ಮಲ್ಯ ಬೆಂಗಳೂರು ಆಸ್ತಿ ಮುಟ್ಟುಗೋಲಿಗೆ ದಿಲ್ಲಿ ಕೋರ್ಟ್ ಆದೇಶ

Update: 2018-10-11 14:50 GMT

ಹೊಸದಿಲ್ಲಿ,ಅ.11: ವಿದೇಶಕ್ಕೆ ಪರಾರಿಯಾಗಿರುವ ಉದ್ಯಮಿ ವಿಜಯ್ ಮಲ್ಯ ಅವರ ಬೆಂಗಳೂರಿನಲ್ಲಿನ ಆಸ್ತಿಗಳು, ವಿದೇಶಿ ವಿನಿಮಯ ನಿಯಂತ್ರಣ ಕಾಯ್ದೆಯ ಉಲ್ಲಂಘನೆಗೆ ಸಂಬಂಧಿಸಿದ ಪ್ರಕರಣಕ್ಕೆ ಸಂಬಂಧಿಸಿ ಮುಟ್ಟುಗೋಲು ಹಾಕುವಂತೆ ದಿಲ್ಲಿ ನ್ಯಾಯಾಲಯವೊಂದು ಗುರುವಾರ ಆದೇಶಿಸಿದೆ.

ಮಲ್ಯ ಅವರ ಬೆಂಗಳೂರಿನ ಆಸ್ತಿಗಳನ್ನು ಮುಟ್ಟುಗೋಲು ಹಾಕುವಂತೆ ನ್ಯಾಯಾಲಯವು ಕಳೆದ ಮಾರ್ಚ್‌ನಲ್ಲಿ ಆದೇಶಿಸಿತ್ತು. ತನ್ನ ನಿರ್ದೇಶನಗಳನ್ನು ಕಾರ್ಯಗತಗೊಳಿಸುವಂತೆ ನ್ಯಾಯಾಲಯವು ಬೆಂಗಳೂರಿನ ಪೊಲೀಸ್ ಆಯುಕ್ತ ಟಿ. ಸುನೀಲ್ ಕುಮಾರ್ ಅವರನ್ನು ತಿಳಿಸಿತ್ತು. ಆನಂತರ ಬೆಂಗಳೂರು ಪೊಲೀಸರು, ಮಲ್ಯ ಅವರಿಗೆ ಸೇರಿದ 159 ಆಸ್ತಿಗಳನ್ನು ಗುರುತಿಸಿರುವುದಾಗಿ ನ್ಯಾಯಾಲಯಕ್ಕೆ ವರದಿ ಸಲ್ಲಿಸಿದ್ದರು. ಆದರೆ ಅವುಗಳಲ್ಲಿ ಯಾವುದನ್ನೂ ವಶಪಡಿಸಿಕೊಳ್ಳಲು ಅವರಿಗೆ ಸಾಧ್ಯವಾಗಿರಲಿಲ್ಲ.

ಮಲ್ಯರಿಗೆ ಸೇರಿದ ಆಸ್ತಿಗಳನ್ನು ಮುಟ್ಟುಗೋಲು ಹಾಕಲು ತನಗೆ ಕಾಲಾವಕಾಶಬೇಕೆಂದು ಬೆಂಗಳೂರು ಪೊಲೀಸರು ನ್ಯಾಯಾಲಯವನ್ನು ಕೋರಿದ್ದರು. ಗುರುವಾರದಂದು, ಮುಖ್ಯ ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟ್ ದೀಪಕ್ ಶೆರಾವತ್ ಅವರು ಹೊಸ ಆದೇಶವನ್ನು ಜಾರಿಗೊಳಿಸಿ, ಮಲ್ಯ ಅವರ ಸೊತ್ತುಗಳನ್ನು ವಶಪಡಿಸಿಕೊಳ್ಳುವಂತೆ ಸೂಚಿಸಿತ್ತು.

 ಭಾರತದ ವಿವಿಧ ಬ್ಯಾಂಕ್‌ಗಳಿಗೆ 9 ಸಾವಿರ ಕೋಟಿ ರೂ.ಗೂ ಅಧಿಕ ಹಣವನ್ನು ವಂಚಿಸಿದ ಆರೋಪ ಎದುರಿಸುತ್ತಿರುವ ವಿಜಯ್ ಮಲ್ಯ ಸದ್ಯ ಲಂಡನ್‌ನಲ್ಲಿ ನೆಲೆಸಿದ್ದಾರೆ. ಅವರ ಗಡಿಪಾರು ಕೋರಿ ಭಾರತ ಸರಕಾರದ ಸಲ್ಲಿಸಿದ ಮನವಿಯ ವಿಚಾರಣೆ ನಡೆಯುತ್ತಿದೆ. 2017ರ ಎಪ್ರಿಲ್‌ನಲ್ಲಿ ನ್ಯಾಯಾಲಯವು ಮಲ್ಯ ವಿರುದ್ಧ ಅನಿರ್ದಿಷ್ಟಾವಧಿಯ ಜಾಮೀನು ರಹಿತ ಬಂಧನ ವಾರಟ್ ಜಾರಿಗೊಳಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News