ಲೈಂಗಿಕ ಕಿರುಕುಳ ಆರೋಪದಲ್ಲಿ ಪದತ್ಯಾಗ ಮಾಡಿದ್ದ ನ್ಯಾಯಾಧೀಶೆಯ ಮರು ನೇಮಕ ಮನವಿ ಪರಿಶೀಲನೆಗೆ ಸುಪ್ರೀಂ ಸಮ್ಮತಿ

Update: 2018-10-12 14:16 GMT

ಹೊಸದಿಲ್ಲಿ, ಅ.12: ದೇಶದಲ್ಲಿ ‘ಮಿ ಟೂ’ ಅಭಿಯಾನ ಪ್ರಭಲವಾಗುತ್ತಿರುವಂತೆಯೇ, ಮಧ್ಯಪ್ರದೇಶದ ಹೈಕೋರ್ಟ್ ನ್ಯಾಯಾಧೀಶರು ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ 2014ರಲ್ಲಿ ಪದತ್ಯಾಗ ಮಾಡಿದ್ದ ನ್ಯಾಯಾಧೀಶೆಯ ಮರುನೇಮಕ ಮಾಡಿಕೊಳ್ಳಬೇಕೆಂಬ ಮನವಿಯನ್ನು ಪರಿಶೀಲಿಸಲು ಸುಪ್ರೀಂಕೋರ್ಟ್ ಸಮ್ಮತಿಸಿದೆ.

ಮಧ್ಯಪ್ರದೇಶದ ಹೈಕೋರ್ಟ್‌ನ ನ್ಯಾಯಾಧೀಶೆಯನ್ನು ಸಿಧಿ ಜಿಲ್ಲಾ ನ್ಯಾಯಾಲಯಕ್ಕೆ ವರ್ಗಾಯಿಸಲಾಗಿತ್ತು. ವಿನಾಕಾರಣ ವರ್ಷದ ಮಧ್ಯಭಾಗದಲ್ಲಿ ತನ್ನನ್ನು ವರ್ಗಾಯಿಸಲಾಗಿದೆ. ಆದರೆ ತನ್ನ ಮಗಳು ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯಾಗಿದ್ದು ಶೈಕ್ಷಣಿಕ ವರ್ಷದ ಮಧ್ಯಭಾಗದಲ್ಲಿ ವರ್ಗಾಯಿಸಿರುವುದರಿಂದ ಶಿಕ್ಷಣ ಮುಂದುವರಿಕೆಗೆ ಕಷ್ಟವಾಗಿದೆ. ಆದ್ದರಿಂದ ಕರ್ತವ್ಯ ಮುಂದುವರಿಸಲು ಸಾಧ್ಯವಾಗದೆ ತಾನು ಹುದ್ದೆಗೆ ರಾಜೀನಾಮೆ ನೀಡುತ್ತಿರುವುದಾಗಿ ತಿಳಿಸಿ ನ್ಯಾಯಾಧೀಶೆ ರಾಜೀನಾಮೆ ಸಲ್ಲಿಸಿದ್ದರು. ಹೈಕೋರ್ಟ್‌ನ ನ್ಯಾಯಾಧೀಶರ ವಿರುದ್ಧ ಅವರು ಲೈಂಗಿಕ ಕಿರುಕುಳದ ಆರೋಪವನ್ನೂ ಹೊರಿಸಿದ್ದರು. ಈ ಪ್ರಕರಣ ಭಾರೀ ವಿವಾದಕ್ಕೆ ಕಾರಣವಾಗಿದ್ದು, 2015ರಲ್ಲಿ ರಾಜ್ಯಸಭೆಯ 58 ಸದಸ್ಯರು ಹೈಕೋರ್ಟ್ ನ್ಯಾಯಾಧೀಶರ ವಿರುದ್ಧ ವಾಗ್ದಂಡನೆಗೆ ಆಗ್ರಹಿಸಿದ್ದರು. ಈ ಹಿನ್ನೆಲೆಯಲ್ಲಿ 2015ರಲ್ಲಿ ತನಿಖಾ ಸಮಿತಿಯನ್ನು ನೇಮಿಸಲಾಗಿತ್ತು. ಸಮಿತಿಯ ವರದಿಯಲ್ಲಿ ನ್ಯಾಯಾಧೀಶೆಯನ್ನು ವರ್ಷದ ಮಧ್ಯಭಾಗದಲ್ಲಿ ವರ್ಗಾಯಿಸಿರುವುದು ಸರಿಯಲ್ಲ ಎಂದು ತಿಳಿಸಲಾಗಿತ್ತು. ಇದೀಗ ಈ ವರದಿಯ ಹಿನ್ನೆಲೆಯಲ್ಲಿ ನ್ಯಾಯಾಧೀಶೆಯನ್ನು ಮರು ನೇಮಕ ಮಾಡಿಕೊಳ್ಳಲು ಅವಕಾಶ ಮಾಡಿಕೊಡಬೇಕು ಎಂದು ಸುಪ್ರೀಂಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿತ್ತು.

ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎ.ಕೆ.ಸಿಕ್ರಿ ಮನವಿಯನ್ನು ಪರಿಶೀಲಿಸಬಹುದು ಎಂದು ತಿಳಿಸಿದ್ದು ಮಧ್ಯಪ್ರದೇಶ ಹೈಕೋರ್ಟ್‌ಗೆ ನೋಟಿಸ್ ಜಾರಿಗೊಳಿಸಿದೆ. ನೋಟಿಸ್‌ಗೆ ಆರು ವಾರದೊಳಗೆ ಉತ್ತರಿಸಲು ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News