ಕಸಾಯಿಖಾನೆ ಅಭಿವೃದ್ಧಿ ವಿಚಾರದಲ್ಲಿ ಸಚಿವರು ಒತ್ತಡಕ್ಕೆ ಧೃತಿಗೆಡಬಾರದು: ಎಸ್‌ಡಿಪಿಐ

Update: 2018-10-10 17:18 GMT

ಮಂಗಳೂರು, ಅ.10: ಕೇಂದ್ರ ಸರಕಾರದ ಸ್ಮಾರ್ಟ್‌ ಸಿಟಿ ಯೋಜನೆಯಡಿ ಕಸಾಯಿಖಾನೆ ಅಭಿವೃದ್ಧಿ ವಿಚಾರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಯಾವುದೇ ಒತ್ತಡಕ್ಕೆ ಧೃತಿಗೆಡಬಾರದು. ಇದು ಎಲ್ಲ ಸಮುದಾಯಕ್ಕೆ ಸಹಕಾರಿಯಾಗುವ ಯೋಜನೆಯಾಗಿದೆ ಎಂದು ಎಸ್‌ಡಿಪಿಐ ಅಭಿಪ್ರಾಯಪಟ್ಟಿದೆ.

ಅಭಿವೃದ್ಧಿ ವಿಚಾರದಲ್ಲಿ ಆರೋಪ ಮಾಡುವಾಗ ಅದನ್ನು ಸಮರ್ಥವಾಗಿ ಎದುರಿಸಬೇಕಾದದ್ದು ಉಸ್ತುವಾರಿ ಸಚಿವರ ಜವಾಬ್ದಾರಿಯಾಗಿದೆ. ಅದು ಬಿಟ್ಟು ತಾನು ಕೇವಲ ಸಲಹೆ ಮಾತ್ರ ಕೊಟ್ಟಿದ್ದೇನೆ, ನಿಮಗೆ ಬೇಡದಿದ್ದರೆ ಕೇಂದ್ರಕ್ಕೆ ಪತ್ರ ಬರೆದು ಕಸಾಯಿಖಾನೆ ಅಭಿವೃದ್ಧಿಯನ್ನು ತಡೆಯಿರಿ ಎಂದು ಪಲಾಯನವಾದದ ಮಾತನ್ನು ಹೇಳುತ್ತಿದ್ದಾರೆ. ಇದು ಖಂಡಿತ ಸಮಂಜಸವಲ್ಲ ಎಂದು ಎಸ್‌ಡಿಪಿಐ ಎಸ್‌ಡಿಪಿಐ ಜಿಲ್ಲಾಧ್ಯಕ್ಷ ಅಥಾವುಲ್ಲಾ ಜೋಕಟ್ಟೆ ಹೇಳಿಕೆಯಲ್ಲಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಜಿಲ್ಲಾ ಉಸ್ತುವಾರಿ ಸಚಿವರಿಗೆ ಜಿಲ್ಲೆಯ ಅಭಿವೃದ್ಧಿಯೇ ಮುಖ್ಯ ಅಜೆಂಡಾವಾಗಿರಬೇಕು. ಸಮಾಜಕ್ಕೆ ಸಹಕಾರಿಯಾಗುವ ಅಭಿವೃದ್ಧಿ ವಿಚಾರದಲ್ಲಿ ರಾಜಕೀಯ ಆರೋಪಕ್ಕೆ ಹೆದರಿ ಹಿಂಜರಿಯುವುದು ಬಹಳ ಅಪಾಯಕಾರಿ ಬೆಳವಣಿಗೆಯಾಗಿದೆ. ಉಸ್ತುವಾರಿ ಸಚಿವರ ಹಿಂಜರಿಕೆಯ ಮಾತನ್ನು ಹಿಂಪಡೆಯಬೇಕು ಮತ್ತು ಯಾವುದೇ ಕಾರಣಕ್ಕೂ ಕಸಾಯಿಖಾನೆಯ ಅಭಿವೃದ್ಧಿಯ ವಿಚಾರವನ್ನು ಕೈ ಬಿಡದೆ ದೃಢವಾಗಿ ನಿಲ್ಲಬೇಕು ಎಂದು ಒತ್ತಾಯಿಸಿದರು.

ಕೇಂದ್ರ ಸರಕಾರದ ಸ್ಮಾರ್ಟ್‌ಸಿಟಿ ಯೋಜನೆಯಡಿ ಮಂಗಳೂರು ನಗರವು ಆಯ್ಕೆಗೊಂಡಿದ್ದು, ಇದರ ಭಾಗವಾಗಿ ಸ್ವಚ್ಛತೆ, ನೈರ್ಮಲ್ಯಕ್ಕೆ ಆದ್ಯತೆ ಕೊಡುವ ಅಗತ್ಯವಿದೆ. ಆ ನಿಟ್ಟಿನಲ್ಲಿ ಕಸಾಯಿಖಾನೆ ಅಭಿವೃದ್ಧಿಗೆ 15 ಕೋಟಿ ರೂ. ಮಂಜೂರಾಗುವಂತಹ ಸಂದರ್ಭದಲ್ಲಿ ಬಿಜೆಪಿಯು ವಿರೋಧಿಸುವುದು ಹಾಸ್ಯಸ್ಪದವಾಗಿದೆ ಎಂದರು.

ಕಸಾಯಿಖಾನೆ ಅಭಿವೃದ್ಧಿ ಕಾರ್ಯ ಕೇಂದ್ರ ಸರಕಾರದ ಸ್ಮಾರ್ಟ್‌ಸಿಟಿ ಯೋಜನೆಯ ಭಾಗವಾಗಿದೆ. ಇದನ್ನೇ ವಿರೋಧಿಸಿದರೆ ಕೇಂದ್ರ ಸರಕಾರದ ಯೋಜನೆಯಲ್ಲಿ ಬಿಜೆಪಿಗೆ ಸಹಮತವಿಲ್ಲ ಮತ್ತು ಬಿಜೆಪಿಯ ದ್ವಂದ್ವ ನಿಲುವು ಇಲ್ಲಿ ಸ್ಪಷ್ಟವಾಗುತ್ತದೆ. ಕಸಾಯಿಖಾನೆ ಅಂದರೆ ಕೇವಲ ಮುಸ್ಲಿಮರು ಮಾತ್ರ ಸೇವಿಸುವ ಮಾಂಸ ತಯಾರಾಗುವ ಕೇಂದ್ರವಲ್ಲ, ಬದಲಾಗಿ ಮಂಗಳೂರಿನ ಬಹುಸಂಖ್ಯಾತ ಜನರಿಗೆ ಮಾಂಸಾಹಾರ ಸಿಗುವಂತಹ ಕಸಾಯಿಖಾನೆಯಾಗಿದೆ.

ಕಸಾಯಿಖಾನೆ ಅಭಿವೃದ್ಧಿ ಹೊಂದಬೇಕಾದದ್ದು ಇಂದಿನ ಅನಿವಾರ್ಯ. ಇದು ಮಂಗಳೂರಿನ ಜನತೆಯ ಆರೋಗ್ಯಕ್ಕೆ ಪೂರಕವಾಗುತ್ತದೆಯೇ ಹೊರತು, ಯಾವುದೇ ದುಷ್ಪರಿಣಾಮ ಇಲ್ಲ. ಆದರೆ ಬಿಜೆಪಿ ಈ ವಿಚಾರದಲ್ಲಿ ರಾಜಕೀಯ ಲಾಭ ಪಡೆಯಲು ಘಟನೆಯನ್ನು ಭಾವನಾತ್ಮಕವಾಗಿ ಚಿತ್ರೀಕರಿಸಿ, ಮುಂಬರುವ ಲೋಕಸಭಾ ಮತ್ತು ಮಂಗಳೂರು ಮಹಾನಗರ ಪಾಲಿಕೆಯ ಚುನಾವಣೆಯ ಅಜೆಂಡಾವಾಗಿಸಿ ಮತ ಧ್ರುವೀಕರಿಸಲು ಪ್ರಯತ್ನಿಸುತ್ತಿದ್ದಾರೆ. ಇದನ್ನು ಎಸ್‌ಡಿಪಿಐ ತೀವ್ರವಾಗಿ ಖಂಡಿಸುತ್ತದೆ ಎಂದರು.

ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಕಸಾಯಿಖಾನೆ ಅಭಿವೃದ್ಧಿಗೆ 68 ಕೋಟಿ ರೂ. ಸಬ್ಸಿಡಿ ಮಂಜೂರು ಮಾಡುವಾಗ ವಿರೋಧಿಸದ ಬಿಜೆಪಿ, ಮಂಗಳೂರಿನ ಸಮಗ್ರ ಅಭಿವೃದ್ಧಿಯ ವಿಚಾರದಲ್ಲಿ ವಿರೋಧಿಸುವುದು ಬಿಜೆಪಿಯ ನೈಜ ಸಂಸ್ಕೃತಿಯನ್ನು ಎತ್ತಿ ತೋರಿಸುತ್ತದೆ ಎಂದು ಎಸ್‌ಡಿಪಿಐ ಜಿಲ್ಲಾಧ್ಯಕ್ಷ ಅಥಾವುಲ್ಲಾ ಜೋಕಟ್ಟೆ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News