ಮಂಗಳೂರು: ಹೃದಯ ವೈಶಾಲ್ಯತೆ ಮೆರೆದ ಸಚಿವ ಝಮೀರ್ ಅಹ್ಮದ್

Update: 2018-10-11 12:26 GMT

ಮಂಗಳೂರು, ಅ. 11: ಕೊಡಗಿನಲ್ಲಿ ಉಂಟಾದ ನೆರೆ ಸಂದರ್ಭ ಜೋಡುಪಾಲದಲ್ಲಿ ಸುಮಾರು 200 ಮಂದಿಯ ಪ್ರಾಣ ರಕ್ಷಣೆ ಮಾಡಿದ 16 ಜನರ ತಂಡದ ನಾಲ್ಕು ಮಂದಿ ಯುವಕರಿಗೆ ಅವರ ಕುಟುಂಬದ ಜೊತೆ ದೇವಾಲಯಕ್ಕೆ ಭೇಟಿ ನೀಡಲು ತಲಾ 1 ಲಕ್ಷ ರೂ. ನಗದನ್ನು ಕಾರ್ಯಕ್ರಮದ ವೇದಿಕೆಯಲ್ಲೇ ನೀಡುವ ಮೂಲಕ ಸಚಿವ ಝಮೀರ್ ಅಹ್ಮದ್ ಅವರು ಹೃದಯ ವೈಶಾಲ್ಯತೆ ಮೆರೆದಿದ್ದಾರೆ. 

ಪ್ರವಾಹ ಸಂದರ್ಭ 16 ಜನರ ತಂಡ ತಮ್ಮ ಪ್ರಾಣ ಲೆಕ್ಕಿಸದೆ 200 ಜನರ ಪ್ರಾಣ ರಕ್ಷಿಸಿದ್ದರು. ಆ ತಂಡದ 12 ಜನ ಯುವಕರಿಗೆ ಸಚಿವ ಝಮೀರ್ ಅವರು ಇತ್ತೀಚೆಗೆ ಮಡಿಕೇರಿಗೆ ಭೇಟಿ ನೀಡಿದ್ದ ವೇಳೆ ಅವರಿಗೆ ಉಮ್ರಾ ಯಾತ್ರೆಗೆ ತೆರಳಲು ನೆರವಿನ ಭರವಸೆ ನೀಡಿದ್ದರು.

ಇಂದು ಕುಡುಪು ಕರ್ನಾಟಕ ಹೌಸಿಂಗ್ ಬೋರ್ಡ್ ನಲ್ಲಿ ಕಾನೂನು ಮಾಪನ ಶಾಸ್ತ್ರ ಇಲಾಖಾ ಕಚೇರಿಗಳ ಸಂಕೀರ್ಣ 'ಮಾಪನ ಭವನ' ಕಟ್ಟಡಕ್ಕೆ ಶಿಲಾನ್ಯಾಸ ಕಾರ್ಯಕ್ರಮದ ವೇದಿಕೆಯಲ್ಲಿ ಸಚಿವರು ತಂಡದ ಇನ್ನುಳಿದ ನಾಲ್ವರು ಯುವಕರಾದ ಬಿಪಿನ್ ಕಲ್ಲುಗುಂಡಿ, ಮನೋಹರ ಕಲಿವೆ, ವಿಜಯ ನಿಡಿಂಜಿ ಮತ್ತು ದಿನೇಶ್ ಕುಲ್ಲುಗುಂಡಿ ಅವರಿಗೆ ಕುಟುಂಬದ ಜೊತೆ ದೇವಾಲಯಗಳಿಗೆ ತೆರಳಲು ಅನುಕೂಲವಾಗುವಂತೆ ತಲಾ ಒಂದು ಲಕ್ಷ ರೂ. ನಗದನ್ನು ವೇದಿಕೆಯಲ್ಲೇ ವಿತರಿಸಿದರು.

ಈ ಸಂದರ್ಭ ಮಾತನಾಡಿದ ಸಚಿವ ಝಮೀರ್ ಅಹ್ಮದ್ ಅವರೆಲ್ಲರು ಮಧ್ಯಮ ವರ್ಗದ ಯುವಕರಾಗಿದ್ದು ಪ್ರಾಣ ರಕ್ಷಣೆ ಮಾಡಿದ್ದಾರೆ. ನಾಲ್ವರು ಭಜರಂಗದಳ ಸದಸ್ಯರಾಗಿದ್ದರೂ ಯಾವುದೇ ರೀತಿಯ ತಾರತಮ್ಯ ಮಾಡದೆ ದೇವಸ್ಥಾನಕ್ಕೆ ಹೋಗಲು ಉಡುಗೊರೆಯನ್ನು ನೀಡುತ್ತಿದ್ದೇನೆ ಎಂದು ಹೇಳಿದರು.

ಈ ಸಂದರ್ಭ ಶಾಸಕ ವೇದವ್ಯಾಸ ಕಾಮತ್, ಮನಪಾ ಮೇಯರ್ ಬಾಸ್ಕರ್  ಮೊಯ್ಲಿ, ವಕ್ಫ್ ಬೋರ್ಡ್ ಅಧ್ಯಕ್ಷ ಕಣಚೂರು ಮೋನು, ಕೆಪಿಸಿಸಿ ಕಾರ್ಯದರ್ಶಿ ಶಾಹಿದ್, ರೊಟರಿ ಅಧ್ಯಕ್ಷ ಜಯಕುಮಾರ್ ಹಾಗು ಇತರರು ಈ ಸಂದರ್ಭ ಉಪಸ್ಥಿತರಿದ್ದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News