ಮನುವಾದ ಪ್ರಣೀತವಾದ ಜಾತಿವ್ಯವಸ್ಥೆಯಿಂದ ಸಮಾನತೆ ನಿರಾಕರಣೆ: ಶಿವಸುಂದರ್

Update: 2018-10-13 08:58 GMT

ಮಂಗಳೂರು, ಅ.13: ನಮ್ಮ ಸಂವಿಧಾನದಲ್ಲಿ ಸಮಾನತೆಯು ಪ್ರಮುಖ ಆಶಯವಾಗಿದ್ದರೂ, ಮನುವಾದ ಪ್ರಣೀತವಾದ ಜಾತಿವ್ಯವಸ್ಥೆಯು ಸಾಮಾಜಿಕ ಹಾಗೂ ಅವಕಾಶಗಳಲ್ಲಿ ಸಮಾನತೆಯನ್ನು ನಿರಾಕರಿಸುತ್ತದೆ. ಇದರಿಂದಾಗಿಯೇ ಭಾರತದಲ್ಲಿ ಮಹಿಳೆಯರ ರಾಜಕೀಯ ಸಮಾನತೆ ಇನ್ನೂ ಶೇ. 11ನ್ನು ದಾಟಲು ಸಾಧ್ಯವಾಗಿಲ್ಲ ಎಂದು ಖ್ಯಾತ ಚಿಂತಕ ಕೆ. ಶಿವಸುಂದರ್ ಅಭಿಪ್ರಾಯಿಸಿದರು.

ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟ, ಮಹಿಳಾ ದೌರ್ಜನ್ಯ ವಿರೋಧಿ ವೇದಿಕೆ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಭಾಗಿತ್ವದಲ್ಲಿ ನಂತೂರಿನ ಸಿಒಡಿಪಿ ಸಭಾಂಗಣದಲ್ಲಿ ಆಯೋಜಿಸಲಾದ ‘ಚುನಾವಣೆ: ಒಳ ಹೊರಗೆ’ ಸಂವಾದ ಕಾರ್ಯಕ್ರಮದಲ್ಲಿ ಚುನಾವಣೆ- ಸುಧಾರಣೆ ಎಂಬ ವಿಷಯದಲ್ಲಿ ಅವರು ಮಾತನಾಡಿದರು.

ಪಾಕಿಸ್ತಾನದಲ್ಲಿ ಶೇ. 22 ಹಾಗೂ ಅಪಘಾನಿಸ್ತಾನ ಶೇ. 21ರಷ್ಟು ಮಹಿಳೆಯರಿಗೆ ರಾಜಕೀಯದಲ್ಲಿ ಪ್ರಾತಿನಿಧ್ಯ ದೊರಕಿದೆಯಾದರೂ, ಸಮಾನತೆಗೆ ಆದ್ಯತೆ ನೀಡಿರುವ ನಮ್ಮ ಭಾರತದಲ್ಲಿ ಲೋಕಸಭೆ ಮತ್ತು ರಾಜ್ಯಸಭೆಗಳಲ್ಲಿ ರಾಜಕೀಯ ಪ್ರಾತಿನಿಧ್ಯ ಬೆರಳೆಣಿಕೆ ಮಾತ್ರವೇ. ಪಂಚಾಯತ್ ರಾಜ್ ವ್ಯವಸ್ಥೆಯವರೆಗೆ ಮಾತ್ರವೇ ಮಹಿಳೆಗೆ ಸಮಾನತೆ ದೊರಕಿದೆ. ಇಂತಹ ಪರಿಸ್ಥಿತಿಯಲ್ಲಿ ಪ್ರಭುತ್ವ ಮಧ್ಯ ಪ್ರವೇಶಿಸಿ ಮಹಿಳೆಯರಿಗೆ ಪ್ರಾತನಿಧ್ಯವನ್ನು ಒದಗಿಸಬೇಕಾಗಿದೆ. ಇದಕ್ಕಾಗಿ ಚುನಾವಣೆ ವ್ಯವಸ್ಥೆಯಲ್ಲಿ ಸುಧಾರಣೆಯ ಜತೆಗೆ ಜನಚಳವಳಿ ಗಟ್ಟಿಯಾಗಬೇಕು ಎಂದು ಅವರು ಆಶಯ ವ್ಯಕ್ತಪಡಿಸಿದರು.

ಚುನಾವಣೆಯ ಸುಧಾರಣೆಯ ಬಗ್ಗೆ ಮಾತನಾಡುವ ಈ ಸಮಯದಲ್ಲಿ ಮೂಲಭೂತ ರಚನೆಯಲ್ಲಿ ಮಹಿಳೆಯರ ಅವಕಾಶಗಳನ್ನು ಖಾತರಿಪಡಿಸಿ ಹೆಚ್ಚುಪಡಿಸಿ ಗುಣಮಟ್ಟ ಮತ್ತು ಪರಿಣಾಮಕಾರಿ ಬದಲಾವಣೆ ಅಗತ್ಯವಾಗಿದೆ. ಬಹುಸಂಖ್ಯಾತರ ಮತಗಳಿಗೆ ಪ್ರಾತಿನಿಧಿತ್ವ ಇಲ್ಲದ ಚುನಾವಣಾ ವ್ಯವಸ್ಥೆಯ ಮೂಲಕ ಪ್ರಜಾತಂತ್ರ ದುರ್ಬಲವಾಗಿದೆ. ಎಲ್ಲರೂ ಸಮಾನತೆಯಿಂದ ಘನತೆಯಿಂದ ಬಾಳುವ ಹಕ್ಕನ್ನು ಸಂವಿಧಾನ ಕಲ್ಪಿಸಿದೆಯಾದರೂ ಸಮಾಜದಲ್ಲಿ ಬಲವಿದ್ದವರು ಬದುಕುವ ಪರಿಸ್ಥಿತಿ. ಜಾತಿ ಧರ್ಮ ಆಧಾರಿತ ರಾಜಕಾರಣ ಸಮಾನತೆಯನ್ನು ಕಡೆಗಣಿಸುತ್ತಿದೆ. ಈ ವ್ಯವಸ್ಥೆ ಬದಲಾದಾಗ ಮಾತ್ರ ಮಹಿಳೆಗೆ ರಾಜಕೀಯದಲ್ಲಿ ಸಮಾನತೆ ಸಿಗಲು ಸಾಧ್ಯ. ಇದಕ್ಕಾಗಿ ಮಹಿಳೆಯರು ಬೀದಿಗಿಳಿದು ಹೋರಾಡುವುದು ಅನಿವಾರ್ಯ ಎಂದವರು ವಿಶ್ಲೇಷಿಸಿದರು.

‘ಚುನಾವಣೆ: ಮಹಿಳಾ ಅನುಭವ’ದ ವಿಷಯದಲ್ಲಿ ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ಮಾತನಾಡಿ, ರಾಜಕೀಯದಲ್ಲಿ ಮಹಿಳೆಯರನ್ನು ಹಿಂದಕ್ಕೆ ತಳ್ಳುವುದೇ ಅಧಿಕ. ಆದರೆ ಅದಕ್ಕೆ ಅಂಜದೆ, ಧೈರ್ಯಗೆಡದೆ ಎದ್ದು ನಿಲ್ಲಲು ಪ್ರಯತ್ನಿಸಿದರೆ ಮಾತ್ರವೇ ರಾಜಕೀಯದಲ್ಲಿ ಯಶಸ್ಸು ಕಾಣಲು ಸಾಧ್ಯ ಎಂದರು.

ರಾಜಕೀಯ ಸೇರಿದವರು ಹಣ ಮಾಡುತ್ತಾರೆ ಎನ್ನುತ್ತಾರೆ. ಆದರೆ ನಾನು ಎರಡು ಅವಧಿಯಲ್ಲಿ ಶಾಸಕಿಯಾಗಿದ್ದುಕೊಂಡು ನಾನು 1000 ಕೋಟಿರೂ.ಗಳ ಅಭಿವೃದ್ಧಿ ಕಾಮಗಾರಿಗಳನ್ನು ಮಾಡಿಸಿದ ಹೆಮ್ಮೆ ನನಗಿದೆ. ಅದರ ಬಗ್ಗೆ ಸುದ್ದಿಯೂ ಆಗಿದೆ. ಆದರೆ ಈ ಅವಧಿಯಲ್ಲಿ ನಾನು ನನ್ನ ಹೆಸರಿಗಿದ್ದ ಭೂಮಿಯನ್ನು ಕಳೆದುಕೊಂಡಿದ್ದು ಮಾತ್ರ ಸುದ್ದಿಯಾಗಲೇ ಇಲ್ಲ ಎಂದು ಅವರು ಹೇಳಿದರು.

ಜಿ.ಪಂ.ನ ಸದಸ್ಯೆ ಧನಲಕ್ಷ್ಮಿ ಗಟ್ಟಿ ಮಾತನಾಡಿ, ಗ್ರಾಮ ಪಂಚಾಯತ್ ಮಟ್ಟದಿಂದ ಜಿಲ್ಲಾ ಪಂಚಾಯತ್ ಮಟ್ಟದವರೆಗೆ ಮೀಸಲಾತಿ ನೆಲೆಯಲ್ಲಿ ಪಕ್ಷಗಳ ಮೂಲಕ ಮಹಿಳೆಯರಿಗೆ ಪ್ರಾತಿನಿಧ್ಯವನ್ನು ಒದಗಿಸಲಾಗುತ್ತಿದೆ. ಆದರೆ ಬಳಿಕ ಶಾಸಕ, ಸಂಸದರ ಸ್ಥಾನಕ್ಕೆ ಚುನಾವಣೆಯಲ್ಲಿ ಸ್ಪರ್ಧಿಸಲು ರಾಜಕೀಯ ಪಕ್ಷಗಳು ಮಹಿಳೆಯರಿಗೆ ಹೆಚ್ಚಿನ ಆದ್ಯತೆಯನ್ನು ನೀಡುತ್ತಿಲ್ಲ. ಈ ಬಗ್ಗೆ ಚಿಂತನೆ ಅಗತ್ಯವಾಗಿದೆ ಎಂರು.

ಕಾರ್ಪೊರೇಟರ್ ಅಪ್ಪಿ, ಪುತ್ತೂರು ನಗರಸಭೆಯ ಮಾಜಿ ಸದಸ್ಯೆ ಝೊಹರಾ ನಿಸಾರ್ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು. ಡೀಡ್ಸ್ ಸಂಸ್ಥೆಯ ನಿರ್ದೇಶಕಿ ಮರ್ಲಿನ್ ಮಾರ್ಟಿಸ್ ಅಧ್ಯಕ್ಷತೆ ವಹಿಸಿದ್ದರು. ಸಂವಿಧಾನದ ಆಶಯವನ್ನು ತರಿಕಿಟ ಕಲಾ ಕಮ್ಮಟದ ಪವಿತ್ರಾ ಓದಿದರು. ಕಾವ್ಯಶ್ರೀ ಆಶಯ ಗೀತೆ ಹಾಡಿದರು. ಮಹಿಳಾ ದೌರ್ಜನ ವಿರೋಧಿ ವೇದಿಕೆಯ ಸದಸ್ಯೆ ವಾಣಿ ಪೆರಿಯೋಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಗುಲಾಬಿ ಬಿಳಿಮಲೆ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News