ದುಬೈಯಿಂದ ಮೀನುಗಾರಿಕೆಗೆ ತೆರಳಿದ್ದ ಉ.ಕ.ಜಿಲ್ಲೆಯ 15ಮಂದಿ ಇರಾನ್ ನಲ್ಲಿ ಸೆರೆ

Update: 2018-10-10 17:06 GMT

ಭಟ್ಕಳ, ಅ. 10: ದುಬೈಯಿಂದ ಮೀನುಗಾರಿಕೆಗೆ ತೆರಳಿದ್ದ ಉತ್ತರಕನ್ನಡ ಜಿಲ್ಲೆಯ ಭಟ್ಕಳ, ಕುಮಟಾ, ಮುರುಡೇಶ್ವರ, ಮಂಕಿಯ ಸುಮಾರು 15 ಮಂದಿ ಮೀನುಗಾರರನ್ನು ಇರಾನ್ ಗಡಿ ಪ್ರವೇಶಿಸಿದ್ದ ಹಿನ್ನೆಲೆಯಲ್ಲಿ ಅವರನ್ನು ಅಲ್ಲಿಯ ಸರ್ಕಾರ ಬಂಧಿಸಿದೆ ಎಂಬ ಸುದ್ದಿ ಭಟ್ಕಳ ಸೇರಿದಂತೆ ಜಿಲ್ಲಾದ್ಯಂತ ಹರಡಿದ್ದು ಬಂಧಿತ ಮೀನುಗಾರರ ಕುಟುಂಬದವರು ಆತಂಕಿತಗೊಂಡಿರುವ ವಿಷಯ ಬೆಳಕಿಗೆ ಬಂದಿದೆ.

ಇರಾನ್ ಸರ್ಕಾರದಿಂದ ಬಂಧಿಸಲ್ಪಟ್ಟ ಮೀನುಗಾರರನ್ನು ಮುರುಡೇಶ್ವರದ ಇಬ್ರಾಹಿಂ ಮುಲ್ಲಾ ಫಖೀರಾ, ಮುಹಮ್ಮದ್ ಅನ್ಸಾರ್ ಇಸ್ಮಾಯಿಲ್ ಬಾಪು, ನಯೀಮ್ ಹಸನ್ ಭಾಂಡಿ, ಭಟ್ಕಳ ತಾಲೂಕಿನ ಹೆಬಳೆ ಪಂಚಾಯತ್ ವ್ಯಾಪ್ತಿಯ ತೆಂಗಿನಗುಂಡಿ ಪ್ರದೇಶದ ಖಲೀಲ್ ಪಾನಿಬುಡು, ಉಸ್ಮಾನ್ ಬೊಂಬಾಝ್‍ಕರ್ ಮುಹಮ್ಮದ್ ಇಸಾಕ್, ಅಬ್ದುಲ್ ಮುಹಮ್ಮದ್ ಹುಸೈನ್, ಮುಹಮ್ಮದ್ ಷರೀಫ್ ಯಸೂಫ್ ಬಾಪು, ಅಬ್ದುಲ್ಲಾ ಸುಲೈಮಾನ್ ಡಾಂಗಿ, ಕುಮಟಾ ತಾಲೂಕಿನ ಅತಿಖ್ ಸುಲೈಮಾನ್ ಧಾರು, ಯಾಖೂಬ್ ಇಸ್ಮಾಯಿಲ್ ಶಮು, ಇಲ್ಯಾಸ್ ಅಂಬಾಡಿ, ಇಲ್ಯಾಸ್ ಘರಿ, ಇನಾಯತ್ ಅಬ್ದುಲ್ ಖಾದಿರ್ ಶಮ್ಸು, ಖಾಸಿಮ್ ಶೇಖ್, ಅಜ್ಮಲ್ ಮೂಸಾ ಶಮು ಎಂದು ತಿಳಿದುಬಂದಿದ್ದು ಈ ಎಲ್ಲಾ 15 ಮಂದಿ ಮೀನುಗಾರರ ಕುಟುಂಬಸ್ಥರು ಈಗ ಆತಂಕದಲ್ಲಿದ್ದು ತಮ್ಮ ಕುಟುಂಬದ ಸದಸ್ಯರನ್ನು ಹೇಗಾದರು ಮಾಡಿ ಇರಾನ್ ಸರ್ಕಾರದಿಂದ ಬಿಡಿಸಿಕೊಂಡು ಭಾರತಕ್ಕೆ ಮರಳಿಸುವ ವ್ಯವಸ್ಥೆ ಮಾಡಬೇಕೆಂದು ತಂಝೀಮ್ ಸಂಸ್ಥೆಯಲ್ಲಿ ಮಾನವಿ ಮಾಡಿಕೊಂಡಿದ್ದಾರೆಂದು ಹೇಳಲಾಗುತ್ತಿದೆ.

ಈ ಕುರಿತಂತೆ ಭಟ್ಕಳದ ಮಜ್ಲಿಸೆ ಇಸ್ಲಾಹ್ ತಂಝೀಮ್ ನ ಉಪಾಧ್ಯಕ್ಷ ಹಾಗೂ ಜನತಾದಳ ಮುಖಂಡ ಇನಾಯತುಲ್ಲಾ ಶಾಬಂದ್ರಿಯವರನ್ನು ಸಂಪರ್ಕಿಸಿದ್ದು ಅವರು, ಕಳೆದ 2 ತಿಂಗಳ ಹಿಂದೆ ಮೀನುಗಾರಿಕೆಗೆ ತೆರಳಿದ ಜಿಲ್ಲೆಯ 15 ಮಂದಿ ಮೀನುಗಾರಿಕೆ ಮಾಡುತ್ತ ಇರಾನ್ ಗಡಿ ಸಮೀಪಿಸಿದ್ದು ಅಲ್ಲಿನ ಸರ್ಕಾರ ಒಂದು ಮೀನುಗಾರಿಕಾ ದೋಣಿಯಲ್ಲಿದ್ದವರನ್ನು ಬಂಧಿಸಿ ತಮ್ಮ ವಶದಲ್ಲಿರಿಸಿಕೊಂಡಿದ್ದಾರೆ. ಮತ್ತೊಂದು ದೋಣೀಯಲ್ಲಿದ್ದ ಮೀನುಗಾರರನ್ನು ಮರಳಿ ದುಬೈಗೆ ತೆರಳದಂತೆ ಸಮುದ್ರ ಮಧ್ಯದಲ್ಲೆ ನಿರ್ಭಂದವನ್ನು ಹೇರಿದ್ದು ಅಲ್ಲಿ ಅವರಿಗೆ ಊಟದ ವ್ಯವಸ್ಥೆಯನ್ನು ಸರ್ಕಾರ ಮಾಡುತ್ತಿದೆ ಎಂಬ ಮಾಹಿತಿ ತಮಗೆ ಬಂದಿದೆ. ಈ ಕುರಿತುಂತೆ ಭಾರತ ಸರ್ಕಾರಕ್ಕೆ ಆ ಮೀನುಗಾರರನ್ನು ಮರಳಿ ದೇಶಕ್ಕೆ ಕರೆತರುವಂತೆ ಕೇಂದ್ರ ಸಚಿವೆ ಸುಶ್ಮಾ ಸ್ವರಾಜ್ ಅವರಲ್ಲಿ ಮನವಿ ಸಲ್ಲಿಸಲಾಗುವುದು ಎಂದೂ ತಿಳಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News