ಕಪ್ಪುಹಣ ಪ್ರಕರಣ: ನ್ಯಾಯಾಲಯದಲ್ಲಿ ಪಿ.ಚಿದಂಬರಂ ಕುಟುಂಬದ ಹಾಜರಾತಿಗೆ ವಿನಾಯಿತಿ ವಿಸ್ತರಣೆ

Update: 2018-10-12 14:07 GMT

ಚೆನ್ನೈ,ಅ.12: ಕಪ್ಪುಹಣ ಪ್ರಕರಣವೊಂದರಲ್ಲಿ ಚೆನ್ನೈನ ನ್ಯಾಯಾಲಯವೊಂದರಲ್ಲಿ ಮಾಜಿ ಕೇಂದ್ರ ಸಚಿವ ಪಿ.ಚಿದಂಬರಂ ಅವರ ಕುಟುಂಬ ಸದಸ್ಯರ ಹಾಜರಾತಿಗೆ ವಿನಾಯಿತಿ ನೀಡಿದ್ದ ತನ್ನ ಮಧ್ಯಂತರ ಆದೇಶವನ್ನು ಮದ್ರಾಸ್ ಉಚ್ಚ ನ್ಯಾಯಾಲಯವು ನ.2ರವರೆಗೆ ವಿಸ್ತರಿಸಿ ಮಂಗಳವಾರ ಆದೇಶಿಸಿದೆ.

ವಿದೇಶಿ ಆಸ್ತಿಗಳನ್ನು ಘೋಷಿಸದ ಆರೋಪದಲ್ಲಿ ಆದಾಯ ತೆರಿಗೆ ಇಲಾಖೆಯು ಚಿದಂಬರಂ ಕುಟುಂಬದ ವಿರುದ್ಧ ಈ ಪ್ರಕರಣವನ್ನು ದಾಖಲಿಸಿದೆ.

ಕಪ್ಪುಹಣ ಕಾಯ್ದೆಯಡಿ ಆದಾಯ ತೆರಿಗೆ ಇಲಾಖೆಯು ತಮ್ಮ ವಿರುದ್ಧ ಆರಂಭಿಸಿರುವ ಕಾನೂನು ಕ್ರಮವನ್ನು ಪ್ರಶ್ನಿಸಿ ಚಿದಂಬರಂ ಪತ್ನಿ,ಪುತ್ರ ಮತ್ತು ಸೊಸೆ ಸಲ್ಲಿಸಿರುವ ಮುಖ್ಯ ಅರ್ಜಿಗಳ ಕುರಿತು ತನ್ನ ಆದೇಶವನ್ನು ಉಚ್ಚ ನ್ಯಾಯಾಲಯವು ಈ ಹಿಂದೆಯೂ ಕಾಯ್ದಿರಿಸಿತ್ತು.

ಈ ಮೂವರೂ ಬ್ರಿಟನ್ನಿನ ಕ್ಯಾಂಬ್ರಿಜ್‌ನಲ್ಲಿ ಜಂಟಿಯಾಗಿ ಹೊಂದಿರುವ 5.37 ಕೋ.ರೂ.ಮೌಲ್ಯದ ಆಸ್ತಿಯ ವಿವರಗಳನ್ನು ಬಹಿರಂಗಗೊಳಿಸುವಲ್ಲಿ ವಿಫಲರಾಗಿದ್ದಾರೆ ಎಂದು ಆದಾಯ ತೆರಿಗೆ ಇಲಾಖೆಯು ಆರೋಪಿಸಿದೆ.

ಕಾರ್ತಿ ಚಿದಂಬರಂ ಅವರು ಬ್ರಿಟನ್ನಿನ ಮೆಟ್ರೋ ಬ್ಯಾಂಕ್‌ನಲ್ಲಿಯ ತನ್ನ ಖಾತೆಯನ್ನು ಮತ್ತು ಅಮೆರಿಕದ ನ್ಯಾನೋ ಹೋಲ್ಡಿಂಗ್ಸ್ ಎಲ್‌ಎಲ್‌ಸಿಯಲ್ಲಿನ ತನ್ನ ಹೂಡಿಕೆಗಳನ್ನು ಬಚ್ಚಿಟ್ಟಿದ್ದಾರೆ ಎಂದೂ ಇಲಾಖೆಯು ಆಪಾದಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News