ಆಮ್ರಪಾಲಿ ಗ್ರೂಪ್‌ನ ಮೂವರು ನಿರ್ದೇಶಕರಿಗೆ ಸುಪ್ರೀಂ ನೋಟಿಸ್

Update: 2018-10-11 13:48 GMT

ಹೊಸದಿಲ್ಲಿ,ಅ.11: ವಿವಿಧ ನ್ಯಾಯಾಲಯಗಳ ಆದೇಶವನ್ನು ನಿರ್ಲಕ್ಷಿಸಿದ ಕಾರಣಕ್ಕಾಗಿ ಆಮ್ರಪಾಲಿ ಗ್ರೂಪ್‌ನ ಮುಖ್ಯ ವ್ಯವಸ್ಥಾಪಕ ನಿರ್ದೇಶಕ ಸೇರಿದಂತೆ ಮೂವರು ನಿರ್ದೇಶಕರಿಗೆ ಸರ್ವೋಚ್ಚ ನ್ಯಾಯಾಲಯ ನ್ಯಾಯಾಂಗ ನಿಂದನೆ ನೋಟಿಸ್ ಜಾರಿ ಮಾಡಿದ್ದು ನಾಲ್ಕು ವಾರಗಳಲ್ಲಿ ಪ್ರತಿಕ್ರಿಯೆ ನೀಡಲು ಆಗ್ರಹಿಸಿದೆ. ನೊಯ್ಡ ಸೆಕ್ಟರ್ 62ರ ಎಸ್‌ಎಚ್‌ಒ ಎದುರು ಹಾಜರಾಗುವಂತೆ ಆಮ್ರಪಾಲಿ ನಿರ್ದೇಶಕರಾದ ಅನಿಲ್ ಕುಮಾರ್ ಶರ್ಮಾ, ಶಿವ ಪ್ರಿಯಾ ಮತ್ತು ಅಜಯ್ ಕುಮಾರ್ ಅವರಿಗೆ ನ್ಯಾಯಾಧೀಶ ಯು.ಯು.ಲಲಿತ್ ಮತ್ತು ಡಿ.ವೈ.ಚಂದ್ರಚೂಡ್ ಅವರ ನ್ಯಾಯ ಪೀಠ ಆದೇಶಿಸಿದೆ. ಈ ಮೂವರನ್ನು ಸಂಜೆ ಆರು ಗಂಟೆಯ ನಂತರ ಹೊಟೇಲ್ ಪಾರ್ಕ್ ಅಸೆಂಟ್‌ಗೆ ಕರೆದೊಯ್ಯುವಂತೆ ಶ್ರೇಷ್ಠ ನ್ಯಾಯಾಲಯವು ನೊಯ್ಡಾ ಎಸ್‌ಎಸ್‌ಪಿಗೆ ಸೂಚಿಸಿದೆ. ಅಲ್ಲಿ ಅವರ ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಳ್ಳುವಂತೆ ಮತ್ತು ಪೊಲೀಸ್ ಲಾಕಪ್ ಬದಲಾಗಿ ಮುಂದಿನ ಹದಿನೈದು ದಿನಗಳ ಕಾಲ ರಾತ್ರಿ ವೇಳೆಯನ್ನು ಈ ಹೊಟೇಲ್‌ನಲ್ಲೇ ಕಳೆಯುವಂತೆ ನಿರ್ದೇಶಕರಿಗೆ ಸೂಚಿಸಲಾಗಿದೆ.

ಹೊಟೇಲ್ ಒಳಗೆ ಅವರು ಪೊಲೀಸ್ ಕಣ್ಗಾವಲಿನಲ್ಲಿ ಇರಲಿದ್ದಾರೆ ಎಂದು ಘನ ನ್ಯಾಯಾಲಯ ತಿಳಿಸಿದೆ.

ನೊಯ್ಡ ಮತ್ತು ಗ್ರೇಟರ್ ನೊಯ್ಡದಲ್ಲಿರುವ ಆಮ್ರಪಾಲಿ ಗ್ರೂಪ್‌ಗೆ ಸೇರಿದ ಜಪ್ತಿ ಮಾಡಲಾದ ಆಸ್ತಿಯು ಮುಂದಿನ ಹದಿನೈದು ದಿನಗಳ ಕಾಲ ದಾಖಲೆ ಪರಿಶೀಲನೆಯ ಸಲುವಾಗಿ ಬೆಳಿಗ್ಗೆ 8 ಗಂಟೆಯಿಂದ ಸಂಜೆ 6ರವರೆಗೆ ತೆರೆದಿರಲಿದೆ ಎಂದು ನ್ಯಾಯಾಲಯ ತಿಳಿಸಿದೆ.

ಸಂಸ್ಥೆಗೆ ಸೇರಿದ 46 ಕಂಪೆನಿಗಳ ದಾಖಲೆಗಳನ್ನು ಒಂಬತ್ತು ಕಡೆಗಳಲ್ಲಿ ಸಂಗ್ರಹಿಸಿಡಲಾಗಿದೆ ಎಂದು ಪೊಲೀಸ್ ಕಸ್ಟಡಿಯಲ್ಲಿರುವ ನಿರ್ದೇಶಕರು ತಿಳಿಸಿದ ಹಿನ್ನೆಲೆಯಲ್ಲಿ ಈ ಒಂಬತ್ತು ಆಸ್ತಿಗಳನ್ನು ಜಪ್ತಿ ಮಾಡುವಂತೆ ನ್ಯಾಯಾಲಯ ಬುಧವಾರ ಸೂಚಿಸಿತ್ತು. ಆಮ್ರಪಾಲಿ ಗ್ರೂಪ್ ನಿರ್ಮಿಸುತ್ತಿರುವ 42,000 ಫ್ಲಾಟ್‌ಗಳನ್ನು ಖರೀದಿಸಿದ್ದ ಗ್ರಾಹಕರು ಫ್ಲಾಟ್‌ಗಳನ್ನು ತಮ್ಮ ಸುಪರ್ದಿಗೆ ನೀಡಬೇಕೆಂದು ಕೋರಿ ಹಾಕಿದ್ದ ಅರ್ಜಿಯ ವಿಚಾರಣೆಯನ್ನು ನಡೆಸುತ್ತಿದ್ದ ವೇಳೆ ನ್ಯಾಯಾಲಯ ಈ ಆದೇಶವನ್ನು ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News