ನವರಾತ್ರಿ ಕಾರಣಕ್ಕೆ 400 ಮಾಂಸದಂಗಡಿ ಮುಚ್ಚಿಸಿದ ಶಿವಸೇನೆ

Update: 2018-10-11 14:20 GMT

 ಚಂಡೀಗಢ, ಅ.11: ನವರಾತ್ರಿ ಆಚರಣೆಯ ಹಿನ್ನೆಲೆಯಲ್ಲಿ ಹರ್ಯಾಣದ ಗುರುಗಾಂವ್ ನಗರದಲ್ಲಿರುವ ಸುಮಾರು 400 ಕೋಳಿ ಹಾಗೂ ಮಾಂಸದ ಅಂಗಡಿಗಳನ್ನು ಶಿವಸೇನೆಯ ಕಾರ್ಯಕರ್ತರು ಬಲವಂತವಾಗಿ ಮುಚ್ಚಿಸಿದ್ದಾರೆ ಎಂದು ಶಿವಸೇನೆ ಹಾಗೂ ಇತರ ಸಂಘಟನೆಗಳು ತಿಳಿಸಿವೆ. ನಗರದ ಹಳೆಯ ರೈಲ್ವೇ ರಸ್ತೆಯ ಬಳಿಇರುವ ಶಿವ ದೇವಸ್ಥಾನದಲ್ಲಿ ಒಟ್ಟು ಸೇರಿದ ವಿವಿಧ ಹಿಂದೂ ಸಂಘಟನೆಗಳು ಬಳಿಕ ಅಲ್ಲಿಂದ ಒಟ್ಟಾಗಿ ವಿವಿಧೆಡೆ ತೆರಳಿ ಮಾಂಸದಂಗಡಿಗಳನ್ನು ಮುಚ್ಚಿಸಿದರು ಎಂದು ಶಿವಸೇನೆಯ ಗುರುಗಾಂವ್ ವಿಭಾಗದ ಅಧ್ಯಕ್ಷ ಗೌತಮ್ ಸೈನಿ ತಿಳಿಸಿದ್ದಾರೆ. ಸುಮಾರು 300ರಷ್ಟಿದ್ದ ಶಿವಸೇನೆ ಕಾರ್ಯಕರ್ತರು ಸೂರತ್ ನಗರ, ಅಶೋಕ್ ವಿಹಾರ, ಸೆಕ್ಟರ್ 5 ಮತ್ತು 9, ಪಟೌಡಿ ಚೌಕ, ಜಾಕೊಬ್‌ಪುರ, ಸದರ್ ಬಝಾರ್, ಖಂಡ್ಸ ಅನಾಜ್ ಮಂಡಿ, ಬಸ್ಸು ನಿಲ್ದಾಣ, ಡಿಎಲ್‌ಎಫ್ ಪ್ರದೇಶ, ಸೋಹ್ನ ಮತ್ತು ಸೆಕ್ಟರ್ 14ರಲ್ಲಿರುವ ಮಾಂಸದಂಗಡಿಗಳನ್ನು ಬಲವಂತವಾಗಿ ಮುಚ್ಚಿಸಿದರು ಎಂದು ಸ್ಥಳೀಯರು ದೂರಿದ್ದಾರೆ. 2014ರಲ್ಲಿ ಬಿಜೆಪಿ ಕೇಂದ್ರದಲ್ಲಿ ಹಾಗೂ ಹರ್ಯಾಣದಲ್ಲಿ ಅಧಿಕಾರಕ್ಕೆ ಬಂದಂದಿನಿಂದ ಪ್ರತೀ ವರ್ಷ ನವರಾತ್ರಿ ಸಂದರ್ಭ ಇಂತಹ ಕಾರ್ಯಾಚರಣೆ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಅರ್ಧಾಂಶದಷ್ಟು ಮಾಂಸದಂಗಡಿಗಳು ಸ್ವತಃ ಮುಚ್ಚಿವೆ. ಉಳಿದವುಗಳನ್ನು ಬಲವಂತವಾಗಿ ಮುಚ್ಚಿಸಲಾಗಿದೆ ಎಂದವರು ಹೇಳಿದ್ದಾರೆ.

ಈ ಮಧ್ಯೆ, ನವರಾತ್ರಿ ಉತ್ಸವದ ಸಂದರ್ಭ ಹಿಂದು ಸಂಘಟನೆಗಳು ಈ ರೀತಿಯ ಪ್ರಯತ್ನಗಳನ್ನು ಮಾಡುತ್ತಿರುತ್ತವೆ. ನಮ್ಮ ಮುಂದಿನ ಗುರಿ ಹೊಸ ಗುರುಗಾಂವ್ ಪ್ರದೇಶವಾಗಿದೆ ಎಂದು ಹಿಂದು ಸೇನಾ ಎಂಬ ಸಂಘಟನೆಯ ಅಧ್ಯಕ್ಷ ರಿತು ರಾಜ್ ತಿಳಿಸಿದ್ದಾರೆ. ಮಾಂಸಾಹಾರಿ ಖಾದ್ಯ ಮಾರಾಟ ಕೇಂದ್ರಗಳನ್ನು ಮುಚ್ಚುವಂತೆ ಹೋಟೆಲ್‌ಗಳಿಗೆ ಸೂಚಿಸಲಾಗಿದೆ. ಇಂತಹ 60 ಕೇಂದ್ರಗಳನ್ನು ಮುಚ್ಚಲಾಗಿದೆ. ಇದನ್ನು ಅನುಸರಿಸುವಂತೆ ಉಳಿದ 940 ಮಾರಾಟ ಕೇಂದ್ರಗಳಿಗೆ ಸೂಚಿಸಲಾಗಿದೆ. ಒಪ್ಪದಿದ್ದರೆ ಈ ಹಿಂದಿನ ವರ್ಷದಲ್ಲಿ ಮಾಡಿದಂತೆ ಬಲಪ್ರಯೋಗಿಸುತ್ತೇವೆ ಎಂದು ಶಿವಸೇನೆಯ ಗುರುಗಾಂವ್ ವಿಭಾಗದ ಉಸ್ತುವಾರಿ ಸಂಜಯ್ ಥಕ್ರಾಲ್ ಎಚ್ಚರಿಸಿದ್ದಾರೆ.

ಈ ಮಧ್ಯೆ, ಬುಧವಾರ ತಥಾಕಥಿತ ಹಿಂದೂ ಸಂಘಟನೆಗಳು ಮಾಂಸದಂಗಡಿಗಳನ್ನು ಬಲವಂತವಾಗಿ ಮುಚ್ಚಿಸಲು ಮುಂದಾದಾಗ ಗಲಭೆ ನಡೆದಿದೆ. ಗಲಭೆಗೆ ಸಂಬಂಧಿಸಿ ಹಿಂದು ಸಂಘಟನೆಗಳ ನಾಲ್ವರು ಮುಖಂಡರನ್ನು ಬಂಧಿಸಲಾಗಿದ್ದು ಎಫ್‌ಐಆರ್ ದಾಖಲಿಸಲಾಗಿದೆ ಎಂದು ಗುರುಗಾಂವ್ ಪೊಲೀಸ್ ಸಾರ್ವಜನಿಕ ಸಂಪರ್ಕಾಧಿಕಾರಿ ಸುಭಾಷ್ ಬೋಕನ್ ತಿಳಿಸಿದ್ದಾರೆ. ಯಾರು ಕೂಡಾ ಬಲವಂತವಾಗಿ ಮಾಂಸದಂಗಡಿಗಳನ್ನು ಮುಚ್ಚಿಸುವಂತಿಲ್ಲ. ಕೆಲವು ಅಂಗಡಿಯವರು ಅಂಗಡಿ ಮುಚ್ಚಲು ಸ್ವಯಂ ಮುಂದಾದರೆ ಅವರನ್ನು ತಡೆಯಬಾರದು. ಪರಿಸ್ಥಿತಿಯ ಮೇಲೆ ಗಮನ ಇರಿಸುವಂತೆ ಎಲ್ಲಾ ಅಧಿಕಾರಿಗಳಿಗೂ ಸೂಚಿಸಲಾಗಿದೆ ಎಂದು ಡಿಸಿಪಿ(ಅಪರಾಧ) ಸುಮಿತ್ ಕುಹರ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News