ತಿತ್ಲಿ ಅಬ್ಬರ: ಆಂಧ್ರ,ಒಡಿಶಾದಲ್ಲಿ ಪ್ರವಾಹ ಭೀತಿ

Update: 2018-10-12 14:10 GMT

ಭುವನೇಶ್ವರ,ಅ.12: ತಿತ್ಲಿ ಚಂಡಮಾರುತದ ಪರಿಣಾಮವಾಗಿ ಅವ್ಯಾಹತ ಮಳೆ ಸುರಿದ ಕಾರಣ ನದಿಗಳು ತುಂಬಿ ಹರಿಯುತ್ತಿರುವ ಹಿನ್ನೆಲೆಯಲ್ಲಿ ಆಂಧ್ರ ಪ್ರದೇಶ ಮತ್ತು ಒಡಿಶಾದಲ್ಲಿ ಪ್ರವಾಹ ಭೀತಿ ಎದುರಾಗಿದೆ.

ಗುರುವಾರ ಮುಂಜಾನೆ ಅಪ್ಪಳಿಸಿದ ತಿತ್ಲಿ ಚಂಡಮಾರುತವು ವಾಹನ ಸಂಚಾರ, ದೂರಸಂಪರ್ಕ, ವಿದ್ಯುತ್ ಮತ್ತು ನೀರು ಪೂರೈಕೆಯ ಮೇಲೆ ಪರಿಣಾಮ ಬೀರಿದ್ದು ಕನಿಷ್ಟ 12 ಮಂದಿಯನ್ನು ಬಲಿಪಡೆದುಕೊಂಡಿದೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ. ಒಡಿಶಾದ ಗಂಜಮ್ ಜಿಲ್ಲೆ ಮತ್ತು ಆಂಧ್ರ ಪ್ರದೇಶದ ಶ್ರೀಕಾಕುಲಂ ಜಿಲ್ಲೆ ತಿತ್ಲಿಯಿಂದ ತೀವ್ರ ಸಂಕಷ್ಟಕ್ಕೊಳಗಾಗಿರುವ ಜಿಲ್ಲೆಗಳಾಗಿವೆ. ಈ ಎರಡು ಜಿಲ್ಲೆಗಳಲ್ಲಿ ಮಳೆಯ ಅಬ್ಬರ ಜೋರಾಗಿದ್ದ ಕಾರಣ ವ್ಯಾಪಕ ಹಾನಿ ಸಂಭವಿಸಿದೆ. ಗಂಜಮ್ ಜಿಲ್ಲೆಯ ಭಂಜನಗರದಲ್ಲಿ ನೆರೆ ಹಾವಳಿ ಉಂಟಾಗಿದ್ದು ಜನರು ಸಂಕಷ್ಟಕ್ಕೀಡಾಗಿದ್ದಾರೆ. ಋಷಿಕುಲ್ಯ ಮತ್ತು ವಂಸಧರ ನದಿಗಳು ಗಂಜಮ್, ಗಜಪತಿ ಮತ್ತು ರಾಯಗಡದಲ್ಲಿ ಅಪಾಯ ಮಟ್ಟಕ್ಕಿಂತ ಮೇಲೆ ಹರಿಯುತ್ತಿದೆ. ಬಾಲಸೋರ್‌ನಲ್ಲಿ ಜಲಕ ನದಿ ಅಪಾಯದ ಮಟ್ಟಕ್ಕಿಂತ ಆರು ಮೀಟರ್ ಮೇಲೆ ಹರಿಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅತರ್ನಾಲಾದಲ್ಲಿ ಸೇತುವೆಯಿಂದ ಐದು ಅಡಿ ಎತ್ತರದಲ್ಲಿ ನೀರು ಹರಿಯುತ್ತಿರುವ ಕಾರಣ ಐದು ಗ್ರಾಮಗಳ ಸಂಪರ್ಕ ಕಡಿತಗೊಂಡಿದೆ. ಆಂಧ್ರ ಪ್ರದೇಶದ ಮೂಲಕ ಹರಿಯುವ ವಂಸಧರ ನದಿ ಉಕ್ಕಿ ಹರಿಯುತ್ತಿರುವ ಪರಿಣಾಮ ದಕ್ಷಿಣದ ರಾಜ್ಯದಲ್ಲೂ ಭಯದ ವಾತಾವರಣ ಸೃಷ್ಟಿಯಾಗಿದೆ.

ಶ್ರೀಕಾಕುಲಂನ ಕೊತ್ತೂರು, ಹೀರಾ ಮತ್ತು ಜಲಮುರು ಪ್ರದೇಶಗಳಲ್ಲಿ ನೆರೆ ಹಾವಳಿಯಿಂದ ವ್ಯಾಪಕ ಹಾನಿ ಸಂಭವಿಸಿದೆ. ಪಲಸ ಮತ್ತು ವಜ್ರಾಪು ಕೊತ್ತೂರು ಮುಂತಾದ ತಗ್ಗು ಪ್ರದೇಶಗಳಿಗೆ ಸಮುದ್ರದ ನೀರು ನುಗ್ಗಿದ ಪರಿಣಾಮ ಜನಜೀವನ ಅಸ್ತವ್ಯಸ್ತಗೊಂಡಿತು. ನೆರೆಪೀಡಿತ ಪ್ರದೇಶಗಳಲ್ಲಿ ಸೂಕ್ತ ಪರಿಹಾರ ಮತ್ತು ರಕ್ಷಣಾ ಕಾರ್ಯಗಳನ್ನು ನಡೆಸಲು ಜಿಲ್ಲಾಡಳಿತ ಸನ್ನದ್ಧವಾಗಿದೆ. ಈ ಪ್ರದೇಶಗಳಲ್ಲಿ ಶುಚಿತ್ವ ಮತ್ತು ಸಾರ್ವಜನಿಕ ಆರೋಗ್ಯದ ಬಗ್ಗೆಯೂ ಜಿಲ್ಲಾಡಳಿತ ಗಮನಹರಿಸುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News