ಬೈಕ್ ರೈಡರ್‌ಗಳಿಂದ 3 ದೇಶಗಳ ಸಂಚಾರ: ಮಂಗಳೂರಿನಲ್ಲಿ ಪೊಲೀಸ್ ಆಯುಕ್ತರಿಂದ ಚಾಲನೆ

Update: 2018-10-11 06:31 GMT

ಮಂಗಳೂರು, ಅ.11: ಕೊಡಗು ಹಾಗೂ ಕೇರಳದಲ್ಲಿ ಇತ್ತೀಚೆಗೆ ಸಂಭವಿಸಿದ ಭೀಕರ ಜಲ ಪ್ರಳಯ ಪರಿಸರ ಸಂರಕ್ಷಣೆಯ ನಿಟ್ಟಿನಲ್ಲಿ ಕೇರಳದ ಮೂವರು ಯುವ ಬೈಕ್ ರೈಡರ್‌ಗಳು ತಮ್ಮ ಹವ್ಯಾಸವನ್ನು ಜಾಗೃತಿ ಪಯಣವನ್ನಾಗಿಸಲು ಮುಂದಾಗಿದ್ದು, ನಗರ ಪೊಲೀಸ್ ಆಯುಕ್ತರು ಕಚೇರಿ ಬಳಿ ಚಾಲನೆ ನೀಡಿದರು.

ಕೇರಳ ಕಾಸರಗೋಡಿನ ಯುವಕರಾದ ಸುಧೀರ್ ಕುಮಾರ್, ಶಾನ್ ಕಲ್ಲಂಗಡಿ, ಸಹೀರ್ ಕುಂಬಳೆ ಅವರು ಕೇರಳದ ಕಾಸರಗೋಡಿನಿಂದ 12,000 ಕಿ.ಮೀ. ಪ್ರಯಾಣದ ಮೂಲಕ ‘ಗಿಡ ನೆಡಿ ಪ್ರವಾಹ ತಡೆಯಿರಿ’ ಎಂಬ ಜಾಗೃತಿ ಸಂದೇಶದೊಂದಿಗೆ ಭಾರತ ಸೇರಿ ಮೂರು ದೇಶಗಳಿಗೆ ಭೇಟಿ ನೀಡಲಿದ್ದಾರೆ.

ಮಂಗಳೂರು ಬುಲ್ಸ್ ಮೊಟಾರ್ ಸೈಕಲ್ ಕ್ಲಬ್ ಸದಸ್ಯರಾಗಿರುವ ಈ ಮೂವರು ಕೂಡಾ ರಾಯಲ್ ಎನ್‌ಫೀಲ್ಡ್ ಕಂಪನಿಯ ಹಿಮಾಲಯನ್ ಬೈಕ್‌ಗಳಲ್ಲಿ ಕಾಸರಗೋಡಿನಿಂದ ಪ್ರಯಾಣ ಆರಂಭಿಸಿದ್ದಾರೆ. ಬೈಕ್ ರೈಡಿಂಗ್ ಈ ಮೂವರ ಹವ್ಯಾಸವಾಗಿದ್ದು, ಅದನ್ನೀಗ ಪರಿಸರ ಅದರಲ್ಲೂ ಮುಖ್ಯವಾಗಿ ಗಿಡಗಳನ್ನು ನೆಟ್ಟು ಪರಿಸರ ಸಂರಕ್ಷಿಸಬೇಕೆಂಬ ಬಗ್ಗೆ ಜನರಿಗೆ ಮನವರಿಕೆ ಮಾಡುವ ಕೆಲಸವನ್ನು ತಮ್ಮ ಪ್ರಯಾಣದ ವೇಳೆ ಈ ಬೈಕ್ ರೈಡರ್‌ಗಳು ಮಾಡಲಿದ್ದಾರೆ.

ತಮ್ಮ ಪ್ರಯಾಣದ ವೇಳೆ ಈ ಬೈಕ್ ರೈಡರ್‌ಗಳು ಭಾರತದ 14 ರಾಜ್ಯಗಳು (ಕರ್ನಾಟಕ, ಕೇರಳ ಸೇರಿ) ಸೇರಿದಂತೆ ನೇಪಾಲ ಹಾಗೂ ಭೂತನ್ ದೇಶದ ಕೆಲ ನಗರಗಳಿಗೂ ಪ್ರಯಾಣ ಬೆಳೆಸಲಿದ್ದಾರೆ.

ಕಾಸರಗೋಡಿನಿಂದ ಬುಧವಾರ ಸಂಜೆ 4 ಗಂಟೆಗೆ ಪ್ರಯಾಣ ಆರಂಭಿಸಿರುವ ಈ ಯುವಕರು ಇಂದು ಬೆಳಗ್ಗೆ ಮಂಗಳೂರು ತಲುಪಿದ್ದು, ನಗರದ ಪೊಲೀಸ್ ಆಯುಕ್ತರ ಕಚೇರಿ ಬಳಿಯಿಂದ ಪ್ರಯಾಣ ಮುಂದುವರಿಸಿದರು.

ಗಿಡಗಳನ್ನು ನೆಡುವ ಮೂಲಕ ಮಣ್ಣಿನ ಸವಕಳಿಯನ್ನು ತಡೆಯಲು ಸಾಧ್ಯ. ಹಾಗಾಗಿ ಆದಷ್ಟು ಗಿಡಗಳನ್ನು ನೆಡುವುದಕ್ಕೆ ಆದ್ಯತೆ ನೀಡಬೇಕೆಂಬ ಸಂದೇಶವನ್ನು ಈ ಬೈಕ್ ರೈಡರ್‌ಗಳು ತಮ್ಮ ಪ್ರಯಾಣದುದ್ದಕ್ಕೂ ಮನವರಿಕೆ ಮಾಡಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News