ಲೈಂಗಿಕ ಕಿರುಕುಳ ಕಾನೂನುಗಳ ಜಾರಿಗೆ ಉದಾಸೀನ: ಟಿ.ವಿ.ಮೋಹನದಾಸ ಪೈ

Update: 2018-10-11 12:59 GMT

ಹೈದರಾಬಾದ್,ಅ.11: ‘ಮೀ ಟೂ’ ಅಭಿಯಾನವು ಭಾರತದಲ್ಲಿ ಪ್ರಬಲಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಮಾಜಿ ಇನ್ಫೋಸಿಸ್ ನಿರ್ದೇಶಕ ಟಿ.ವಿ.ಮೋಹನದಾಸ ಪೈ ಅವರು,ಉದ್ಯೋಗದ ಸ್ಥಳಗಳಲ್ಲಿ ಲೈಂಗಿಕ ಕಿರುಕುಳ ಕಾನೂನುಗಳನ್ನು ಅನುಷ್ಠಾನಿಸುವಲ್ಲಿ ಸರಕಾರ ಮತ್ತು ಇತರ ಸಂಸ್ಥೆಗಳು ಉದಾಸೀನದ ಧೋರಣೆಯನ್ನು ಹೊಂದಿವೆ ಎಂದು ಗುರುವಾರ ಇಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದರು.

ಲೈಂಗಿಕ ಕಿರುಕುಳವನ್ನು ತಡೆಯಲು ಈಗಿರುವ ಕಾನೂನು ಧಾರಾಳವಾಗಿ ಸಾಕು,ಆದರೆ ಮಾಮೂಲಿನಂತೆ ಅದರ ಅನುಷ್ಠಾನವು ದುರ್ಬಲವಾಗಿದೆ ಎಂದು ಹೇಳಿದ ಅವರು,ಇದ್ದುದರಲ್ಲಿ ಮಾಹಿತಿ ತಂತ್ರಜ್ಞಾನ ಉದ್ಯಮವು ಈ ಕಾನೂನನ್ನು ಉತ್ತಮವಾಗಿ ಅನುಷ್ಠಾನಿಸುತ್ತಿದೆ ಮತ್ತು ಇತರರಿಗಿಂತ ಮುಂದಿದೆ ಎಂದರು.

ಎಲ್ಲ ಸಂಸ್ಥೆಗಳು ತಮ್ಮ ಕಚೇರಿಗಳಲ್ಲಿ ಲೈಂಗಿಕ ಕಿರುಕುಳ ಕಾನೂನುಗಳನ್ನು ಜಾರಿಗೊಳಿಸುವುದು ಅಗತ್ಯವಾಗಿದೆ,ಆದರೆ ಹೆಚ್ಚಿನವು,ವಿಶೇಷವಾಗಿ ಮಾಧ್ಯಮ ಮತ್ತು ಮನೋರಂಜನಾ ಕ್ಷೇತ್ರಗಳು ಈ ಬಗ್ಗೆ ಉದಾಸೀನತೆಯನ್ನು ಹೊಂದಿವೆ ಎಂದ ಅವರು,‘ಮೀ ಟೂ’ ಅಭಿಯಾನವು ಜಾಗತಿಕ ಆಂದೋಲನವಾಗುತ್ತಿರುವುದು ಒಳ್ಳೆಯ ಬೆಳವಣಿಗೆಯಾಗಿದೆ. ಕಾನೂನನ್ನು ಪಾಲಿಸದಿರುವ ಕಂಪನಿಗಳ ವಿರುದ್ಧ ಸರಕಾರವು ಕ್ರಿಮಿನಲ್ ಕಾನೂನು ಕ್ರಮಗಳನ್ನು ಜರುಗಿಸಬೇಕು. ಆದರೆ ಇದಕ್ಕಾಗಿ ಸೂಕ್ತ ವಿಧಿವಿಧಾನವನ್ನು ಸರಕಾರವು ಮೊದಲು ಖಚಿತಪಡಿಸಿಕೊಳ್ಳಬೇಕು. ತನಗೆ ತಿಳಿದುಬಂದಿರುವಂತೆ ಸರಕಾರವೇ ಬಹುಶಃ ದೊಡ್ಡ ಅಪರಾಧಿಯಾಗಿದೆ ಎಂದರು.

ಮುರಿದು ಬಿದ್ದಿರುವ ನ್ಯಾಯಾಂಗ ವ್ಯವಸ್ಥೆಯು ಭಾರತದ ಪಾಲಿಗೆ ಅತಿ ದೊಡ್ಡ ಸವಾಲು ಆಗಿದೆ. ನಮ್ಮ ಸಮಾಜದಲ್ಲಿ ಕಾನೂನಿನ ಆಡಳಿತಕ್ಕೆ ಗೌರವದ ಕೊರತೆಯಿದೆ. ಹಲವಾರು ಪೊಲೀಸರು ಮತ್ತು ಕಾನೂನು ಅಧಿಕಾರಿಗಳು ಭ್ರಷ್ಟರಾಗಿದ್ದಾರೆ ಮತ್ತು ಸಕಾಲದಲ್ಲಿ ನ್ಯಾಯದಾನದ ತಮ್ಮ ಕರ್ತವ್ಯದಲ್ಲಿ ನ್ಯಾಯಾಲಯಗಳು ವಿಫಲಗೊಳ್ಳುತ್ತಿವೆ. ಇದು ಬದಲಾಗುವ ಅಗತ್ಯವಿದೆ ಮತ್ತು ಆಗ ಮಾತ್ರ ಸುಧಾರಣೆಯನ್ನು ಕಾಣಬಹುದು ಎಂದು ಪೈ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News