‘ಮೀಟೂ’ ಪ್ರಕರಣಗಳ ಪರಿಶೀಲನೆಗೆ ಹಿರಿಯ ನ್ಯಾಯಾಧೀಶರು ಮತ್ತು ಕಾನೂನು ತಜ್ಞರ ಪೀಠ: ಮನೇಕಾ ಗಾಂಧಿ

Update: 2018-10-12 14:34 GMT

ಹೊಸದಿಲ್ಲಿ,ಅ.12: ದೇಶದಲ್ಲಿ ಮೀ ಟೂ ಚಳವಳಿ ತೀವ್ರಗೊಳ್ಳುತ್ತಿರುವ ಮಧ್ಯೆ, ಈ ಚಳವಳಿಯಡಿಯಲ್ಲಿ ಬೆಳಕಿಗೆ ಬಂದಿರುವ ಲೈಂಗಿಕ ಕಿರುಕುಳ ಪ್ರಕರಣಗಳ ವಿಚಾರಣೆ ನಡೆಸಲು ಹಿರಿಯ ನ್ಯಾಯಾಧೀಶರು ಮತ್ತು ಕಾನೂನು ತಜ್ಞರನ್ನೊಳಗೊಂಡ ಸಮಿತಿಯನ್ನು ರಚಿಸುವುದಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಮನೇಕಾ ಗಾಂಧಿ ಶುಕ್ರವಾರ ತಿಳಿಸಿದ್ದಾರೆ. ನಾನು ಈ ಎಲ್ಲ ದೂರುಗಳನ್ನು ನಂಬುತ್ತೇನೆ. ಈ ಎಲ್ಲ ದೂರುಗಳ ಹಿಂದಿರುವ ನೋವು ಮತ್ತು ದುಃಖದ ಅರಿವು ನನಗಿದೆ. ಈ ಪ್ರಕರಣಗಳ ವಿಚಾರಣೆ ನಡೆಸಲು ಹಿರಿಯ ನ್ಯಾಯಾಧೀಶರು ಮತ್ತು ಕಾನೂನು ತಜ್ಞರನ್ನೊಳಗೊಂಡ ಸಮಿತಿಯನ್ನು ರಚಿಸಲು ಸೂಚನೆ ನೀಡಿರುವುದಾಗಿ ಮನೇಕಾ ಗಾಂಧಿ ತಿಳಿಸಿದ್ದಾರೆ. ಲೈಂಗಿಕ ಕಿರುಕುಳ ದೂರುಗಳನ್ನು ನಿಭಾಯಿಸಲು ಇರುವ ಕಾನೂನಾತ್ಮಕ ಮತ್ತು ಸಾಂಸ್ಥಿಕ ರೂಪುರೇಷೆಯನ್ನು ಈ ಸಮಿತಿಯು ಪರಿಶೀಲಿಸಿ ಈ ಬಗ್ಗೆ ಕಾನೂನನ್ನು ಯಾವ ರೀತಿ ಕಠಿಣಗೊಳಿಸಬಹುದು ಎಂಬ ಕುರಿತು ಸಮಿತಿಯು ಸಚಿವಾಲಯಕ್ಕೆ ಸಲಹೆ ನೀಡಲಿದೆ.

ಕೆಲಸ ಸ್ಥಳಗಳಲ್ಲಿ ತಮ್ಮ ಮೇಲೆ ನಡೆದಿರುವ ಲೈಂಗಿಕ ಕಿರುಕುಳ ಪ್ರಕರಣಗಳ ಬಗ್ಗೆ ಹಲವು ಮಹಿಳೆಯರು ಬಹಿರಂಗವಾಗಿ ಆರೋಪಗಳನ್ನು ಮಾಡುತ್ತಿದ್ದು ಕಳೆದ ಹದಿನೈದು ದಿನಗಳಲ್ಲಿ ‘ಮೀಟೂ’ ಚಳವಳಿ ದೇಶಾದ್ಯಂತ ತೀವ್ರವಾಗಿ ಹರಡುತ್ತಿದೆ. ಕೇಂದ್ರ ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ಎಂ.ಜೆ. ಅಕ್ಬರ್ ಅವರು ಪತ್ರಕರ್ತರಾಗಿದ್ದ ಸಮಯದಲ್ಲಿ ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎಂದು ಕನಿಷ್ಟ ಏಳು ಮಹಿಳೆಯರು ಆರೋಪಿಸುವ ಮೂಲಕ ಕೇಂದ್ರ ಬಿಜೆಪಿ ನೇತೃತ್ವದ ಸರಕಾರಕ್ಕೂ ‘ಮೀಟೂ’ ಹೊಡೆತ ಬಿದ್ದಿದೆ. ಸದ್ಯ ಚಿತ್ರರಂಗ, ಮನರಂಜನೆ ಹಾಗೂ ಮಾಧ್ಯಮದ ಜನರ ಹೆಸರೇ ಹೆಚ್ಚಾಗಿ ಕೇಳಿಬಂದಿರುವ ‘ಮೀಟೂ’ ಚಳವಳಿಯಲ್ಲಿ ಎಂ.ಜೆ.ಅಕ್ಬರ್ ಏಕೈಕ ರಾಜಕಾರಣಿಯಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News