ಫತ್ವಾ ನಿಷೇಧ ಆದೇಶ ತಡೆಹಿಡಿದ ಸುಪ್ರೀಂ ಕೋರ್ಟ್

Update: 2018-10-12 14:36 GMT

ಹೊಸದಿಲ್ಲಿ,ಅ.12: ರಾಜ್ಯದಲ್ಲಿರುವ ಎಲ್ಲ ಧಾರ್ಮಿಕ ಸಂಸ್ಥೆಗಳು, ಪಂಚಾಯತ್‌ಗಳು ಮತ್ತು ಸಂಘಟನೆಗಳು ಫತ್ವಾ ಹೊರಡಿಸುವುದರ ಮೇಲೆ ನಿಷೇಧ ಹೇರಿದ್ದ ಉತ್ತರಾಖಂಡ ಉಚ್ಚ ನ್ಯಾಯಾಲಯದ ಆದೇಶಕ್ಕೆ ಸರ್ವೋಚ್ಚ ನ್ಯಾಯಾಲಯ ಶುಕ್ರವಾರ ತಡೆ ನೀಡಿದೆ. ಫತ್ವಾ ಎನ್ನುವುದು ಧಾರ್ಮಿಕ ವಿಷಯಗಳಲ್ಲಿ ಕೇಳಲಾದ ಪ್ರಶ್ನೆಗಳಿಗೆ ಪ್ರತಿಕ್ರಿಯೆಯಾಗಿ ಅರ್ಹ ಮುಸ್ಲಿಂ ಪಂಡಿತರು ನೀಡುವ ಸಲಹೆ ಅಥವಾ ಅಭಿಪ್ರಾಯವಾಗಿದೆ ಎಂದು ಸುಪ್ರೀಂ ಕೋರ್ಟ್ ತಿಳಿಸಿದೆ.

ಉತ್ತರಾಖಂಡ ನ್ಯಾಯಾಲಯದ ಆಗಸ್ಟ್ 30ರ ಆದೇಶವನ್ನು ಪ್ರಶ್ನಿಸಿ ಮುಸ್ಲಿಂ ಸಂಘಟನೆ ಜಮೀಯತೆ ಉಲಮಾ ಹಿಂದ್ ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಧೀಶ ಮದನ್ ಬಿ.ಲೊಕುರ್ ಮತ್ತು ದೀಪಕ್ ಗುಪ್ತಾ ನೇತೃತ್ವದ ನ್ಯಾಯಪೀಠ ರಾಜ್ಯ ಸರಕಾರ ಮತ್ತು ಉಚ್ಚ ನ್ಯಾಯಾಲಯಕ್ಕೆ ನೋಟಿಸ್ ಜಾರಿ ಮಾಡಿದೆ. ಆಗಸ್ಟ್ 30ರಂದು ಉಚ್ಚ ನ್ಯಾಯಾಲಯ ನೀಡಿದ ಆದೇಶದಲ್ಲಿ, ಉತ್ತರಾಖಂಡದ ಧಾರ್ಮಿಕ ಸಂಸ್ಥೆಗಳು, ಸಂಘಟನೆಗಳು, ಪಂಚಾಯತ್‌ಗಳು, ಜನರ ಗುಂಪು ಫತ್ವಾ ಹೊರಡಿಸುವುದರ ಮೇಲೆ ನಿಷೇಧ ಹೇರಿತ್ತು. ಫತ್ವಾವು ಮೂಲಭೂತ ಹಕ್ಕುಗಳು, ಘನತೆ, ಸ್ಥಾನಮಾನ, ಪ್ರತಿಷ್ಠೆ ಮತ್ತು ವ್ಯಕ್ತಿಯ ಭಾದ್ಯತೆಗಳನ್ನು ಉಲ್ಲಂಘಿಸುತ್ತದೆ ಎಂದು ನ್ಯಾಯಾಲಯ ತನ್ನ ಆದೇಶದಲ್ಲಿ ತಿಳಿಸಿತ್ತು. ಧಾರ್ಮಿಕ ಸಂಘಟನೆಗಳು ಮತ್ತು ಸಂಸ್ಥೆಗಳು ಫತ್ವಾ ಹೊರಡಿಸುವುದರ ಮೇಲೆ ಹೇರಲಾಗಿರುವ ನಿಷೇಧ ಅಕ್ರಮ ಮತ್ತು ಅಸಮರ್ಥನೀಯ ಎಂದು ಜಮೀಯತೆ ಉಲಮಾ ತನ್ನ ಅರ್ಜಿಯಲ್ಲಿ ತಿಳಿಸಿತ್ತು. ದಾರುಲ್ ಇಫ್ತಾ (ಫತ್ವಾ ಮಂಡಳಿ) ಅಥವಾ ಮುಫ್ತಿಗಳು ಫತ್ವಾ ಎಂಬ ಶರಿಯತ್ ಕಾನೂನಿನ ಪ್ರಕಾರ ಅಭಿಪ್ರಾಯ ವ್ಯಕ್ತಪಡಿಸಲು ಅರ್ಹತೆಯನ್ನು ಪಡೆದಿರುತ್ತಾರೆ ಎಂದು ಜಮೀಯತೆ ಉಲಮಾ ತಿಳಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News