ಶ್ರೀನಗರ: ಉಗ್ರ ಸಂಘಟನೆ ಸೇರಿದ್ದ ಪಿಎಚ್‌ಡಿ ವಿದ್ಯಾರ್ಥಿ ಸಹಿತ ಇಬ್ಬರ ಹತ್ಯೆ

Update: 2018-10-11 14:22 GMT

ಶ್ರೀನಗರ, ಅ.11: ಪಿಎಚ್‌ಡಿ ವ್ಯಾಸಂಗಕ್ಕೆ ತಿಲಾಂಜಲಿಯಿತ್ತು ಉಗ್ರ ಸಂಘಟನೆಗೆ ಸೇರ್ಪಡೆಗೊಂಡಿದ್ದ , ಹಿಜ್ಬುಲ್ ಮುಜಾಹಿದೀನ್ ಸಂಘಟನೆಯ ಉನ್ನತ ಮುಖಂಡನಾಗಿದ್ದ ಮನ್ನನ್ ವಾನಿ ಕುಪ್ವಾರ ಜಿಲ್ಲೆಯಲ್ಲಿ ಭದ್ರತಾ ಪಡೆಗಳೊಂದಿಗೆ ನಡೆದ ಎನ್‌ಕೌಂಟರ್‌ನಲ್ಲಿ ಹತನಾಗಿರುವುದಾಗಿ ಮೂಲಗಳು ತಿಳಿಸಿವೆ. 

ಇಬ್ಬರು ಭಯೋತ್ಪಾದಕರು ಜನವಸತಿ ಪ್ರದೇಶದಲ್ಲಿ ಅಡಗಿಕೊಂಡಿರುವ ಬಗ್ಗೆ ಮಾಹಿತಿ ಪಡೆದ ಭದ್ರತಾ ಪಡೆಗಳು ಸ್ಥಳಕ್ಕೆ ಧಾವಿಸಿ ಶೋಧ ಕಾರ್ಯಾಚರಣೆ ಆರಂಭಿಸಿದಾಗ ಮನೆಯೊಂದರಲ್ಲಿ ಅಡಗಿಕೊಂಡಿದ್ದ ಉಗ್ರರು ಭದ್ರತಾ ಪಡೆಗಳತ್ತ ಗುಂಡಿನ ದಾಳಿ ಆರಂಭಿಸಿದರು. ಶರಣಾಗುವಂತೆ ಸೂಚಿಸಿದರೂ ಉಗ್ರರ ಗುಂಡಿನ ದಾಳಿ ಮುಂದುವರಿದಾಗ ಭದ್ರತಾ ಪಡೆಗಳು ಪ್ರತಿದಾಳಿ ನಡೆಸಿವೆ. ಆಗ ಇಬ್ಬರು ಹಿಜ್ಬುಲ್ ಮುಜಾಹಿದೀನ್ ಉಗ್ರರು ಮೃತರಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆಲಿಗಢ ಮುಸ್ಲಿಂ ವಿವಿಯಲ್ಲಿ ಸಂಶೋಧನಾ ವಿದ್ಯಾರ್ಥಿಯಾಗಿದ್ದ ವಾನಿ ಈ ವರ್ಷಾರಂಭದಲ್ಲಿ ನಾಪತ್ತೆಯಾಗಿದ್ದು ಕೆಲ ದಿನಗಳ ಬಳಿಕ ಕೈಯಲ್ಲಿ ಎಕೆ47 ರೈಫಲ್ ಹಿಡಿದುಕೊಂಡಿದ್ದ ಆತನ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಆತ ಹಿಜ್ಬುಲ್ ಸಂಘಟನೆ ಸೇರಿದ್ದನೆಂದು ಭದ್ರತಾ ಪಡೆಯ ಅಧಿಕಾರಿಗಳು ತಿಳಿಸಿದ್ದರು.

   ವಾನಿ ಹತ್ಯೆಯ ಸುದ್ದಿ ಹಬ್ಬುತ್ತಿದ್ದಂತೆಯೇ ಕುಪ್ವಾರ ಜಿಲ್ಲೆಯ ಹಲವೆಡೆ ಪ್ರತಿಭಟನೆ ನಡೆಸಲಾಗಿದೆ. ಉದ್ವಿಗ್ನ ಸ್ಥಿತಿ ನೆಲೆಸಿರುವಂತೆಯೇ ಜಿಲ್ಲೆಯಲ್ಲಿ ಇಂಟರ್‌ನೆಟ್ ಸೇವೆಯನ್ನು ಸ್ಥಗಿತಗೊಳಿಸಲಾಗಿದ್ದು ಎಲ್ಲಾ ಶಿಕ್ಷಣ ಸಂಸ್ಥೆಗಳಿಗೂ ರಜೆ ಸಾರಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News