ನ್ಯಾಯಾಧೀಶರ ಪತ್ನಿ, ಪುತ್ರನಿಗೆ ಗುಂಡಿಕ್ಕಿದ ಭದ್ರತಾ ಸಿಬ್ಬಂದಿ

Update: 2018-10-13 16:03 GMT

ಹೊಸದಿಲ್ಲಿ,ಅ.13: ನ್ಯಾಯಾಧೀಶರೋರ್ವರ ಖಾಸಗಿ ಭದ್ರತಾ ಅಧಿಕಾರಿ ಅವರ ಪತ್ನಿ ಮತ್ತು ಪುತ್ರನಿಗೆ ಗುಂಡಿಕ್ಕಿದ ಘಟನೆ ಶನಿವಾರ ಅಪರಾಹ್ನ ಗುರ್ಗಾಂವ್‌ನ ಜನನಿಬಿಡ ಮಾರುಕಟ್ಟೆಯಲ್ಲಿ ನಡೆದಿದೆ.

ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಕೃಷ್ಣಕಾಂತ ಶರ್ಮಾ ಅವರ ಪತ್ನಿ ರಿತು(38) ಮತ್ತು ಪುತ್ರ ಧ್ರುವ(18) ಅರ್ಕೇಡಿಯಾ ಮಾರ್ಕೆಟ್‌ಗೆ ತೆರಳಿದ್ದರು. ಈ ವೇಳೆ ಕಳೆದ ಎರಡು ವರ್ಷಗಳಿಂದ ಶರ್ಮಾರ ಭದ್ರತಾ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಮಹಿಪಾಲ ಸಿಂಗ್ ತನ್ನ ಪಿಸ್ತೂಲಿನಿಂದ ಅವರಿಬ್ಬರ ಮೇಲೆ ಗುಂಡು ಹಾರಿಸಿದ್ದಾನೆ. ಧ್ರುವನನ್ನು ಕಾರಿನೊಳಗೆ ಎಳೆದುಕೊಳ್ಳುವ ಪ್ರಯತ್ನ ವಿಫಲವಾದಾಗ ರಸ್ತೆಯಲ್ಲಿಯೇ ಬಿಟ್ಟು ಪರಾರಿಯಾಗಿದ್ದ. ಮಾರ್ಗ ಮಧ್ಯೆ ನ್ಯಾಯಾಧೀಶರಿಗೆ ಕರೆ ಮಾಡಿ ಪತ್ನಿ ಮತ್ತು ಪುತ್ರನಿಗೆ ಗುಂಡಿಕ್ಕಿದ ವಿಷಯವನ್ನು ತಿಳಿಸಿದ್ದ ಸಿಂಗ್,ಇತರ ಇಬ್ಬರಿಗೂ ಕರೆ ಮಾಡಿ ತನ್ನ ಕೃತ್ಯದ ಬಗ್ಗೆ ಹೇಳಿಕೊಂಡಿದ್ದ. ಬಳಿಕ ಪೊಲೀಸ್ ಠಾಣೆಗೆ ತೆರಳಿ ಅಲ್ಲಿಯೂ ಗುಂಡು ಹಾರಿಸಿ ಪರಾರಿಯಾಗಿದ್ದ. ಆತನನ್ನು ಬಳಿಕ ಫರೀದಾಬಾದ್‌ನಲ್ಲಿ ಬಂಧಿಸಲಾಗಿದೆ.

ಗಾಯಾಳು ಧ್ರುವನ ಸ್ಥಿತಿ ಚಿಂತಾಜನಕವಾಗಿದ್ದು,ರಿತು ಶರ್ಮಾ ಅಪಾಯದಿಂದ ಪಾರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಸಿಂಗ್ ಖಿನ್ನತೆಯಿದ ಬಳಲುತ್ತಿದ್ದಾನೆ ಮತ್ತು ನ್ಯಾಯಾಧೀಶರ ಕುಟುಂಬದ ‘ದುರ್ವರ್ತನೆ’ಯಿಂದ ಅಸಮಾಧಾನಗೊಂಡಿದ್ದ ಎಂದು ಪ್ರಾಥಮಿಕ ತನಿಖೆಯು ಬೆಟ್ಟು ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News