ಮಂಗಳೂರು ಜೈಲಿನಲ್ಲಿರುವ ಕೈದಿಗೆ ಗಾಂಜಾ ಪೂರೈಕೆಗೆ ಯತ್ನ: ಆರೋಪಿ ಯುವತಿ ಪೊಲೀಸ್ ವಶಕ್ಕೆ

Update: 2018-10-12 09:32 GMT

ಮಂಗಳೂರು, ಅ.12: ನಗರದ ಜಿಲ್ಲಾ ಕಾರಾಗೃಹದಲ್ಲಿ ವಿಚಾರಣಾಧೀನ ಕೈದಿಯನ್ನು ಭೇಟಿ ನೀಡುವ ನೆಪದಲ್ಲಿ ಗಾಂಜಾ ಪೂರೈಕೆ ಮಾಡಲು ಯತ್ನಿಸುತ್ತಿದ್ದ ಆರೋಪದಲ್ಲಿ ಯುವತಿಯೊಬ್ಬಳನ್ನು ಮಂಗಳೂರು ಸಿಸಿಬಿ ಪೊಲೀಸರು ಹಾಗೂ ಬರ್ಕೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಮಂಗಳೂರು ಜೈಲು ರಸ್ತೆಯಲ್ಲಿರುವ ಜಿಲ್ಲಾ ಕಾರಾಗೃಹದಲ್ಲಿರುವ ವಿಚಾರಣಾಧೀನ ಕೈದಿಗಳಿಗೆ ಭೇಟಿ ನೀಡುವ ಸಮಯದಲ್ಲಿ ಗಾಂಜಾ ಪೊರೈಸುತ್ತಿರುವ ಮಾಹಿತಿಯ ಆಧಾರದಲ್ಲಿ ಮಂಗಳೂರು ಸಿಸಿಬಿ ಪೊಲೀಸರು ಗುರುವಾರ ಕಾರ್ಯಾಚರಣೆ ನಡೆಸಿದ್ದಾರೆ. ಈ ಸಂಬಂಧ ಯುವತಿಯೊಬ್ಬಳನ್ನು ವಶಕ್ಕೆ ಪಡೆದ ಪೊಲೀಸರು ಆಕೆಯಿಂದ 20 ಗ್ರಾಂ ಗಾಂಜಾ ಹಾಗೂ ಮೊಬೈಲ್ ಫೋನ್‌ವೊಂದನ್ನು ವಶಪಡಿಸಿಕೊಂಡಿದ್ದಾರೆ.

ಯುವತಿಯು ಕಾರಾಗೃಹದಲ್ಲಿರುವ ವಿಚಾರಣಾಧೀನ ಕೈದಿ ಮುಸ್ತಫ ಎಂಬಾತನಿಗೆ ಪೂರೈಸಲು ಇದನ್ನು ತಂದಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ. ಯುವತಿಯನ್ನು ವಿಚಾರಣೆಗೊಳಪಡಿಸಲಾಗಿದ್ದು, ಆಕೆಗೆ ಗಾಂಜಾ ಪೊರೈಸಿದವರ ಮಾಹಿತಿ ಕಲೆ ಹಾಕಲಾಗಿದೆ. ತನಿಖೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಬಗ್ಗೆ ಬರ್ಕೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಿಸಿಬಿ ಘಟಕದ ಇನ್‌ಸ್ಪೆಕ್ಟರ್ ಶಾಂತಾರಾಮ, ಪಿಎಸ್ಸೈ ಶ್ಯಾಮ್ ಸುಂದರ್‌ಹಾಗೂ ಸಿಬ್ಬಂದಿ ಮತ್ತು ಬರ್ಕೆ ಪೊಲೀಸ್ ಠಾಣಾ ಪಿಎಸ್ಸೈ ಶೋಭಾ ಹಾಗೂ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News