ಶಬರಿಮಲೆ ತೀರ್ಪು: ಸಚಿವರ ಬೆಂಗಾವಲನ್ನು ತಡೆದ ಯುವಮೋರ್ಚಾ ಕಾರ್ಯಕರ್ತರು

Update: 2018-10-11 14:00 GMT

ತಿರುವನಂತಪುರಂ,ಅ.11: ಶಬರಿಮಲೆ ತೀರ್ಪನ್ನು ವಿರೋಧಿಸಿ ಗುರುವಾರ ಕೇರಳ ದೇವಸ್ವಂ ಸಚಿವ ಕಡಕಂಪಳ್ಳಿ ಸುರೇಂದ್ರನ್ ನಿವಾಸದತ್ತ ಯುವಮೋರ್ಚಾ ಕಾರ್ಯಕರ್ತರು ನಡೆಸಿದ ಮೆರವಣಿಗೆ ಹಿಂಸಾಚಾರಕ್ಕೆ ತಿರುಗಿದ ಪರಿಣಾಮ ಪೊಲೀಸರು ಗುಂಪನ್ನು ಚದುರಿಸಲು ಜಲ ಫಿರಂಗಿ ಮತ್ತು ಅಶ್ರವಾಯು ದಾಳಿ ನಡೆಸಿದರು.

ಸಚಿವರ ನಿವಾಸದ ಕೆಲವು ಮೀಟರ್ ದೂರದಲ್ಲಿ ಅಳವಡಿಸಲಾಗಿದ್ದ ಬ್ಯಾರಿಕೇಡ್‌ಗಳನ್ನು ಕಾರ್ಯಕರ್ತರು ಮುರಿಯಲು ಪ್ರಯತ್ನಿಸಿದಾಗ ಪೊಲೀಸರು ಮತ್ತು ಪ್ರತಿಭಟನಾಕಾರರ ಮಧ್ಯೆ ಸಂಘರ್ಷವೇರ್ಪಟ್ಟಿತು.

ಘಟನೆಗೆ ಪ್ರತಿಕ್ರಿಯೆ ನೀಡಿರುವ ಆಡಳಿತಾರೂಡ ಸಿಪಿಐ(ಎಂ), ಶಬರಿಮಲೆ ವಿಷಯದಲ್ಲಿ ಬಿಜೆಪಿ, ಕಾಂಗ್ರೆಸ್ ಹಾಗೂ ಇತರ ಸಂಘಟನೆಗಳು ನಡೆಸುತ್ತಿರುವ ಪ್ರತಿಭಟನೆಗಳು ಸರಕಾರವನ್ನು ಅಸ್ಥಿರಗೊಳಿಸುವ ತಂತ್ರವಾಗಿದೆ ಎಂದು ದೂರಿದೆ.

ಪ್ರತಿಭಟನೆ ನಡೆಯುತ್ತಿರುವ ರೀತಿ, ಸಚಿವರ ಬೆಂಗಾವಲನ್ನು ತಡೆದಿರುವುದು ಮತ್ತು ಮುಖ್ಯಮಂತ್ರಿಯನ್ನು ಅವಮಾನ ಮಾಡಿರುವುದು ಹಾಗೂ ತಿರುವನಂತರಪುರಂನ ದೇವಸ್ವಂ ಮಂಡಳಿ ಕಚೇರಿಗಳ ಮೇಲೆ ದಾಳಿ ನಡೆಸಿರುವುದನ್ನು ಕಂಡಾಗ ಇದು ಎಲ್‌ಡಿಎಫ್ ಸರಕಾರವನ್ನು ಕೆಳಗಿಳಿಸಲು ವಿರೋಧಿಗಳು ನಡೆಸುತ್ತಿರುವ ಸಂಚು ಎಂಬುದು ಸ್ಪಷ್ಟವಾಗುತ್ತದೆ ಎಂದು ಎಲ್‌ಡಿಎಫ್ ಸಂಚಾಲಕ ಎ.ವಿಜಯರಾಘವನ್ ತಿಳಿಸಿದ್ದಾರೆ.

ರಾಜ್ಯದಲ್ಲಿ ಕಳೆದ ತಿಂಗಳು ಉಂಟಾದ ನೆರೆಯ ವೇಳೆ ಸರಕಾರ ನಡೆಸಿದ ರಕ್ಷಣಾ ಮತ್ತು ಪರಿಹಾರ ಕಾರ್ಯಗಳ ಬಗ್ಗೆ ಎಲ್ಲೆಡೆ ಪ್ರಶಂಸೆಗಳು ವ್ಯಕ್ತವಾದ ಹಿನ್ನೆಲೆಯಲ್ಲಿ ಸರಕಾರಕ್ಕೆ ತೊಂದರೆ ನೀಡಲು ಈ ಪ್ರತಿಭಟನೆಗಳನ್ನು ನಡೆಸಲಾಗುತ್ತಿದೆ ಎಂದು ಅವರು ಅಭಿಪ್ರಾಯಿಸಿದ್ದಾರೆ. ಸರ್ವೋಚ್ಚ ನ್ಯಾಯಾಲಯ ತೀರ್ಪಿನ ವಿರುದ್ಧ ಪರಿಶೀಲನಾ ಅರ್ಜಿಯನ್ನು ಹಾಕುವಂತೆ ಕಾಂಗ್ರೆಸ್,ಬಿಜೆಪಿ ಹಾಗೂ ಇತರ ಹಿಂದೂ ಸಂಘಟನೆಗಳು ರಾಜ್ಯ ಸರಕಾರವನ್ನು ಆಗ್ರಹಿಸಿದೆ. ಆದರೆ ತಾನು ಇಂಥ ಯಾವುದೇ ಅರ್ಜಿಯನ್ನು ಹಾಕುವುದಿಲ್ಲ ಎಂದು ಸರಕಾರ ಈಗಾಗಲೇ ಸ್ಪಷ್ಟಪಡಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News