ಮನಾನ್ ವಾನಿ ಹತ್ಯೆಗೆ ಪ್ರತ್ಯೇಕತಾವಾದಿಗಳ ಪ್ರತಿಭಟನೆ ಜಮ್ಮು ಕಾಶ್ಮೀರದಲ್ಲಿ ಜನಜೀವನ ಅಸ್ತವ್ಯಸ್ತ

Update: 2018-10-12 14:11 GMT

ಶ್ರೀನಗರ, ಅ.12: ಭಯೋತ್ಪಾದಕ ಸಂಘಟನೆ ಸೇರಿದ್ದ ಪಿಎಚ್‌ಡಿ ವಿದ್ಯಾರ್ಥಿ ಮನಾನ್ ವಾನಿ ಭದ್ರತಾ ಪಡೆಗಳು ನಡೆಸಿದ್ದ ಕಾರ್ಯಾಚರಣೆಯಲ್ಲಿ ಮೃತಪಟ್ಟ ಹಿನ್ನೆಲೆಯಲ್ಲಿ ಕಣಿವೆ ರಾಜ್ಯದಲ್ಲಿ ಶುಕ್ರವಾರ ಪ್ರತ್ಯೇಕತಾವಾದಿಗಳು ಕರೆ ಕೊಟ್ಟಿರುವ ಪ್ರತಿಭಟನೆಯಿಂದಾಗಿ ಜನಜೀವನ ಅಸ್ತವ್ಯಸ್ತವಾಗಿದೆ.

ಎಸ್.ಎ. ಗಿಲಾನಿ, ಮಿರ್‌ವೈಝ್ ಉಮರ್ ಫಾರೂಕ್ ಹಾಗೂ ಯಾಸಿನ್ ಮಲಿಕ್ ನೇತೃತ್ವದ ‘ಪ್ರತ್ಯೇಕತಾವಾದಿಗಳ ಜಂಟಿ ವಿರೋಧ ನಾಯಕತ್ವ ಸಂಘಟನೆ ’ ಈ ಹರತಾಳಕ್ಕೆ ಕರೆ ನೀಡಿತ್ತು. ಅಂಗಡಿ ಮುಂಗಟ್ಟುಗಳು, ವ್ಯಾಪಾರ ಮತ್ತು ಶಿಕ್ಷಣ ಸಂಸ್ಥೆಗಳು ಮುಚ್ಚಲ್ಪಟ್ಟಿದ್ದವು. ಕೆಲವು ಖಾಸಗಿ ವಾಹನಗಳು ಸಂಚಾರ ನಡೆಸಿದ್ದನ್ನು ಹೊರತುಪಡಿಸಿ ವಾಹನ ಸಂಚಾರ ಸ್ಥಗಿತಗೊಂಡಿತ್ತು. ಮುನ್ನೆಚ್ಚರಿಕಾ ಕ್ರಮವಾಗಿ ಉತ್ತರ ಕಾಶ್ಮೀರದ ಬಾರಾಮುಲ್ಲ ನಗರದಿಂದ ಜಮ್ಮು ಪ್ರದೇಶದ ಬನ್ನಿಹಾಲ್ ನಗರಕ್ಕೆ ರೈಲು ಸಂಚಾರ ಸ್ಥಗಿತಗೊಳಿಸಲಾಗಿತ್ತು. ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಭಾರಿ ಸಂಖ್ಯೆಯಲ್ಲಿ ಪೊಲೀಸ್ ಹಾಗೂ ಭದ್ರತಾ ಪಡೆಗಳ ಯೋಧರನ್ನು ನಿಯೋಜಿಸಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News