ರಿಲಾಯನ್ಸ್ ಡಿಫೆನ್ಸ್ ಗೆ ಉಡುಗೊರೆ ನೀಡಲು ಎಚ್ಎಎಲ್ ನಿಂದ ರಫೇಲ್ ಡೀಲ್ ಕಿತ್ತುಕೊಂಡ ಕೇಂದ್ರ ಸರಕಾರ: ರಾಹುಲ್ ಆರೋಪ

Update: 2018-10-13 14:19 GMT

ಹೊಸದಿಲ್ಲಿ, ಅ.13: ಭಾರತವನ್ನು ಅಂತರಿಕ್ಷಕ್ಕೆ ಕೊಂಡೊಯ್ದ ಎಚ್ಎಎಲ್ ದೇಶದ ಕಾರ್ಯತಂತ್ರದ ಸೊತ್ತು ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್ಎಎಲ್)ನಲ್ಲಿ ಮಾಜಿ ಮತ್ತು ಕಾರ್ಯನಿರತ ಉದ್ಯೋಗಿಗಳನ್ನುದ್ದೇಶಿಸಿ ಮಾತನಾಡಿದ ಅವರು, “ಎಚ್ಎಎಲ್ ಕೇವಲ ಒಂದು ಕಂಪೆನಿಯಲ್ಲ. ಎಚ್ಎಎಲ್ ದೇಶಕ್ಕೆ ನೀಡಿದ ಕೊಡುಗೆ ಅಪಾರ” ಎಂದರು.

'ರಫೇಲ್ ನಿಮ್ಮ ಹಕ್ಕಾಗಿದೆ. ವಿಮಾನ ತಯಾರಿಕೆಗೆ ಬೇಕಾದ ಅನುಭವ ನಿಮಗಿದೆ. ನಾನಿಲ್ಲಿ ನಿಮ್ಮನ್ನುದ್ದೇಶಿಸಿ ಮಾತನಾಡಲು ಬಂದಿಲ್ಲ. ನಿಮ್ಮ ಮಾತುಗಳನ್ನು ಆಲಿಸಲು ಬಂದಿದ್ದೇನೆ. ರಿಲಾಯನ್ಸ್ ಡಿಫೆನ್ಸ್ ಗೆ ಉಡುಗೊರೆ ನೀಡುವ ಸಲುವಾಗಿ ಎಚ್ಎಎಲ್ ನಿಂದ ರಫೇಲ್ ಡೀಲನ್ನು ಕಿತ್ತುಕೊಳ್ಳಲಾಗಿದೆ” ಎಂದವರು ಆರೋಪಿಸಿದರು. ಎಚ್‌ಎಎಲ್ ಸಂಸ್ಥೆಯು ಆಧುನಿಕ ಭಾರತದ ದೇವಾಲಯ ಇದ್ದಂತೆ. ಇಂತಹ ಸಂಸ್ಥೆಗಳ ಮೇಲೆ ಹಲ್ಲೆ ನಡೆಸಿ, ನಾಶಪಡಿಸಲು ಪ್ರಯತ್ನಿಸ ಲಾಗುತ್ತಿದೆ. ಯಾವುದೇ ಕಾರಣಕ್ಕೂ ಅದಕ್ಕೆ ಅವಕಾಶ ಮಾಡಿಕೊಡಬಾರದು ಎಂದು ಹೇಳಿದರು.

ಎಚ್‌ಎಎಲ್ ಸಂಸ್ಥೆಯ ಸಿಬ್ಬಂದಿಗಳು 78 ವರ್ಷಗಳ ಕಾಲ ದೇಶಕ್ಕಾಗಿ ದುಡಿದಿದ್ದಾರೆ. ಬೇರೆಯವರು ತಮ್ಮ ಭವಿಷ್ಯಕ್ಕಾಗಿ ಇವರನ್ನು ನಾಶ ಮಾಡಲು ಮುಂದಾದರೆ ಅದನ್ನು ಒಪ್ಪಲು ಸಾಧ್ಯವಿಲ್ಲ. ತೇಜಸ್, ಸುಖೋಯ್ ಸೇರಿದಂತೆ ಅನೇಕ ರೀತಿಯ ಯುದ್ಧ ವಿಮಾನಗಳನ್ನು ತಯಾರಿಸಿರುವ ಎಚ್‌ಎಎಲ್ ಅನುಭವವನ್ನು ಕಡೆಗಣಿಸುವುದು ಸರಿಯಲ್ಲ ಎಂದು ಅವರು ಹೇಳಿದರು.

ನಾನು ಇಲ್ಲಿ ಯಾವುದೇ ರಾಜಕೀಯ ಸಭೆ, ಸಮಾರಂಭಕ್ಕಾಗಿ ಬಂದಿಲ್ಲ. ಎಚ್‌ಎಎಲ್‌ಗೆ ರಫೆಲ್ ಯುದ್ಧ ವಿಮಾನ ನಿರ್ಮಿಸುವ ಸಾಮರ್ಥ್ಯವಿಲ್ಲ ಎಂದು ರಕ್ಷನಾ ಸಚಿವೆ ಹೇಳುತ್ತಿದ್ದಾರೆ. ಎಚ್‌ಎಎಲ್‌ನ ಸಾಮರ್ಥ್ಯವನ್ನು ನಾವು ಇಲ್ಲಿ ಕಣ್ಣಾರೆ ನೋಡುತ್ತಿದ್ದೇವೆ ಎಂದು ಕೇಂದ್ರ ಸರಕಾರಕ್ಕೆ ರಾಹುಲ್‌ಗಾಂಧಿ ತಿರುಗೇಟು ನೀಡಿದರು. ಎಚ್‌ಎಎಲ್ ಸಿಬ್ಬಂದಿಗಳು ಅನುಭವಿಸುತ್ತಿರುವ ನೋವನ್ನು ನಾನು ಅರ್ಥ ಮಾಡಿಕೊಳ್ಳಬಲ್ಲೆ. ನಿಮ್ಮ ಜೊತೆ ನಾನು ನಿಂತಿದ್ದೇನೆ. ಎಚ್‌ಎಎಲ್ ಸಂಸ್ಥೆ ಜೊತೆ ಮಾಡಿಕೊಂಡಿದ್ದ ಒಪ್ಪಂದವನ್ನು ರದ್ದು ಮಾಡಿರುವುದರ ಜೊತೆಗೆ, ಈ ಸಂಸ್ಥೆಯ 5 ಸಾವಿರ ಕೋಟಿ ರೂ.ಗಳನ್ನು ಕೇಂದ್ರ ಸರಕಾರ ಹಿಂಪಡೆದಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಎಚ್‌ಎಎಲ್ ಅನುಭವ ಹಾಗೂ ಸಾಮರ್ಥ್ಯದ ಬಗ್ಗೆ ಪ್ರಶ್ನೆ ಮಾಡುವವರು, ಯಾವುದೇ ಅನುಭವವಿಲ್ಲದ ವ್ಯಕ್ತಿಯ ಸಂಸ್ಥೆಗೆ ಗುತ್ತಿಗೆ ನೀಡಿರುವುದು ಎಷ್ಟರಮಟ್ಟಿಗೆ ಸರಿ. ಸಾರ್ವಜನಿಕ ವಲಯವು ದೇಶದ ಹಾಗೂ ರಕ್ಷಣಾ ಪಡೆಗಳ ಬೆನ್ನೆಲುವಾಗಿದೆ. ಎಚ್‌ಎಎಲ್, ಇಸ್ರೋ, ಡಿಆರ್‌ಡಿಓ ಎಲ್ಲವೂ ದೇಶಕ್ಕಾಗಿ ಜೊತೆಯಲ್ಲಿ ಕೆಲಸ ಮಾಡುತ್ತವೆ ಎಂದು ರಾಹುಲ್‌ಗಾಂಧಿ ಹೇಳಿದರು. 35 ಸಾವಿರ ಕೋಟಿ ರೂ.ಸಾಲ ಹೊಂದಿರುವ ಅನಿಲ್ ಅಂಬಾನಿ ಅವರ ಸಂಸ್ಥೆಗೆ 30 ಸಾವಿರ ಕೋಟಿ ರೂ.ಗಳ ರಫೆಲ್ ವಿಮಾನ ಖರೀದಿಯ ಗುತ್ತಿಗೆ ನೀಡಲಾಗಿದೆ. ವಿಮಾನ ತಯಾರಿಕೆಯಲ್ಲಿ ಅನಿಲ್ ಅಂಬಾನಿಯದ್ದು ಶೂನ್ಯ ಅನುಭವ. ಇದರ ಹಿಂದಿನ ಭ್ರಷ್ಟಚಾರದ ಬಗ್ಗೆ ನಾನು ಈ ವೇದಿಕೆಯಲ್ಲಿ ಚರ್ಚೆ ಮಾಡುವುದಿಲ್ಲ ಎಂದು ಅವರು ತಿಳಿಸಿದರು. 

ಸ್ವತಂತ್ರ ಪೂರ್ವದಲ್ಲಿ ಭಾರತ ಸರಕಾರವು ಕೆಲವು ಮೌಲ್ಯಯುತ ಆಸ್ತಿಗಳನ್ನು ನಿರ್ಮಾಣ ಮಾಡಿತ್ತು. ಅದರಲ್ಲಿ ಎಚ್‌ಎಎಲ್, ಐಐಟಿಯಂತಹ ಸಂಸ್ಥೆಗಳು ಸೇರಿವೆ. ಇವು ದೇಶದ ಅತ್ಯಮೂಲ್ಯ ಆಸ್ತಿಗಳು. ಎಚ್‌ಎಎಲ್ ದೇಶವನ್ನು ರಕ್ಷಿಸಿದೆ, ರಕ್ಷಿಸುತ್ತಲೇ ಇದೆ. ವೈಜ್ಞಾನಿಕ ದೃಷ್ಟಿಕೋನದಿಂದ ಹಲವಾರು ರಕ್ಷಣಾ ಸಾಮಗ್ರಿಗಳನ್ನು ದೇಶಕ್ಕೆ ಕೊಡುಗೆ ನೀಡಿದೆ. ಎಚ್‌ಎಎಲ್‌ನ ಸಿಬ್ಬಂದಿಗಳ ಸಮಸ್ಯೆಗಳ ಬಗ್ಗೆ ನಮಗೆ ಅರಿವಿದೆ. ನಮ್ಮ ಸರಕಾರ ಅಧಿಕಾರಕ್ಕೆ ಬಂದರೆ ಅದಕ್ಕೆ ಪರಿಹಾರ ನೀಡುತ್ತೇವೆ ಎಂದು ಅವರು ತಿಳಿಸಿದರು.

ನಾವು ನಿಮ್ಮ ಭವಿಷ್ಯವನ್ನು ರಕ್ಷಿಸುತ್ತೇವೆ. ನಾವು ನಿಮ್ಮ ಹಕ್ಕುಗಳಿಗೆ ಹೋರಾಟ ಮಾಡುತ್ತೇವೆ. ರಫೆಲ್ ಒಪ್ಪಂದ ನಿಮ್ಮ ಹಕ್ಕು. ರಫೆಲ್ ಯುದ್ಧ ವಿಮಾನಗಳನ್ನು ತಯಾರು ಮಾಡುವ ಸಾಮರ್ಥ್ಯವಿರುವ ದೇಶದ ಏಕೈಕ ಕಂಪೆನಿ ಎಚ್‌ಎಎಲ್ ಆಗಿದೆ. ರಫೆಲ್ ಯುದ್ಧ ವಿಮಾನಗಳನ್ನು ತಯಾರಿಸುವ ಸಾಮರ್ಥ್ಯ ಎಚ್‌ಎಎಲ್‌ಗೆ ಇದೆಯೇ ಅಥವಾ ಆ ಖಾಸಗಿ ವ್ಯಕ್ತಿಗೆ ಇದೆಯೋ ಎಂಬುದು ಎಲ್ಲರಿಗೂ ಗೊತ್ತು ಎಂದು ಅವರು ಹೇಳಿದರು.

ಮಾಧ್ಯಮಗಳು ನಮ್ಮ ಧ್ವನಿಯನ್ನು ಇತ್ತೀಚೆಗೆ ಕೇಳಿಸಿಕೊಳ್ಳುತ್ತಿಲ್ಲ. ಈ ರೀತಿಯ ಸಂವಾದಗಳು ನಡೆಯಬಾರದು ಎಂಬ ಪರಿಸ್ಥಿತಿ ನಿರ್ಮಾಣವಾಗಿತ್ತು. ಇದು ಈ ದೇಶದ ಇವತ್ತಿನ ಸತ್ಯವಾಗಿದೆ. ಎಚ್‌ಎಎಲ್, ಡಿಆರ್‌ಡಿಓ ಸಂಸ್ಥೆಗಳು ಯಾವುದೇ ಸಮಸ್ಯೆಗಳನ್ನು ಎದುರಿಸಿದರೂ ನಾನು ನಿಮ್ಮ ಜೊತೆ ನಿಲ್ಲುತ್ತೇನೆ ಎಂದು ರಾಹುಲ್‌ಗಾಂಧಿ ಹೇಳಿದರು. 

ಸಂವಾದದಲ್ಲಿ ಲೋಕಸಭೆಯ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್, ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್, ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ, ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್, ಕೇಂದ್ರದ ಮಾಜಿ ಸಚಿವ ಜೈಪಾಲ್ ರೆಡ್ಡಿ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಅಶೋಕ್ ಗೆಹ್ಲೋಟ್, ಸಂಸದ ಕೆ.ಎಚ್. ಮುನಿಯಪ್ಪ, ವಿಧಾನಪರಿಷತ್ ಸದಸ್ಯ ರಿಝ್ವೋನ್ ಅರ್ಶದ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News