಉದ್ದೇಶದಿಂದ ತಲವಾರ್‌ನಿಂದ ತಲೆಗೆ ಹೊಡೆದು ಗಂಭೀರ ಗಾಯಗೊಳಿಸಿದ್ದ. ನೆಲಕ್ಕೆ ಕುಸಿದು ಬಿದ್ದಿರುವುದನ್ನು ಕಂಡು ಸತ್ತಿರಬಹುದು ಎಂದು ಭಾವಿಸಿ ಹೊರಟು ಹೋಗಿದ್ದ. ಕೊಲೆ ಮಾಡಲು ಹೋಗುವಾಗ ಅಪರಾಧಿ ಗುರುತು ಪತ್ತೆಯಾಗದಂತೆ ಜರ್ಕಿನ್, ಹೆಲ್ಮೆಟ್, ಸೊಂಟಕ್ಕೆ ಮಾಸಿದ ಕಂದು ಬಣ್ಣದ ಕವರ್ ಧರಿಸಿದ್ದ ಎಂಬುದು ತನಿಖೆಯಿಂದ ದೃಢಪಟ್ಟಿತ್ತು.

ಡಾಲ್ಫಿ ಗೋವಿಯಸ್‌ನ ಶಾಮಿಯಾನಕ್ಕೆ ಸಂಬಂಧಿಸಿದ ಸೊತ್ತುಗಳು ತಂದೆಯ ಮನೆಯ ಗೋದಾಮಿನಲ್ಲಿ ಇರಿಸಿದ್ದ. ಅಪರಾಧಿ ಹಾಗೂ ಆತನ ಪತ್ನಿ ಮನೆಗೆ ಪ್ರವೇಶಿಸದಂತೆ ನ್ಯಾಯಾಲಯ ತಡೆಯಾಜ್ಞೆ ನೀಡಿತ್ತು. ಈತನ ತಾಯಿ ಮರಣ ಹೊಂದಿದ ಸಂದರ್ಭದಲ್ಲೂ ಡಾಲ್ಫಿ ಗೋವಿಯಸ್ ವಿರುದ್ಧ ಪ್ರಕರಣ ದಾಖಲಾಗಿತ್ತು. ತಂದೆಯ ಮನೆಯಲ್ಲಿದ್ದ ತನ್ನ ಕಪಾಟು ಹಾಗೂ ಅದರಲ್ಲಿದ್ದ ಸೊತ್ತುಗಳನ್ನು ನ್ಯಾಯಾಲಯದ ಆದೇಶದಂತೆ ನೋಡಲು ಹೋಗಿದ್ದಾಗ ಸೊತ್ತುಗಳನ್ನು ತಂದೆ ಬೇರೆ ಕಡೆಗೆ ಸಾಗಿಸಿದ್ದರು. ಇದೇ ದ್ವೇಷದಿಂದ ಕೊಲೆ ಮಾಡುವ ನಿರ್ಧಾರ ಕೈಗೊಂಡಿದ್ದ ಎಂದು ಅಪರಾಧಿ ತನಿಖೆ ವೇಳೆ ಹೇಳಿಕೆ ನೀಡಿದ್ದ.

ಮೂಡುಬಿದಿರೆಯ ಇನ್‌ಸ್ಪೆಕ್ಟರ್ ರಾಮಚಂದ್ರ ನಾಯಕ್ ಪ್ರಕರಣದ ತನಿಖೆ ನಡೆಸಿ, ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ಅಪರಾಧಿಯ ತಂದೆ ಪೌಲ್ ಗೊವಿಯಸ್ ಮತ್ತು ತಾಯಿ ಲಿಲ್ಲಿ ಪೌಲ್ ಗೊವಿಯಸ್ ಅವರ ಜೀವಿತ ಕಾಲದಲ್ಲಿ ಮೂಡುಬಿದಿರೆ ಠಾಣೆಗೆ ನೀಡಿದ ದೂರುಗಳ ಬಗ್ಗೆ ಕೂಡ ಸಂಬಂಧಪಟ್ಟ ಪೊಲೀಸ್ ಅಧಿಕಾರಿಗಳು ದಾಖಲೆ ಸಮೇತ ಸಾಕ್ಷ ನುಡಿದಿದ್ದಾರೆ.

ಈ ಪ್ರಕರಣದಲ್ಲಿ ತನಿಖೆಯ ವೇಳೆ ಪೊಲೀಸರು ಅಪರಾಧಿಯ ಹೇಳಿಕೆಯಂತೆ ಡಿವಿಆರ್ ವಶಪಡಿಸಿಕೊಂಡಿದ್ದು, ಡಿವಿಆರ್ ದೃಶ್ಯಾವಳಿಯನ್ನು ಪೆನ್‌ಡ್ರೈವ್‌ನಲ್ಲಿ ಸಂಗ್ರಹಿಸಿದ್ದು, ನ್ಯಾಯಾಲಯದಲ್ಲಿ ವಿಚಾರಣೆ ವೇಳೆ ದೃಶ್ಯಾವಳಿಗಳನ್ನು ವೀಕ್ಷಿಸಲಾಗಿತ್ತು. ಸರಕಾರದ ಪರವಾಗಿ 36 ಸಾಕ್ಷಿಗಳನ್ನು ವಿಚಾರಣೆ ನಡೆಸಲಾಗಿದೆ. ಸರಕಾರದ ಪರವಾಗಿ ಪಬ್ಲಿಕ್ ಪ್ರಾಸಿಕ್ಯೂಟರ್ ಕುದ್ರಿಯ ಪುಷ್ಪರಾಜ್ ಅಡ್ಯಂತಾಯ ವಾದಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News