ಶಿವಮೊಗ್ಗ ಲೋಕಸಭಾ ಉಪಚುನಾವಣೆ: ಮಧು ಬಂಗಾರಪ್ಪ ಸ್ಪರ್ಧೆ ಅನುಮಾನ

Update: 2018-10-12 16:48 GMT
ಮಧು ಬಂಗಾರಪ್ಪ

ಶಿವಮೊಗ್ಗ, ಅ. 12: ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ, ಕಾಂಗ್ರೆಸ್-ಜೆಡಿಎಸ್ ಪಕ್ಷಗಳ ನಡುವೆ ನಡೆಯುತ್ತಿರುವ ಹಗ್ಗಜಗ್ಗಾಟ ಕ್ಲೈಮಾಕ್ಸ್ ಹಂತಕ್ಕೆ ತಲುಪಿದೆ. ಜೆಡಿಎಸ್ ಅಭ್ಯರ್ಥಿ ಕಣಕ್ಕಿಳಿಸುವ ಸಾಧ್ಯತೆ ಬಹುತೇಕ ಕಡಿಮೆಯಾಗಿದೆ. ಕಾಂಗ್ರೆಸ್ ಹುರಿಯಾಳು ಅಖಾಡಕ್ಕಿಳಿಯುವುದು ಖಚಿತವಾಗಿದೆ. 

ಈ ಮೊದಲಿನ ನಿರ್ಧಾರದಂತೆ, ಜೆಡಿಎಸ್ ಬೆಂಬಲದೊಂದಿಗೆ ಅಭ್ಯರ್ಥಿ ಕಣಕ್ಕಿಳಿಸಲು ಕಾಂಗ್ರೆಸ್ ಸರ್ವಸಿದ್ಧತೆ ನಡೆಸಿತ್ತು. ಇತ್ತೀಚೆಗೆ ಜೆಡಿಎಸ್ ವರಿಷ್ಠ ಎಚ್. ಡಿ.ದೇವೇಗೌಡ ಅವರು ಶಿವಮೊಗ್ಗದಿಂದ ಮಧು ಬಂಗಾರಪ್ಪರನ್ನು ಅಭ್ಯರ್ಥಿಯಾಗಿ ಕಣಕ್ಕಿಳಿಸಲಾಗುವುದು ಎಂದು ಘೋಷಿಸುವ ಮೂಲಕ, ಕಾಂಗ್ರೆಸ್ ಪಾಳಯವನ್ನು ತಬ್ಬಿಬ್ಬುಗೊಳಿಸಿದ್ದರು. ದೇವೇಗೌಡರ ಈ ದಿಢೀರ್ ನಡೆಗೆ, ಕಾಂಗ್ರೆಸ್ ಪಾಳಯದಲ್ಲಿ ಅಸಮಾಧಾನ ವ್ಯಕ್ತವಾಗಲಾರಂಭಿಸಿತ್ತು. ಶತಾಯಗತಾಯ ಶಿವಮೊಗ್ಗ ಕ್ಷೇತ್ರದಲ್ಲಿ ತನ್ನ ಪಕ್ಷದ ಅಭ್ಯರ್ಥಿ ಕಣಕ್ಕಿಳಿಸಲು ಕಾಂಗ್ರೆಸ್ ವರಿಷ್ಠರು ನಿರ್ಧರಿಸಿದ್ದರು. ಇನ್ನೊಂದೆಡೆ ವಿದೇಶಿ ಪ್ರವಾಸದಲ್ಲಿದ್ದ ಮಧು ಬಂಗಾರಪ್ಪಗೆ, ಪ್ರವಾಸ ಮೊಟಕುಗೊಳಿಸಿ ಹಿಂದಿರುಗುವಂತೆಯೂ ಜೆಡಿಎಸ್ ಪಕ್ಷ ಸೂಚಿಸಿತ್ತು ಎನ್ನಲಾಗಿದೆ.

ಈ ಎಲ್ಲ ಕಾರಣಗಳಿಂದ ಶಿವಮೊಗ್ಗ ಕ್ಷೇತ್ರದಲ್ಲಿ ಕಾಂಗ್ರೆಸ್-ಜೆಡಿಎಸ್ ಪಕ್ಷಗಳ ಮೈತ್ರಿ ಅಭ್ಯರ್ಥಿ ಯಾರಾಗಲಿದ್ದಾರೆಂಬ ಕುತೂಹಲ ಕೆರಳಿಸಿದೆ. ಇದೆಲ್ಲದರ ನಡುವೆಯೇ, ಜೆಡಿಎಸ್ ವರಿಷ್ಠರ ಟಿಕೆಟ್ ಆಫರ್ ಹೊರತಾಗಿಯೂ, ಮಾಜಿ ಶಾಸಕ ಮಧು ಬಂಗಾರಪ್ಪ ಉಪಚುನಾವಣಾ ಕಣಕ್ಕಿಳಿಯಲು ನಿರಾಸಕ್ತಿ ವ್ಯಕ್ತಪಡಿಸಿದ್ದಾರೆ ಎಂಬ ಮಾಹಿತಿ ಕೇಳಿಬರುತ್ತಿದೆ. ಸದ್ಯದ ಶಿವಮೊಗ್ಗ ಲೋಕಸಭಾ ಕ್ಷೇತ್ರದ ರಾಜಕೀಯ ಬಲಾಬಲ ಗಮನಿಸಿದರೆ, ಬಿಜೆಪಿ ಪ್ರಾಬಲ್ಯ ಹೆಚ್ಚಿದೆ. ಕಾಂಗ್ರೆಸ್-ಜೆಡಿಎಸ್ ಮೈತ್ರಿ ಮಾಡಿಕೊಂಡರೂ ಅಷ್ಟು ಸುಲಭವಾಗಿ ಬಿಜೆಪಿ ಮಣಿಸುವುದು ಸಾಧ್ಯವಿಲ್ಲ. ನಾಲ್ಕೈದು ತಿಂಗಳ ಅವಧಿಯಲ್ಲಿಯೇ ಲೋಕಸಭೆ ಸಾರ್ವತ್ರಿಕ ಚುನಾವಣೆಯೂ ಎದುರಾಗುತ್ತಿದೆ. ಉಪಚುನಾವಣಾ ಕಣಕ್ಕಿಳಿಯುವುದರಿಂದ ವೈಯಕ್ತಿಕ ಲಾಭಕ್ಕಿಂತ ನಷ್ಟವೇ ಹೆಚ್ಚು ಎಂಬ ಭಾವನೆ ಮಧು ಬಂಗಾರಪ್ಪ ಅವರದ್ದಾಗಿದೆ ಎಂದು ಅವರ ಆಪ್ತ ಮೂಲಗಳು ಹೇಳುತ್ತವೆ.

ಅಭ್ಯರ್ಥಿ ಸಿಗುತ್ತಿಲ್ಲ 

ಶಿವಮೊಗ್ಗ ಕ್ಷೇತ್ರದಿಂದ ಕಣಕ್ಕಿಳಿಯಲು ಕಾಂಗ್ರೆಸ್ ಪಕ್ಷದಲ್ಲಿ ಸಾಲು ಸಾಲು ಸ್ಪರ್ಧಾಕಾಂಕ್ಷಿಗಳಿದ್ದಾರೆ. ಆದರೆ ಆ ಪಕ್ಷದ ವರಿಷ್ಠರಿಗೆ, ಪ್ರಬಲ ಅಭ್ಯರ್ಥಿ ಇಲ್ಲಿಯವರೆಗೂ ಸಿಕ್ಕಿಲ್ಲ. ಶೋಧ ಪ್ರಕ್ರಿಯೆ ಮುಂದುವರಿಸಿದ್ದಾರೆ. ಕಳೆದ ಮೂರ್ನಾಲ್ಕು ದಿನಗಳಿಂದ ಬೆಂಗಳೂರಿನಲ್ಲಿ ನಿರಂತರ ಸಭೆ ನಡೆಸುತ್ತಿರುವ ಆ ಪಕ್ಷದ ರಾಜ್ಯ ಮುಖಂಡರು, ಇಲ್ಲಿಯವರೆಗೂ ಸ್ಪಷ್ಟ ನಿರ್ಧಾರ ಕೈಗೊಳ್ಳಲು ಸಾಧ್ಯವಾಗಿಲ್ಲ ಎನ್ನಲಾಗಿದೆ. ಈಗಾಗಲೇ ಅಳೆದು ತೂಗಿ ಎರಡ್ಮೂರು ಸ್ಪರ್ಧಾಕಾಂಕ್ಷಿಗಳ ಹೆಸರನ್ನು ಅಂತಿಮ ಹಂತಕ್ಕೆ ಅಖೈರುಗೊಳಿಸಿರುವ ಕಾಂಗ್ರೆಸ್ ವರಿಷ್ಠರು, ಶನಿವಾರ ಬೆಂಗಳೂರಿಗೆ ಆಗಮಿಸುತ್ತಿರುವ ಪಕ್ಷದ ವರಿಷ್ಠ ರಾಹುಲ್ ಗಾಂಧಿಯವರ ಸಮ್ಮುಖದಲ್ಲಿ ಸರ್ವಸಮ್ಮತ ಅಭ್ಯಥಿಯೋರ್ವರನ್ನು ಕಣಕ್ಕಿಳಿಸುವ ಅಂತಿಮ ನಿರ್ಧಾರ ಕೈಗೊಳ್ಳುವ ಸಾಧ್ಯತೆಯಿದೆ ಎಂದು ಆ ಪಕ್ಷದ ಉನ್ನತ ಮೂಲಗಳು ಮಾಹಿತಿ ನೀಡುತ್ತವೆ.

ಸ್ಪರ್ಧೆಗೆ ಪ್ರಮುಖ ನಾಯಕರ ಹಿಂದೇಟು

ಶಿವಮೊಗ್ಗ ಕ್ಷೇತ್ರದಲ್ಲಿ ಜೆಡಿಎಸ್ ಬೆಂಬಲದೊಂದಿಗೆ ಬಿಜೆಪಿ ಎದುರು ಅಭ್ಯರ್ಥಿ ಕಣಕ್ಕಿಳಿಸುವ ತಯಾರಿ ನಡೆಸುತ್ತಿರುವ ರಾಜ್ಯ ಕಾಂಗ್ರೆಸ್‌ಗೆ, ಪ್ರಬಲ ಹುರಿಯಾಳು ಆಯ್ಕೆಯೇ ದೊಡ್ಡ ಕಗ್ಗಂಟಾಗಿ ಪರಿಣಮಿಸಿದೆ. ಈ ಮೊದಲು ಕಾಂಗ್ರೆಸ್ ಪಕ್ಷವು ಮಾಜಿ ಸಚಿವರಾದ ಕಾಗೋಡು ತಿಮ್ಮಪ್ಪ, ಕಿಮ್ಮನೆ ರತ್ನಾಕರ ಹಾಗೂ ಕಳೆದ ಬಾರಿ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿದ್ದ ಕೆಪಿಸಿಸಿ ಅಧ್ಯಕ್ಷ ಮಂಜುನಾಥ ಭಂಡಾರಿಯವರಲ್ಲಿ ಓರ್ವರನ್ನು ಅಭ್ಯರ್ಥಿಯಾಗಿ ಕಣಕ್ಕಿಳಿಸಲು ನಿರ್ಧರಿಸಿತ್ತು. ಆದರೆ ಈ ಮೂವರು ನಾಯಕರು ಚುನಾವಣಾ ಕಣಕ್ಕಿಳಿಯಲು ನಿರಾಸಕ್ತಿ ತೋರಿಸಿದ್ದರು. ಸ್ವತಃ ಪಕ್ಷದ ಹಿರಿಯ ವರಿಷ್ಠರೇ ಮನವೊಲಿಕೆಗೆ ಮುಂದಾದರೂ, ಈ ಮೂವರು ನಾಯಕರು ಸ್ಪರ್ಧೆಗೆ ಸಹಮತ ವ್ಯಕ್ತಪಡಿಸಿಲ್ಲ ಎನ್ನಲಾಗಿದೆ. ಈ ಕಾರಣದಿಂದ ವರಿಷ್ಠರು ಇದೀಗ ಇತರ ಸ್ಪರ್ಧಾಕಾಂಕ್ಷಿಗಳತ್ತ ಚಿತ್ತ ಹರಿಸಿದ್ದಾರೆ. ಪ್ರಬಲ ನಾಯಕರನ್ನು ಕಣಕ್ಕಿಳಿಸುವ ತಂತ್ರಗಾರಿಕೆ ಕೂಡ ಮುಂದುವರಿದಿದೆ.

ಈಡಿಗ-ಒಕ್ಕಲಿಗ-ಲಿಂಗಾಯಿತ ನಾಯಕರ ಟಿಕೆಟ್ ಲಾಬಿ!
ಪ್ರಮುಖ ನಾಯಕರು ಸ್ಪರ್ಧೆಗೆ ನಕಾರ ವ್ಯಕ್ತಪಡಿಸುತ್ತಿದ್ದಂತೆ, ಕಾಂಗ್ರೆಸ್‍ನ ಎರಡನೇ ಹಂತದ ಜಿಲ್ಲಾ ನಾಯಕರು ಸ್ಪರ್ಧೆಗೆ ಪೈಪೋಟಿ ನಡೆಸಲಾರಂಭಿಸಿದ್ದಾರೆ. ಜೊತೆಗೆ ಜಾತಿಯಾಧಾರಿತ ಟಿಕೆಟ್ ಲಾಬಿಯೂ ಕೂಡ ಜೋರಾಗಿ ನಡೆಯುತ್ತಿದೆ ಎಂದು ಹೇಳಲಾಗುತ್ತಿದೆ. ಈಡಿಗ ಕೋಟಾದಡಿ ಜಿಲ್ಲಾ ಪಂಚಾಯತ್ ಸದಸ್ಯ ಕಲಗೋಡು ರತ್ನಾಕರ್, ಒಕ್ಕಲಿಗ ಕೋಟಾದಡಿ ಭದ್ರಾ ಅಚ್ಚುಕಟ್ಟು ಪ್ರಾಧಿಕಾರದ ಮಾಜಿ ಅಧ್ಯಕ್ಷ ಹೆಚ್.ಎಸ್.ಸುಂದರೇಶ್, ಲಿಂಗಾಯತ ಕೋಟಾದಡಿ ಕಾಪೋರೇಟರ್ ಹೆಚ್.ಸಿ.ಯೋಗೇಶ್ ಹಾಗೂ ಸಾಗರ ತಾ.ಪಂ. ಅಧ್ಯಕ್ಷ ಮಲ್ಲಿಕಾರ್ಜುನ ಹಕ್ರೆಯವರು ಪೈಪೋಟಿ ನಡೆಸುತ್ತಿದ್ದಾರೆ. ಮತ್ತೊಂದೆಡೆ ಆ ಪಕ್ಷದ ಜಿಲ್ಲಾಧ್ಯಕ್ಷ ತೀ.ನಾ.ಶ್ರೀನಿವಾಸ್‍ರವರು ಜಾತಿ ಆಧಾರದಲ್ಲಿ ಟಿಕೆಟ್ ಹಂಚಿಕೆ ಮಾಡದೆ, ತಮ್ಮ ಸ್ಪರ್ಧೆಗೆ ಅವಕಾಶ ಮಾಡಿಕೊಡುವಂತೆ ವರಿಷ್ಠರಿಗೆ ಮನವಿ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. 

Writer - ಬಿ. ರೇಣುಕೇಶ್‌

contributor

Editor - ಬಿ. ರೇಣುಕೇಶ್‌

contributor

Similar News