ಮಂಗಳೂರು ವಿ.ವಿ ಕ್ರೀಡಾ ಕೂಟ: ಆಳ್ವಾಸ್ ಚಾಂಪಿಯನ್

Update: 2018-10-10 16:36 GMT

ಮೂಡುಬಿದಿರೆ, ಅ. 10: 38ನೇ ಮಂಗಳೂರು ವಿವಿ ಅಂತರ್ ಕಾಲೇಜು ಕ್ರೀಡಾಕೂಟದಲ್ಲಿ ಆಳ್ವಾಸ್ ಕಾಲೇಜು 44 ಚಿನ್ನ, 29 ಬೆಳ್ಳಿ ಹಾಗೂ 6 ಕಂಚಿನ ಪದಕ ಸಹಿತ ಒಟ್ಟು 79 ಪದಕಗಳನ್ನು ಗಳಿಸುವುದರೊಂದಿಗೆ 533 ಅಂಕಗಳನ್ನು ಪಡೆದು ಸತತ 17ನೇ ಬಾರಿಗೆ ಸಮಗ್ರ ಪ್ರಶಸ್ತಿಯನ್ನು ಗೆದ್ದುಕೊಂಡಿದೆ. 

ಪುರುಷರ ವಿಭಾಗದಲ್ಲಿ 269 ಅಂಕಗಳಿಸಿದ ಆಳ್ವಾಸ್ ಕಾಲೇಜು ಪುರುಷರ ತಂಡ ಪ್ರಶಸ್ತಿಯನ್ನು ಗಳಿಸಿ ಸೈಂಟ್ ಫಿಲೋಮಿನಾ ಕಾಲೇಜು ಎಸೋಸಿಯೇಷನ್ ಫಲಕವನ್ನು ಪಡೆದುಕೊಂಡಿದೆ. ಮಹಿಳೆಯರ ವಿಭಾಗದಲ್ಲಿ 264 ಅಂಕಗಳನ್ನು ಗಳಿಸಿದ ಆಳ್ವಾಸ್ ಕಾಲೇಜು ತಂಡ ಮಹಿಳಾ ತಂಡ ಪ್ರಶಸ್ತಿಯನ್ನು ಗೆದ್ದು ಅಕಾಡೆಮಿ ಆಫ್ ಜನರಲ್ ಎಜುಕೇಶನ್ ಟ್ರೋಫಿಯನ್ನು ಗೆದ್ದುಕೊಂಡಿದೆ. ಪುರುಷರ ವಿಭಾಗದಲ್ಲಿ ಆಳ್ವಾಸ್ ದೈಹಿಕ ಶಿಕ್ಷಣ ಕಾಲೇಜು ದ್ವಿತೀಯ ತಂಡ ಪ್ರಶಸ್ತಿ ಹಾಗೂ ಎಸ್‍ಡಿಎಂ ಕಾಲೇಜು ಉಜಿರೆ ತಂಡ ತೃತೀಯ ತಂಡ ಪ್ರಶಸ್ತಿಯನ್ನು ಗೆದ್ದುಕೊಂಡಿದೆ. ಮಹಿಳೆಯರ ವಿಭಾಗದಲ್ಲಿ ಎಸ್‍ಡಿಎಂ ಕಾಲೇಜು ಉಜಿರೆ ತಂಡ ದ್ವಿತೀಯ ತಂಡ ಪ್ರಶಸ್ತಿ ಹಾಗೂ ಆಳ್ವಾಸ್ ದೈಹಿಕ ಶಿಕ್ಷಣ ಕಾಲೇಜು ತಂಡ ತೃತೀಯ ತಂಡ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದೆ. ಪುರುಷರ ವಿಭಾಗದಲ್ಲಿ ಆಳ್ವಾಸ್‍ನ ಎಲ್ಯಾಕ್‍ದಾಸನ್ ಹಾಗೂ ಮಹಿಳೆಯರ ವಿಭಾಗದಲ್ಲಿ ಆಳ್ವಾಸ್‍ನ ಅಕ್ಷತಾ ಪಿ.ಎಸ್ ಅತ್ಯುತ್ತಮ ಕ್ರೀಡಾಪಟು ಪ್ರಶಸ್ತಿಯನ್ನು ಗಳಿಸಿದರು. ಅತ್ಯುತ್ತಮ ಪಥ ಸಂಚಲನಕ್ಕಾಗಿ ನೀಡುವ ಗೌರವಕ್ಕೆ ಉಡುಪಿಯ  ಪೂರ್ಣ ಪ್ರಜ್ಞಾ ಕಾಲೇಜು ತಂಡ ಭಾಜನವಾಯಿತು.

ಎರಡು ದಿನಗಳ ಕಾಲ ನಡೆದ ಈ ಕ್ರೀಡಾ ಕೂಟದಲ್ಲಿ ಆಳ್ವಾಸ್‍ನ ಕ್ರೀಡಾಪಟುಗಳು ಒಟ್ಟು 15 ಕೂಟ ದಾಖಲೆಗಳನ್ನು ದಾಖಲಿಸುವ ಮೂಲಕ ಅಮೋಘ ಸಾಧನೆ ಮಾಡಿದ್ದಾರೆ. ಈ ಕ್ರೀಡಾ ಪಟುಗಳಿಗೆ ಸಮಾರೋಪ ಸಮಾರಂಭದಲ್ಲಿ ಆಳ್ವಾಸ್ ಶಿಕ್ಷಣ ಸಂಸ್ಥೆಯ ವತಿಯಿಂದ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ ತಲಾ 2 ಸಾವಿರ ನಗದು ನೀಡಿ ಪುರಸ್ಕರಿಸಿದರು. ಮಂಗಳೂರು ವಿವಿ ಉಪ ಕುಲಪತಿ ಡಾ. ಕಿಶೋರ್ ಕುಮಾರ್ ಸಿ.ಕೆ. ಮುಖ್ಯ ಅತಿಥಿಯಾಗಿ ಭಾಗವಹಿಸಿದರು. ನವೀನ್ ಅಂಬೂರಿ ಕಾರ್ಯಕ್ರಮ ನಿರೂಪಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News