ಧಾರ್ಮಿಕ ಸ್ವಾತಂತ್ರ್ಯ, ವೈಯಕ್ತಿಕ ಕಾನೂನುಗಳ ರಕ್ಷಣೆಗೆ ಪಿಎಫ್‌ಐ ಆಗ್ರಹ

Update: 2018-10-12 14:14 GMT

ಮಂಗಳೂರು, ಅ.12: ಸುಪ್ರೀಂ ಕೋರ್ಟ್ ಇತ್ತೀಚೆಗೆ ನೀಡಿದ ಉದಾರವಾದಿ ಮತ್ತು ಪ್ರಗತಿಪರವೆಂಬಂತೆ ತೋರುವ ತೀರ್ಪುಗಳ ಸರಣಿಯು ಧಾರ್ಮಿಕ ಅಲ್ಪಸಂಖ್ಯಾತರಲ್ಲಿ ಆತಂಕವನ್ನು ಸೃಷ್ಟಿಸಿದ್ದು, ಅವುಗಳು ಏಕರೂಪ ನಾಗರಿಕ ಸಂಹಿತೆಗೆ ಹಾದಿ ಮಾಡಿಕೊಡಬಹುದೆಂಬ ಭಾವನೆಯನ್ನು ಹುಟ್ಟಿಸಿದೆ ಎಂದು ಹೊಸದಿಲ್ಲಿಯ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಪ್ರಧಾನ ಕಚೇರಿಯಲ್ಲಿ ಇತ್ತೀಚೆಗೆ ನಡೆದ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸಭೆಯು ಅಭಿಪ್ರಾಯಪಟ್ಟಿದೆ.

ಅಖಿಲಾ, ಹಾದಿಯಾ ಆಗಿ ಬದಲಾದ ಮತ್ತು ಆ ನಂತರ ಮತಾಂತರಗೊಂಡು ಮುಸ್ಲಿಂ ವ್ಯಕ್ತಿಯೊಂದಿಗೆ ವಿವಾಹವಾದ ವಿಷಯಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಪರಿಣಾಮಕಾರಿ ತೀರ್ಪನ್ನು ನೀಡಿತ್ತು. ವಿವಾಹವನ್ನು ರದ್ದುಪಡಿಸಿದ ಹೈಕೋರ್ಟ್ ತೀರ್ಪನ್ನು ತಿರಸ್ಕರಿಸಿದ ಸುಪ್ರೀಂಕೋರ್ಟ್ ‘ತಾನಿಚ್ಛಿಸಿದವರನ್ನು ವಿವಾಹವಾಗುವ ಹಕ್ಕು ಸಂವಿಧಾನದ 21ನೇ ಅನುಬಂಧಕ್ಕೆ (ಜೀವಿಸುವ ಮತ್ತು ಸ್ವಾತಂತ್ರ್ಯದ ಹಕ್ಕು) ಅವಿಭಾಜ್ಯವಾಗಿದೆ’ ಎಂದಿತ್ತು. ಭಾರತದ ಇತ್ತೀಚಿನ ಇತಿಹಾಸದಲ್ಲಿ ಸಾಮಾನ್ಯ ನಾಗರಿಕರ ಮೂಲಭೂತ ಹಕ್ಕುಗಳನ್ನು ಎತ್ತಿಹಿಡಿದ ಮಹತ್ವದ ತೀರ್ಪು ಇದಾಗಿತ್ತು.

ಧಾರ್ಮಿಕ ವಿಷಯಗಳಲ್ಲಿ ಸರಕಾರಗಳ ಹಸ್ತಕ್ಷೇಪವು ಭಾರತೀಯ ಸಂವಿಧಾನಕ್ಕೆ ವಿರುದ್ಧವಾಗಿದೆ. ಸಂವಿಧಾನದ ಪ್ರಕಾರ ಪ್ರತಿಯೊಂದು ಸಮುದಾಯ ತಮ್ಮ ಧಾರ್ಮಿಕ ಸಂಪ್ರದಾಯ ಮತ್ತು ವೈಯಕ್ತಿಕ ಕಾನೂನುಗಳನ್ನು ಪಾಲಿಸುವ ಸ್ವಾತಂತ್ರ್ಯವನ್ನು ಹೊಂದಿದೆ. ಆದರೆ ಮಸೀದಿಯ ಸ್ಥಾನಮಾನದ ಕುರಿತಂತೆ 1994ರಲ್ಲಿ ಅಲಹಾಬಾದ್ ಹೈಕೋರ್ಟ್ ನೀಡಿದ ತೀರ್ಪನ್ನು ಎತ್ತಿಹಿಡಿದಿರುವುದು ಮತ್ತು ಕೇರಳದಲ್ಲಿ ಅಯ್ಯಪ್ಪದೇವಸ್ಥಾನಕ್ಕೆ ಮಹಿಳೆಯರ ಪ್ರವೇಶಕ್ಕೆ ಸಂಬಂಧಿಸಿದ ತೀರ್ಪು ಆಯಾ ಧಾರ್ಮಿಕ ವಿಷಯಗಳಲ್ಲಿ ಅಪಾಯಕಾರಿ ಮಧ್ಯಪ್ರವೇಶವಾಗಿದೆ. ಬಾಬ್ರಿ ಮಸ್ಜಿದ್‌ನ ಅಕ್ರಮ ಸ್ವಾಧೀನ ಮತ್ತು ಧ್ವಂಸದ ಕುರಿತ ತೀರ್ಪನ್ನು ದೇಶವು ಎದುರು ನೋಡುತ್ತಿರುವ ನಿರ್ಣಾಯಕ ಘಟ್ಟದಲ್ಲಿ ಇಸ್ಲಾಮ್‌ನಲ್ಲಿ ಮಸೀದಿಯ ಪ್ರಾಮುಖ್ಯತೆಯನ್ನು ನಿರಾಕರಿಸುವಂತಹ ತೀರ್ಪು ಸಕಾರಾತ್ಮಕ ಸಂದೇಶವನ್ನು ನೀಡದು ಎಂದು ಪಿಎಫ್‌ಐ ಹೇಳಿಕೆಯಲ್ಲಿ ತಿಳಿಸಿದೆ.

ಇಂತಹ ತೀರ್ಪು ಕೋಮುವಾದಿ ಪ್ರಚೋದಿತ ಸರಕಾರದಿಂದ ದುರ್ಬಳಕೆಯಾಗುತ್ತದೆ ಎಂಬ ಆತಂಕವು ತ್ರಿವಳಿ ತಲಾಕ್ ಕುರಿತ ಸುಗ್ರೀವಾಜ್ಞೆಯಿಂದ ಮತ್ತೊಮ್ಮೆ ಖಚಿತವಾಗಿದೆ. ಸುಪ್ರೀಂ ಕೋರ್ಟ್ ತೀರ್ಪಿನ ಹೆಸರಿನಲ್ಲಿ ಈ ಮಸೂದೆಯನ್ನು ತರಲಾಗಿತ್ತು. ಅಯೋಧ್ಯೆಯಲ್ಲಿ ಮಸ್ಜಿದ್ ಮಂದಿರ ತೀರ್ಪಿನ ಒಡೆತನ ವ್ಯಾಜ್ಯವು ಯಾವುದೇ ಧಾರ್ಮಿಕ ನಂಬಿಕೆಯ ಆಧಾರದ ಮೇಲೆ ನಡೆಯದೆ ದಾಖಲೆಗಳ ಆಧಾರದ ಮೇಲೆ ನಡೆಯಲಿದೆ ಎಂಬ ನಿಲುವನ್ನು ತೆಗೆದುಕೊಳ್ಳಲು ಸುಪ್ರೀಂ ಕೋರ್ಟ್‌ಗೆ ಇದು ಅತ್ಯುತ್ತಮ ಸಮಯವಾಗಿದೆ ಎಂದ ಪಿಎಫ್‌ಐ, ಸಲಿಂಗ ಕಾಮ ಮತ್ತು ಪ್ರಬುದ್ಧರ ಲೈಂಗಿಕತೆಯನ್ನು ಅಪರಾಧ ಮುಕ್ತಗೊಳಿಸಿದ ತೀರ್ಪನ್ನು ವೈಯಕ್ತಿಕ ಸ್ವಾತಂತ್ರ್ಯ ಮತ್ತು ಖಾಸಗಿತನದ ರಕ್ಷಣೆ ಎಂದು ಬಿಂಬಿಸಲಾಗಿದೆ. ಈಗಾಗಲೇ ಕುಟುಂಬ ಮತ್ತು ಇತರ ಸಾಮಾಜಿಕ ವ್ಯವಸ್ಥೆಯನ್ನು ನಿರ್ಲಕ್ಷಿಸಿ ಕೇವಲ ಅನುಮತಿಯ ಮೌಲ್ಯ ಮತ್ತು ಕಲ್ಪನೆಯನ್ನು ಸುಪ್ರೀಂ ಕೋರ್ಟ್ ಅನುಕರಿಸಿದೆ. ಆಧಾರ್ ವಿಷಯದಲ್ಲೂ ಸರಕಾರದ ನಿರ್ಣಯವನ್ನು ಅಂಗೀಕರಿಸುವಾಗ ವೈಯಕ್ತಿಕ ಸ್ವಾತಂತ್ರ್ಯ ಮತ್ತು ಖಾಸಗಿತನದ ರಕ್ಷಣೆಯ ಕುರಿತು ಅಂತಹ ಆಸಕ್ತಿ ಕಾಣುತ್ತಿಲ್ಲ. ಪ್ರತಿಯೊಂದು ನಾಗರಿಕ ಹಕ್ಕುಗಳು ಮತ್ತು ಲಭ್ಯವಿರುವ ಸರಕಾರಿ ಕಲ್ಯಾಣ ಯೋಜನೆಗಳು ಮತ್ತು ಸೇವೆಗಳನ್ನು ಆಧಾರ್‌ನೊಂದಿಗೆ ಸಂಪರ್ಕಿಸುವುದರಿಂದ ಉಂಟಾಗುವ ಅಪಾಯವನ್ನು ಗುರುತಿಸುವಲ್ಲಿ ಹೆಚ್ಚಿನ ತೀರ್ಪುಗಳು ವಿಫಲವಾಗಿವೆ. ಇತ್ತೀಚಿಗೆ ನೀಡಲಾದ ಹೆಚ್ಚಿನ ತೀರ್ಪುಗಳು ಉದಾರವಾದ ಮತ್ತು ಪ್ರಗತಿಪರತೆಯ ಬಾಹ್ಯರೂಪದಲ್ಲಿ ಪ್ರಸ್ತುತಪಡಿಸಲಾಗಿದ್ದರೂ ಅವು ವ್ಯಕ್ತಿ, ಕುಟುಂಬ ಮತ್ತು ಸಮಾಜಕ್ಕೆ ತೀವ್ರ ಹಾನಿ ಎಸಗಲಿದೆ ಎಂದು ಪಿಎಫ್‌ಐ ಪ್ರಕಟನೆಯಲ್ಲಿ ತಿಳಿಸಿದೆ.

2018-19ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಮೆಟ್ರಿಕ್ ಪೂರ್ವ ವಿದ್ಯಾರ್ಥಿವೇತನಕ್ಕಾಗಿ 15 ದಶಲಕ್ಷ ಮೀಸಲಿಡಬೇಕು ಎಂಬ ಸಮುದಾಯ ಅಭಿವದ್ಧಿ ವಿಭಾಗದ ಪ್ರಸ್ತಾವನೆಯನ್ನು ಸಭೆ ಅನುಮೋದಿಸಿತು.

ಪಿಎಫ್‌ಐ ರಾಷ್ಟ್ರೀಯ ಅಧ್ಯಕ್ಷ ಇ.ಅಬೂಬಕರ್ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಸಭೆಯಲ್ಲಿ ಉಪಾಧ್ಯಕ್ಷ ಒಎಂಎ ಸಲಾಂ, ಕಾರ್ಯದರ್ಶಿಗಳಾದ ವಾಹಿದ್ ಸೇಠ್, ಅನೀಸ್ ಅಹ್ಮದ್ ಮತ್ತಿತರರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News