ಬ್ರಹ್ಮಾವರ ಆರೋಗ್ಯ ಕೇಂದ್ರದ ಕಿರಿಯ ಆರೋಗ್ಯ ಸಹಾಯಕ ಆತ್ಮಹತ್ಯೆಗೆ ಯತ್ನ

Update: 2018-10-12 07:11 GMT

ಉಡುಪಿ, ಅ.12: ಬ್ರಹ್ಮಾವರ ಸಮುದಾಯ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಕಿರುಕುಳ ನೀಡುತ್ತಿದ್ದಾರೆಂದು ಆರೋಪಿಸಿ ಕೇಂದ್ರ ಕಿರಿಯ ಪುರುಷ ಆರೋಗ್ಯ ಸಹಾಯಕರೊಬ್ಬರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಬಗ್ಗೆ ವರದಿಯಾಗಿದೆ.

ಆತ್ಮಹತ್ಯೆಗೆ ಯತ್ನಿಸಿ ಅಸ್ವಸ್ಥಗೊಂಡಿರುವ ಶಿವಮೊಗ್ಗ ಜಿಲ್ಲೆಯ ಭದ್ರವಾತಿ ತಾಲೂಕಿನ ವಿಠಲಪುರ ನಿವಾಸಿ ಈಶ್ವರಪ್ಪ ಎಂ.ಕೆ. ಎಂಬವರ ಪುತ್ರ, ಕಿರಿಯ ಪುರುಷ ಆರೋಗ್ಯ ಸಹಾಯಕ ನಾಗರಾಜ್ ಎಂ.ಇ.(24) ಮಣಿಪಾಲ ಆಸ್ಪತ್ರೆಯ ತುರ್ತು ಚಿಕಿತ್ಸಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಮಂಗಳೂರು ವೆನ್ಲಾಕ್ ಆಸ್ಪತ್ರೆಯಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದ ನಾಗರಾಜ್ ಮೂರು ತಿಂಗಳ ಹಿಂದೆ ಬ್ರಹ್ಮಾವರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಆರೋಗ್ಯ ಸಹಾಯಕರಾಗಿ ನಿಯೋಜನೆಗೊಂಡಿದ್ದರು. ಅ.10ರಂದು ಮಾತ್ರೆ ಹಾಗೂ ಫಿನಾಯಿಲ್ ಸೇವಿಸಿ ಕರ್ತವ್ಯಕ್ಕೆ ತೆರಳಿದ್ದ ನಾಗರಾಜ್, ಅದೇ ದಿನ ರಾತ್ರಿ ಮತ್ತೆ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು.

ಮಾಹಿತಿ ತಿಳಿದ ನಾಗರಾಜ್ ಸಹಪಾಠಿಗಳು, ಅವರನ್ನು ಬ್ರಹ್ಮಾವರ ಖಾಸಗಿ ಆಸ್ಪತ್ರೆಗೆ ದಾಖಲಿಸಿ, ಅ.11ರಂದು ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ನಾಗರಾಜ್ ಸಂಬಂಧಿ ಹರೀಶ್ ಪತ್ರಿಕೆಗೆ ತಿಳಿಸಿದ್ದಾರೆ.

‘ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ.ಮಹೇಶ್ ಐತಾಳ್ ನನ್ನ ಮಗನಿಗೆ ಮಾನಸಿಕ ಹಿಂಸೆ ನೀಡುತ್ತಿದ್ದು, ಈ ವಿಚಾರವನ್ನು ಮಗ ಆತ್ಮಹತ್ಯೆಗೆ ಯತ್ನಿಸಿದ ಅ.10ರಂದು ನನಗೆ ಮೊಬೈಲ್ ಕರೆ ಮಾಡಿ ತಿಳಿಸಿದ್ದನು. ಮಗ ಆತ್ಮಹತ್ಯೆ ಯತ್ನಿಸಿದರೂ ಈವರಗೆ ಅವನನ್ನು ವಿಚಾರಿಸಲು ಯಾವುದೇ ಮೇಲಾಧಿಕಾರಿಗಳು ಆಸ್ಪತ್ರೆಗೆ ಭೇಟಿ ನೀಡಿಲ್ಲ’ ಎಂದು ನಾಗರಾಜ್ ತಂದೆ ಈಶ್ವರಪ್ಪ ಎಂ.ಕೆ. ಆರೋಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News