ಉಡುಪಿ ಜಿಲ್ಲೆಯಲ್ಲಿ ಶೀಘ್ರ ಮರಳುಗಾರಿಕೆ ಪ್ರಾರಂಭಕ್ಕೆ ಗರಿಷ್ಠ ಪ್ರಯತ್ನ: ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್

Update: 2018-10-12 15:33 GMT

ಉಡುಪಿ, ಅ.11: ಉಡುಪಿ ಜಿಲ್ಲೆಯ ಕರಾವಳಿ ನಿಯಂತ್ರಣ ವಲಯದಲ್ಲಿ (ಸಿಆರ್‌ಝಡ್) ಮರಳು ದಿಬ್ಬಗಳನ್ನು ಗುರುತಿಸಿ, ಮರಳುಗಾರಿಕೆಗೆ ಪರವಾನಿಗೆ ನೀಡಲು ರಾಷ್ಟ್ರೀಯ ಹಸಿರು ಪೀಠ (ಎನ್‌ಜಿಟಿ) ಹಾಗೂ ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವಾಲಯದ ಮಾರ್ಗಸೂಚಿಯಂತೆ ತಾನು ಗರಿಷ್ಠ ಪ್ರಯತ್ನ ನಡೆಸುತಿದ್ದು, ಶೀಘ್ರದಲ್ಲೇ ಮರಳುಗಾರಿಕೆ ಪ್ರಾರಂಭಗೊಳ್ಳುವ ವಿಶ್ವಾಸವಿದೆ ಎಂದು ಉಡುಪಿ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ತಿಳಿಸಿದ್ದಾರೆ.

ಜಿಲ್ಲೆಯ ಮರಳು ಸಮಸ್ಯೆಗೆ ಸಂಬಂಧಿಸಿದಂತೆ ತನ್ನ ವಿರುದ್ಧ ಕೇಳಿ ಬರುತ್ತಿರುವ ಆರೋಪಗಳಿಗೆ ಉತ್ತರಿಸಲು ಹಾಗೂ ನೈಜ ಸ್ಥಿತಿಯ ಕುರಿತು ವಿವರಿಸಲು ಮಣಿಪಾಲದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಇಂದು ಕರೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡುತಿದ್ದರು.

ಮರಳು ದಿಬ್ಬಗಳನ್ನು ಗುರುತಿಸುವುದಕ್ಕಾಗಿ ಸಹಾಯಕ ಕಮಿಷನರ್ ಅವರ ಅಧ್ಯಕ್ಷತೆಯಲ್ಲಿ ರಚಿಸಿರುವ ಉಪಸಮಿತಿ ನೀಡಿದ ವರದಿಯನ್ನು ಸೆ.27ರಂದು ನಡೆದ ಜಿಲ್ಲಾ 7 ಸದಸ್ಯರ ಮರಳು ಸಮಿತಿ ಸಭೆಯಲ್ಲಿ ಚರ್ಚಿಸಿ, ಮರಳು ದಿಬ್ಬ ಇರುವ ಪ್ರದೇಶಗಳನ್ನು ವೈಜ್ಞಾನಿಕವಾಗಿ ಪತ್ತೆ ಹಚ್ಚಿ, ಸರ್ವೆ ಕಾರ್ಯ ಕೈಗೊಂಡು ತಾಂತ್ರಿಕ ವರದಿ ನೀಡಲು ಸುರತ್ಕಲ್‌ನ ಎನ್‌ಐಟಿಕೆ ತಜ್ಞರ ತಂಡಕ್ಕೆ ಪ್ರಸ್ತಾವನೆಯನ್ನು ನೀಡಲಾಗಿತ್ತು ಎಂದರು.

ಉಡುಪಿ ತಾಲೂಕಿನಲ್ಲಿ ಸರ್ವೆ ನಡೆಸಿದ ಎನ್‌ಐಟಿಕೆ ತಂಡ 9 ಮರಳು ದಿಬ್ಬಗಳನ್ನು ಗುರುತಿಸಿ ಅ.9ರಂದು ನೀಡಿದ ತಾಂತ್ರಿಕ ವರದಿಯನ್ನು ಅದೇ ದಿನ ಕರೆಯಲಾದ ಜಿಲ್ಲಾ 7 ಸದಸ್ಯರ ಮರಳು ಸಮಿತಿ ಸಭೆಯಲ್ಲಿಟ್ಟು ಚರ್ಚಿಸಿ, ಸಮಿತಿಯ ತೀರ್ಮಾನದಂತೆ ಪ್ರಸ್ತಾವನೆಯನ್ನು ಅನುಮೋದನೆಗಾಗಿ ಅ.10 ರಂದೇ ರಾಜ್ಯ ಅರಣ್ಯ, ಪರಿಸರ ಮತ್ತು ಜೀವಿಪರಿಸ್ಥಿತಿ ಇಲಾಖೆ (ಕೆಎಸ್‌ಸಿಝಡ್‌ಎಂಎ)ಯ ಕಾರ್ಯದರ್ಶಿಯವರಿಗೆ ಕಳುಹಿಸಲಾಗಿದೆ.

ಒಂದೇ ವಾರದಲ್ಲಿ ಮರಳುಗಾರಿಕೆ: ಕೆಎಸ್‌ಸಿಝಡ್‌ಎಂಎಯಿಂದ ಪ್ರಸ್ತಾವನೆ ಅನುಮೋದನೆಗೊಂಡು ಬಂದ ಒಂದೇ ವಾರದಲ್ಲಿ ಸಿಆರ್‌ಝಡ್ ಪ್ರದೇಶದಲ್ಲಿ ಮರಳುಗಾರಿಕೆ ಪ್ರಾರಂಭಕ್ಕೆ ಬೇಕಾದ ಎಲ್ಲಾ ಕ್ರಮಗಳನ್ನು ಕೈಗೊಳ್ಳುವುದಾಗಿ ತಿಳಿಸಿದ ಜಿಲ್ಲಾಧಿಕಾರಿ, ಇಲ್ಲಿ ಕೇವಲ ಸಾಂಪ್ರದಾಯಿಕ ರೀತಿಯ ಮರಳು ಗಾರಿಕೆಗೆ ಮಾತ್ರ ಅವಕಾಶವಿದೆ ಎಂದೂ ತಿಳಿಸಿದರು.

ನಾನ್ ಸಿಆರ್‌ಝಡ್ ವ್ಯಾಪ್ತಿಯಲ್ಲಿ ನಾಲ್ಕು ಮರಳು ದಿಬ್ಬಗಳನ್ನು ಗುರುತಿಸಲಾಗಿದೆ. ಇವುಗಳಲ್ಲಿ ಎರಡು ಕಾರ್ಕಳ ಹಾಗೂ ಎರಡು ಬೈಂದೂರು ವ್ಯಾಪ್ತಿಯಲ್ಲಿದೆ. ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ -ಶಿವಮೊಗ್ಗ ಲೋಕಸಭಾ ಉಪಚುನಾವಣೆಗೆ ಸಂಬಂಧಿಸಿ- ಮಾದರಿ ನೀತಿ ಸಂಹಿತೆ ಜಾರಿ ಯಲ್ಲಿರುವುದರಿಂದ ಅವುಗಳನ್ನು ಹೊರತು ಪಡಿಸಿ ಕಾರ್ಕಳದ ಎರಡು ದಿಬ್ಬಗಳಲ್ಲಿ ಒಂದು ವಾರದಲ್ಲಿ ಮರಳುಗಾರಿಕೆ ಆರಂಭಿಸಲು ಸೂಕ್ತ ಕ್ರಮ ಕೈಗೊಳ್ಳುವುದಾಗಿ ಹೇಳಿದರು. ಆದರೆ ಇಲ್ಲಿ ಲಭ್ಯವಿರುವ ಮರಳನ್ನು ಸರಕಾರಿ ಯೋಜನೆಗಳಿಗೆ ಮಾತ್ರ ಬಳಸಲಾಗುವುದು ಎಂದವರು ಸ್ಪಷ್ಟಪಡಿಸಿದರು.
ಈ ನಡುವೆ ಕಳೆದ ಸೆ.27ರಂದು ಸಿಆರ್‌ಝಡ್‌ನ ಹೊಸ ನಕ್ಷೆ ಕೇಂದ್ರದಿಂದ ಅನುಮೋದನೆಗೊಂಡು ಬಂದಿದ್ದು, ಅದರಲ್ಲಿ ಬೈಂದೂರು ಸೇರಿದಂತೆ ಇಡೀ ಕುಂದಾಪುರ ತಾಲೂಕು ಸೂಕ್ಷ್ಮ ವಲಯ ಮತ್ತು ಅತಿ ಸೂಕ್ಷ್ಮ ವಲಯಗಳ ವ್ಯಾಪ್ತಿಗೆ ಬರುತ್ತಿದೆ ಎಂದವರು ವಿವರಿಸಿದರು.

ಯಾರ ಸರ್ಟಿಫಿಕೇಟ್ ಬೇಕಿಲ್ಲ: ಆದರೆ ಹಲವು ಸಾಮಾಜಿಕ ಜಾಲತಾಣ ಹಾಗೂ ವಿವಿಧ ಮಾದ್ಯಮಗಳಲ್ಲಿ ವಾಸ್ತವಾಂಶಗಳನ್ನು, ಇಲ್ಲಿನ ಸಮಸ್ಯೆಗಳನ್ನು ಮರೆಮಾಚಿ ಸುಳ್ಳು ಸುದ್ದಿಗಳನ್ನು ಪ್ರಚಾರ ಮಾಡಲಾಗುತ್ತಿದೆ. ಜಿಲ್ಲೆಯ ಜನರಿಗೆ ಮರಳು ಸಿಗದಂತೆ ತಾನು ಹಠತೊಟ್ಟಿರುವುದಾಗಿ, ಮರಳು ದಿಬ್ಬ ತೆರವಿಗೆ ವಿಳಂಬ ಧೋರಣೆ ಅನುಸರಿಸುತ್ತಿರುವುದಾಗಿ ಅಪಪ್ರಚಾರ ಮಾಡಲಾಗುತ್ತಿದೆ ಎಂದವರು ಆಕ್ರೋಶ ವ್ಯಕ್ತಪಡಿಸಿದರು.

ಮರಳುಗಾರಿಕೆ ವಿಷಯದಲ್ಲಿ ನನಗೆ ಯಾರ ಸರ್ಟಿಫಿಕೇಟ್ ಬೇಕಾಗಿಲ್ಲ. ಜಿಲ್ಲೆಯ ಜನರು ಮುಗ್ಧರು. ಆದರೆ ಅವರು ಮೂರ್ಖರಲ್ಲ. ಅವರಿಗೆ ತಪ್ಪು ಮಾಹಿತಿ ನೀಡಬೇಡಿ. ಮರಳುಗಾರಿಕೆಗೆ ಸಂಬಂಧಿಸಿದಂತೆ ಜಿಲ್ಲಾಡಳಿತ ಏಕಪಕ್ಷೀಯ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಿಲ್ಲ ಎಂದರು.

ಚೆನ್ನೈ ಹಸಿರು ಪೀಠದ ಆದೇಶ ಹಾಗೂ ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವಾಲಯದ 2011ರ ನವೆಂಬರ್ 8ರ ಸುತ್ತೋಲೆಯಂತೆ ಸಿಆರ್‌ಝಡ್ ವ್ಯಾಪ್ತಿಯಲ್ಲಿ ಮೀನುಗಾರರ ದೋಣಿಗಳ ಚಲನವಲನಕ್ಕೆ ತಡೆ ಉಂಟು ಮಾಡ ಬಹುದಾದ ನದಿ ನೀರಿನಲ್ಲಿ ನೈಸರ್ಗಿಕವಾಗಿ ಉಂಟಾಗಿರುವ ಮರಳು ದಿಬ್ಬ ಗಳನ್ನು ಮಾತ್ರ ತೆರವುಗೊಳಿಸುವುದಕ್ಕೆ ಅವಕಾಶವಿದೆ ಎಂದವರು ಹೇಳಿದರು.

ಇದಕ್ಕೆ ಮೊದಲು 2011ರ ಜ.6ರಂದು ಹೊರಡಿಸಿದ ಆದೇಶದಲ್ಲಿ ಸಿಆರ್‌ಝಡ್ ಪ್ರದೇಶದಲ್ಲಿ ಮರಳುಗಾರಿಕೆಯನ್ನು ನಿಷೇಧಿಸಿದ್ದು, ಅಲ್ಲಿ ಮರಳು ತೆಗೆಯುವುದು ಶಿಕ್ಷಾರ್ಹ ಅಪರಾಧ ಎನಿಸಿತ್ತು. ಆದರೆ ಬಳಿಕ ರಾಜ್ಯ ಸರಕಾರದ ವಿಶೇಷ ಮನವಿಯ ಮೇಲೆ ನಿಯಮಗಳಲ್ಲಿ ಕೆಲವು ರಿಯಾಯಿತಿಗಳನ್ನು ತೋರಿಸಿ ಮೀನುಗಾರರ ದೋಣಿ ಸಂಚಾರಕ್ಕೆ ತಡೆಯುಂಟು ಮಾಡುವ ಮರಳು ದಿಬ್ಬಗಳ ತೆರವಿಗೆ ಸಾಂಪ್ರದಾಯಿಕ ಮರಳುಗಾರಿಕೆಯಲ್ಲಿ ಅವಕಾಶ ನೀಡಲಾಗಿತ್ತು ಎಂದು ಜಿಲ್ಲಾಧಿಕಾರಿ ವಿವರಿಸಿದರು.

ಕಳೆದ ವರ್ಷ ಮೇ 31ರವರೆಗೆ ಸಿಆರ್‌ಝಡ್ ಪ್ರದೇಶದಲ್ಲಿ ಮರಳುಗಾರಿಕೆ ನಡೆದಿತ್ತು. ಈ ಅವಧಿಯಲ್ಲಿ 6,08,610 ಮೆಟ್ರಿಕ್ ಟನ್‌ನಷ್ಟು 3.65 ಕೋಟಿ ರೂ. ವೌಲ್ಯದ ಮರಳನ್ನು ತೆಗೆಯಲಾಗಿತ್ತು. ಆದರೆ ಕಳೆದ ಬಾರಿಯೂ6 ಜಿಲ್ಲಾಧಿಕಾರಿಗಳು ಅಕ್ರಮ ಮರಳುಗಾರಿಕೆಗೆ ಅವಕಾಶ ನೀಡಿದ್ದಾರೆ ಎಂದು ಆರೋಪಿಸಿ ಉದಯ ಸುವರ್ಣ ಹಾಗೂ ದಿನೇಶ್ ಕುಂದರ್ ಎಂಬವರು 2017ರ ನ.8ರಂದು ಮತ್ತೆ ಹಸಿರು ಪೀಠದ ಮುಂದೆ ದಾವೆ ಹೂಡಿದ್ದು, ಅದರ ವಿಚಾರಣೆ ಈಗಲೂ ನಡೆಯುತ್ತಿದೆ. ಆದರೆ ನ್ಯಾಯಾಲಯ ತಡೆಯಾಜ್ಞೆ ನೀಡಿಲ್ಲ ಎಂದು ಪ್ರಿಯಾಂಕ ಮೇರಿ ವಿವರಿಸಿದರು.

ಹೀಗಾಗಿ ಜಿಲ್ಲೆಯಲ್ಲಿ ಆಗಸ್ಟ್ 8ಕ್ಕೆ ಜಿಲ್ಲಾ 7 ಸದಸ್ಯರ ಮರಳು ಸಮಿತಿಯನ್ನು ರಚಿಸಲಾಗಿದೆ. ಡಿಸೆಂಬರ್ ತಿಂಗಳ ನಂತರವಷ್ಟೇ ವೈಜ್ಞಾನಿಕವಾಗಿ ಮರಳು ದಿಬ್ಬಗಳನ್ನು ಗುರುತಿಸಲು ಸಾಧ್ಯ ಎಂದು ಎನ್‌ಐಟಿಕೆ ವರದಿಯನ್ನು ನೀಡಿದ್ದರೂ, ಜಿಲ್ಲಾಡಳಿತ ಮರಳು ದಿಬ್ಬ ಗುರುತಿಸುವ ಹಾಗೂ ಅದಕ್ಕೆ ಕೆಎಸ್‌ಸಿಝಡ್‌ಎಂಎ ನಿಂದ ಅನುಮೋದನೆ ಪಡೆಯುವ ಪ್ರಕ್ರಿಯೆ ನಡೆಸಿದೆ ಎಂದವರು ತನ್ನನ್ನು ಸಮರ್ಥಿಸಿಕೊಂಡರು.

ಜಿಲ್ಲೆಯಲ್ಲಿ ಮರಳು ದಿಬ್ಬದ ಕುರಿತು ಮೀನುಗಾರರಿಂದ 47 ಅರ್ಜಿಗಳು ಬಂದಿದ್ದು, ಇವುಗಳಲ್ಲಿ 21 ಉಡುಪಿ ತಾಲೂಕು ಹಾಗೂ 26 ಕುಂದಾಪುರ ತಾಲೂಕಿನಿಂದ ಬಂದಿವೆ. ಅರ್ಜಿಗಳನ್ನು ಪರಿಶೀಲಿಸಿ ಸಹಾಯಕ ಕಮಿಷನರ್ ನೇತೃತ್ವದ ಉಪಸಮಿತಿ ವರದಿ ನೀಡಿದ್ದು, ಇದರ ಆಧಾರದಲ್ಲಿ ಎನ್‌ಐಟಿಕೆ ತಜ್ಞರ ತಂಡ ಉಡುಪಿ ತಾಲೂಕಿನಲ್ಲಿ 9 ಮರಳು ದಿಬ್ಬಗಳನ್ನು ಗುರುತಿಸಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News