ಅಲ್ಪಸಂಖ್ಯಾತರ ಅಭಿವೃದ್ಧಿಗೆ 5 ಕೋಟಿ ರೂ. ಮಂಜೂರು: ಸಚಿವ ಝಮೀರ್ ಅಹ್ಮದ್

Update: 2018-10-11 09:04 GMT

ಮಂಗಳೂರು, ಅ. 11: ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ವೇದವ್ಯಾಸ ಕಾಮತ್‌ರವರ ಬೇಡಿಕೆಯ ಮೇರೆಗೆ ಕಾರ್ಯಕ್ರಮದ ವೇದಿಕೆಯಲ್ಲೇ 5 ಕೋಟಿ ರೂ.ಗಳನ್ನು ಮಂಜೂರು ಮಾಡುವುದಾಗಿ ಹೇಳಿ ಆಹಾರ ನಾಗರಿಕ ಸರಬರಾಜು, ಗ್ರಾಹಕರ ವ್ಯವಹಾರ ಮತ್ತು ಕಾನೂನು ಮಾಪನಶಾಸ್ತ್ರ ಇಲಾಖೆ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಮತ್ತು ವಕ್ಫ್ ಸಚಿವರಾರ ಬಿ.ಝೆಡ್. ಝಮೀರ್ ಅಹ್ಮದ್ ಖಾನ್‌ ಅವರು ನೆರೆದವರನ್ನು ಅಚ್ಚರಿಗೊಳಿಸಿದರು.

ಇಂದು ನಗರದ ಕುಡುಪು ಬಳಿಯ ಕರ್ನಾಟಕ ಹೌಸಿಂಗ್ ಬೋರ್ಡ್ ಜಾಗದಲ್ಲಿ ಕಾನೂನು ಮಾಪನಶಾಸ್ತ್ರ ಇಲಾಖಾ ಕಚೇರಿಗಳ ಸಂಕೀರ್ಣದ ‘ಮಾಪನ ಭವನ’ ಕಟ್ಟಡಕ್ಕೆ ಶಿಲಾನ್ಯಾಸ ನೆರವೇರಿಸಿದ ಬಳಿಕ ಸಭಾ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡುತ್ತಾ, 3 ಕೋಟಿ ರೂ.ಗಳನ್ನು ಒಂದು ವಾರದೊಳಗೆ ಬಿಡುಗಡೆಗೊಳಿಸುವುದಾಗಿ ಹೇಳುತ್ತಾ ವೇದಿಕೆಯಲ್ಲಿದ್ದ ಶಾಸಕರನ್ನೂ ಹುಬ್ಬೇರಿಸುವಂತೆ ಮಾಡಿದರು.

ಸಚಿವನಾಗಿ ಅಧಿಕಾರ ಸ್ವೀಕರಿಸಿ ನಾಲ್ಕು ತಿಂಗಳಾಗಿದೆ. ಇನ್ನೂ ಎರಡು ತಿಂಗಳಲ್ಲಿ ತಮಗೆ ವಹಿಸಲಾಗಿರುವ ಜವಾಬ್ಧಾರಿಯನ್ನು ಅರಿತುಕೊಂಡು ಜನರ ನಿರೀಕ್ಷೆಗೆ ತಕ್ಕಂತೆ ಕಾರ್ಯನಿರ್ಹಿಸುವುದಾಗಿ ಭರವಸೆ ನೀಡಿದರು.

ಬಿಪಿಎಲ್ ಕಾರ್ಡ್‌ಗೆ ಕುಟುಂಬ ಮುಖ್ಯಸ್ಥನ ಆದಾಯ ಪ್ರಮಾಣಪತ್ರ ಮಾತ್ರ ಸಾಕು

ಈವರೆಗೆ ಬಿಪಿಎಲ್ ಕಾರ್ಡ್ ಪಡೆಯಲು ಕುಟುಂಬದ ಸದಸ್ಯರೆಲ್ಲರೂ ಆದಾಯ ಪ್ರಮಾಣ ಪತ್ರವನ್ನು ಸಲ್ಲಿಸಬೇಕಾಗಿತ್ತು. ಇದೀಗ ಬಿಪಿಎಲ್ ಕಾರ್ಡ್ ಪಡೆಯಲು ಕೇವಲ ಕುಟುಂಬದ ಮುಖ್ಯಸ್ಥ ಮಾತ್ರವೇ ಆದಾಯ ಪ್ರಮಾಣ ಪತ್ರ ಸಲ್ಲಿಸಿದರೆ ಸಾಕೆಂಬ ಬದಲಾವಣೆಯನ್ನು ಮಾಡಲಾಗಿದೆ. ಪಡಿತರ ವಿತರಣೆಗೆ ಸಂಬಂಧಿಸಿ ಬಯೋಮೆಟ್ರಿಕ್ ವ್ಯವಸ್ಥೆ ಜಾರಿಗೊಳಿಸಿರುವುದರಿಂದ 580 ಕೋಟಿ ರೂ. ಸರಕಾರಕ್ಕೆ ಉಳಿತಾಯವಾಗಿದೆ. ಈ ವ್ಯವಸ್ಥೆಯಲ್ಲಿ ಲೋಪವಿದ್ದರೂ ಸಾಕಷ್ಟು ಸೋರಿಕೆಯನ್ನು ತಡೆಯಲಾಗಿದೆ. ಪಡಿತರ ಅಂಗಡಿಗಳನ್ನು ನಿರ್ವಹಿಸುವವರಿಗೆ ಹಿಂದೆ ಇದ್ದ ಗರಿಷ್ಠ ವಯೋಮಿತಿಯನ್ನು ತೆಗೆಯಲಾಗಿದೆ ಎಂದು ಸಚಿವರು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಶಾಸಕ ವೇದವ್ಯಾಸ ಕಾಮತ್ ಮಾತನಾಡಿ, ಸಚಿವರ ಬಳಿ ಇಂದು ತಮ್ಮ ಕ್ಷೇತ್ರದ ಅಲ್ಪಸಂಖ್ಯಾತರ ಅಭಿವೃದ್ಧಿಗೆ 5 ಕೋಟಿ ರೂ.ಗಳ ಅನುದಾನ ನೀಡುವಂತೆ ಲಿಖಿತ ಬೇಡಿಕೆಯನ್ನು ಇರಿಸಿದ್ದೆ. ತಕ್ಷಣ ಮಂಜೂರು ಮಾಡಿದ್ದು ಮಾತ್ರವಲ್ಲದೆ ಒಂದು ವಾರದೊಳಗೆ 3 ಕೋಟಿ ರೂ. ಬಿಡುಗಡೆ ಮಾಡುವುದಾಗಿ ಹೇಳಿದ್ದಾರೆ. ಶಾಸಕನಾಗಿ ಇದು ನನಗೆ ಪ್ರಥಮ ಅನುಭವ. ಸಚಿವರಿಗೆ ಅಭಿಂದನೆ ಸಲ್ಲಿಸುವುದಾಗಿ ಹೇಳಿದರು.

ಕರಾವಳಿಯಲ್ಲಿ ಉಳ್ಳಾಲ ಹೊರತುಪಡಿಸಿದರೆ ತಮ್ಮ ಕ್ಷೇತ್ರ ಅಧಿಕ ಅಲ್ಪಸಂಖ್ಯಾತರನ್ನು ಹೊಂದಿದೆ. ಬೆಂಗರೆ, ಬಜಾಲ್‌ನ ಫೈಝಲ್ ನಗರ, ಕುದ್ರೋಳಿ, ಬಂದರು, ಕಣ್ಣೂರು ಮೊದಲಾದ ಪ್ರದೇಶಗಳಲ್ಲಿ ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಈ ಬೇಡಿಕೆಯನ್ನು ಸಚಿವರಿಗೆ ನೀಡಿರುವುದಾಗಿ ಶಾಸಕರು ತಿಳಿಸಿದರು.

ಈ ಸಂರ್ಭ ಮೇಯರ್ ಭಾಸ್ಕರ ಕೆ., ಜಿಲ್ಲಾ ವಕ್ಫ್ ಬೋರ್ಡ್ ಅಧ್ಯಕ್ಷ ಕಣಚೂರು ಮೋನು, ಕೆಪಿಸಿಸಿ ಕಾರ್ಯದರ್ಶಿ ಶಾಹಿದ್, ರೋಟರಿ ಕ್ಲಬ್‌ನ ಜಯಕುಮಾರ್, ಶಕೀಲ್ ನವಾಝ್, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಜಿಲ್ಲಾ ಜಂಟಿ ನಿರ್ದೇಶಕ ಶ್ರೀನಿವಾಸ್, ಕಾನೂನು ಮಾಪನ ಶಾಸ್ತ್ರ ಇಲಾಖೆಯ ನಿಯಂತ್ರಕರಾದ ಡಾ.ಕೆ.ಎನ್. ಅನುರಾಧ ಉಪಸ್ಥಿತರಿದ್ದರು. ಕಾನೂನು ಮಾಪನಶಾಸ್ತ್ರ ಇಲಾಖೆಯ ಎಫ್.ಎಸ್. ಹೂಗಾರ ಸ್ವಾಗತಿಸಿದರು. ಸಹಾಯಕ ನಿಯಂತ್ರಕ ಗಜೇಂದ್ರ ವಿ. ಎಡಕೆ ಪ್ರಾಸ್ತಾವಿಕವಾಗಿ ಮಾನಾಡಿದರು. ತೇಜಸ್ವಿನಿ ಪ್ರಾರ್ಥಿಸಿದರು.

ಸಚಿವ- ಶಾಸಕರ ನಡುವೆ ಹಾಸ್ಯ ಚಟಾಕಿ !

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಸಚಿವರ ನಡೆಗೆ ಅಭಿನಂದನೆ ಸಲ್ಲಿಸುತ್ತಾ, ಮುಂದಿನ ಐದು ವರ್ಷಗಳ ಅವಧಿಯಲ್ಲಾ ತಲಾ 5 ಕೋಟಿ ರೂ.ಗಳಂತೆ ತಮ್ಮ ಕ್ಷೇತ್ರಕ್ಕೆ ಅನುದಾನವನ್ನು ಒದಗಿಸಬೇಕೆಂದು ಶಾಸಕ ವೇದವ್ಯಾಸ ಕಾಮತ್‌ರವರು ಮನವಿ ಮಾಡಿಕೊಂಡರು. ಮಧ್ಯ ಪ್ರವೇಶಿಸಿ ಮಾತನಾಡಿದ ಸಚಿವ ಝಮೀರ್ ಅಹ್ಮದ್, ಹಾಗಾದರೆ ಐದು ವರ್ಷಗಳ ಕಾಲ ಉಪದ್ರವ ನೀಡದೆ ನಮಗೆ ಆಡಳಿತ ನಡೆಸಲು ಅವಕಾಶ ನೀಡುತ್ತೀರಿ ಎಂದಾಯಿತು ಎಂದು ಹಾಸ್ಯ ಚಟಾಕಿ ಹಾರಿಸಿದರು.

ತಕ್ಷಣ ಪ್ರತಿಕ್ರಿಯಿಸಿದ ಶಾಸಕ ವೇದವ್ಯಾಸ ಕಾಮತ್, ನಾವು ಯಾವತ್ತೂ ಉಪದ್ರವ ಮಾಡಿಲ್ಲ. ನೀವಾಗಿಯೇ ಬಿದ್ದುಕೊಂಡರೆ ನಾವೇನು ಮಾಡಲಾಗುವುದಿಲ್ಲ. ನಾವು ಬೀಳಿಸುವುದಿಲ್ಲ ಎಂದು ಹಾಸ್ಯವಾಗಿಯೇ ನುಡಿದರು.

93 ಲಕ್ಷ ರೂ. ವೆಚ್ಚ- 43 ಸೆಂಟ್ಸ್ ಜಾಗ

ಕಾನೂನು ಮಾಪನಶಾಸ್ತ್ರ ಇಲಾಖಾ ಕಚೇರಿಗಳ ಸಂಕೀರ್ಣವು ಪ್ರಸ್ತುತ ಬಾಡಿಗೆ ಕಟ್ಟಡದಲ್ಲಿ ನಿರ್ವಹಿಸಲ್ಪಡುತ್ತಿದೆ. ಇದೀಗ ಕುಡುಪು ಕರ್ನಾಟಕ ಹೌಸಿಂಗ್ ಬೋರ್ಡ್ ಬಳಿ 43 ಸೆಂಟ್ಸ್ ಭೂಮಿಯಲ್ಲಿ ನೂತನ ಮಾಪನ ಭವನಕ್ಕೆ ಶಿಲಾನ್ಯಾಸ ನಡೆದಿದ್ದು, 2200 ಚದರ ಅಡಿಯ ಕಟ್ಟಡ 93 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣವಾಗಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News