ಮಂಗಳೂರು: ತಂಬಾಕು ಉದ್ಯಮದ ಉಳಿವಿಗೆ ಆಗ್ರಹಿಸಿ ಮನವಿ

Update: 2018-10-11 12:08 GMT

ಮಂಗಳೂರು, ಅ.11: ಜಾಗತಿಕ ಆರೋಗ್ಯ ಸಂಸ್ಥೆಯು ಧೂಮಪಾನದಿಂದ ಕ್ಯಾನ್ಸರ್ ರೋಗ ಬರುವುದೆಂಬ ಪ್ರಚಾರ ಮಾಡಿ ತಂಬಾಕು ಉದ್ಯಮದ ನಾಶಕ್ಕೆ ಕಾರಣವಾಗುತ್ತಿದೆ. ಸಂಸ್ಥೆಯ ವರದಿಯಿಂದ ತಂಬಾಕು ಉದ್ಯಮದಲ್ಲಿ ನೇರ ಹಾಗೂ ಪರೋಕ್ಷವಾಗಿ ತೊಡಕಿಸಿಕೊಂಡವರ ಬದುಕು ಅತಂತ್ರವಾಗುವ ಸ್ಥಿತಿ ಇದೆ. ಈ ಮಧ್ಯೆ ರಾಜಸ್ಥಾನದ ಮಾನವ ಹಕ್ಕು ಆಯೋಗವು ಎಪ್ರಿಲ್ 16ರಂದು ಸುತ್ತೋಲೆ ಹೊರಡಿಸಿ ಸಾರ್ವಜನಿಕರಿಂದ ತಂಬಾಕು ಕೃಷಿ ಉತ್ಪನ್ನ ಹಾಗೂ ತಂಬಾಕು ಉದ್ಯಮವನ್ನು ಸಂಪೂರ್ಣವಾಗಿ ನಿಷೇಧಿಸುವ ವಿಷಯದ ಮೇಲೆ ಸಾರ್ವಜನಿಕರಿಂದ ಅಭಿಪ್ರಾಯ ಮತ್ತು ಸಲಹೆಗಳನ್ನು ಆಹ್ವಾನಿಸಿದೆ.

ಆ ಹಿನ್ನೆಲೆಯಲ್ಲಿ ತಂಬಾಕು ಉದ್ಯಮ ಉಳಿವಿಗೆ ಸೂಕ್ತ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿ ಎಚ್‌ಎಂಎಸ್ ಮುಖಂಡರ ನಿಯೋಗವು ಗುರುವಾರ ದ.ಕ.ಜಿಲ್ಲಾಧಿಕಾರಿಗಳ ಮೂಲಕ ಪ್ರಧಾನಿ ನರೇಂದ್ರ ಮೋದಿ ಹಾಗೂ ರಾಜಸ್ಥಾನ ಮಾನವ ಹಕ್ಕು ಆಯೋಗಕ್ಕೆ ಮನವಿ ಸಲ್ಲಿಸಿದೆ.

ಭಾರತದಲ್ಲಿ ಬೀಡಿ ಉದ್ಯಮದಲ್ಲಿ ಸುಮಾರು 3 ಕೋಟಿಗಿಂತಲೂ ಹೆಚ್ಚಿನ ಕಾರ್ಮಿಕರು ದುಡಿಯುತ್ತಿದ್ದಾರೆ. ಅದರಲ್ಲಿ ಬೀಡಿ ಕಟ್ಟುವವರು, ಎಲೆ ಶೇಖರಿಸುವವರು, ಲೇಬಲ್ ಹಾಕುವವರು, ಕತ್ತರಿ ಮತ್ತು ಅಚ್ಚು ತಯಾರಿಸುವವರು, ತಂಬಾಕು ಮಿಶ್ರಣ ಮಾಡುವವರು. ಬೀಡಿ ಚಾನಿಗೆ ಹಾಕುವವರು, ಎಲೆ ಮತ್ತು ತಂಬಾಕು ತಲೆ ಹೊರೆ ಕಾರ್ಮಿಕರು, ನೂಲು ತಯಾರಿಸಿ ಬಣ್ಣ ಹಚ್ಚಿಸುವವರು, ಬೀಡಿಯ ಕಚ್ಚಾ ಎಲೆ ಮತ್ತು ತಂಬಾಕು ಬೀಡಿ ಕಾರ್ಮಿಕರಿಗೆ ತಲುಪಿಸುವ ಬೀಡಿ ಗುತ್ತಿಗೆದಾರರು, ಕಚೇರಿಯಲ್ಲಿ ಕೆಲಸ ನಿರ್ವಹಿಸುವ ಸಿಬ್ಬಂದಿ ವರ್ಗ, ವಾಹನಗಳ ಚಾಲಕ-ನಿರ್ವಾಹಕರು ಇವರೆಲ್ಲಾ ಈ ಉದ್ಯಮದಲ್ಲಿ ದುಡಿಯುವ ಕಾರ್ಮಿಕ ವರ್ಗವಾಗಿದೆ.

ಜಾಗತಿಕ ಆರೋಗ್ಯ ಸಂಸ್ಥೆಯು ತಂಬಾಕು ಸೇವನೆಯಿಂದ ಜನರ ಮೇಲೆ ಆಗುವ ಪರಿಣಾಮ ಮತ್ತು ಕ್ಯಾನ್ಸರ್ ರೋಗವನ್ನು ಸಂಪೂರ್ಣವಾಗಿ ಹೋಗಲಾಡಿಸಲು ತಂಬಾಕು ಕೃಷಿ ಮತ್ತು ಈ ಉದ್ಯಮವನ್ನು ಸಂಪೂರ್ಣವಾಗಿ ನಿಷೇಧಿಸಲು ಒತ್ತಾಯ್ತಿಸಿದೆ. ಭಾರತ ಮೂಲದ ಕೆಲವು ಸ್ವಯಂ ಸೇವಾ ಸಂಸ್ಥೆ ಮತ್ತು ಕೆಲವು ಜಾಗತಿಕ ಔದ್ಯೋಗಿಕ ಘಟಕಗಳು ಲಕ್ಷಾಂತರ ಬಡ ತಂಬಾಕು ಉದ್ಯಮ ನಿರತ ಬಡ ಕಾರ್ಮಿಕ ವರ್ಗವನ್ನು ನಿರ್ನಾಮ ಮಾಡಲು ತೆರೆಮರೆಯಿಂದ ಪ್ರಯತ್ನಿಸುತ್ತಿದೆ. ಇದನ್ನು ಗಂಭೀರವಾಗಿ ಪರಿಗಣಿಸಬೇಕು ಮತ್ತು ತಂಬಾಕು ಉದ್ಯಮವನ್ನು ನಿಷೇಧ ಮಾಡಬಾರದು ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.

ಭಾರತದಲ್ಲಿ ಈ ಉದ್ಯಮವನ್ನು ನಂಬಿ ಬದುಕುತ್ತಿರುವ ಕಾರ್ಮಿಕ ವರ್ಗವು ಸುಮಾರು 3 ಕೋಟಿ ಜನರಿದ್ದಾರೆ. ಮುಖ್ಯವಾಗಿ ಅರಣ್ಯವಾಸಿಗಳು ತೀರಾ ಬಡತನದಲ್ಲಿರುವ ಕೆಳವರ್ಗದ ಜನರು ಒಳಗೊಂಡಿರುತ್ತಾರೆ. ತಂಬಾಕು ಉತ್ಪನ್ನ ನಿಷೇಧಿಸಿದರೆ ಇವರೆಲ್ಲಾ ನಿರುದ್ಯೋಗಿಗಳಾಗುವ ಭೀತಿ ಇದೆ. ಅಮೇರಿಕಾ, ಲ್ಯಾಟಿನ್ ಅಮೇರಿಕಾ, ಯುರೋಪ್ ಮತ್ತಿತರ ದೇಶಗಳಲ್ಲಿ 18 ವರ್ಷ ಮೇಲ್ಪಟ್ಟವರು ಸಿಗರೇಟನ್ನು ಸೇದುತ್ತಿದ್ದಾರೆ. ಜಾಗತಿಕ ಆರೋಗ್ಯ ಸಂಸ್ಥೆಯು ಆ ದೇಶಗಳಲ್ಲಿ ತಂಬಾಕು ಉತ್ಪನ್ನಗಳನ್ನು ನಿಷೇಧಿಸಲು ಸಲಹೆ ನೀಡುವುದಿಲ್ಲ. ಆದರೆ ಭಾರತದಲ್ಲಿ ಯಾಕೆ ಆತುರಪಡುತ್ತಿದೆ ಎಂಬುದನ್ನು ಮನಗಾಣಬೇಕಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.

ದೇಶದಲ್ಲಿ ಸುಮಾರು ಒಂದು ಕೋಟಿಗೂ ಅಧಿಕ ಬೀಡಿ ಸುತ್ತುವ ಕಾರ್ಮಿಕರಿದ್ದು, ಅವರಿಗೆ ಪರ್ಯಾಯ ಉದ್ಯೋಗ ನೀಡಬೇಕು. ಅದರಂತೆ ಇದನ್ನೆ ನಂಬಿ ಬದುಕುವ ಸಾವಿರಾರು ಬೀಡಿ ಗುತ್ತಿಗೆದಾರರಿಗೂ ಉದ್ಯೋಗ ಕಲ್ಪಿಸಬೇಕು. ತಂಬಾಕಿನ ಬದಲಾಗಿ ಇತರ ಬೆಳೆಗಳನ್ನು ಬೆಳೆಸಿ ತಕ್ಕ ಆದಾಯ ತರುವ ವ್ಯವಸ್ಥೆ ಮಾಡಬೇಕು. ತೆಂದು ಎಲೆಗಳನ್ನು ಒಟ್ಟು ಮಾಡುವ ಗುಡ್ಡಗಾಡು ಜನರಿಗೆ ಅವರ ಉದ್ಯೋಗವನ್ನು ತಡೆದರೆ ಅವರೆಲ್ಲರಿಗೂ ಅವರ ಅರ್ಹತೆಗೆ ತಕ್ಕ ಕೆಲಸ ನೀಡಬೇಕು. ತಂಬಾಕನ್ನು ನಿಷೇಧಿಸಿದಲ್ಲಿ ಜನರು ಇತರ ನಶೆ ಪದಾರ್ಥಗಳ ದಾಸರಾಗುವ ಸಂಭವ ಇದೆ ಎಂದು ಎಚ್ಚರಿಸಲಾಗಿದೆ.

ಎಚ್‌ಎಂಎಸ್ ನಿಯೋಗದಲ್ಲಿ ರಾಜ್ಯಾಧ್ಯಕ್ಷ ಎಂ.ಸುರೇಶ್ಚಂದ್ರ ಶೆಟ್ಟಿ, ಜಿಲ್ಲಾಧ್ಯಕ್ಷ ಮುಹಮ್ಮದ್ ರಫಿ, ದ.ಕ. ಜಿಲ್ಲಾ ಬೀಡಿ ಗುತ್ತಿಗೆದಾರರ ಸಂಘದ ಅಧ್ಯಕ್ಷ ಹರೀಶ್ ಕೆ.ಎಸ್. ಮತ್ತಿತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News