ವಿಂಟಾ ನಂದಾ ಆರೋಪದ ಕುರಿತು ತನಿಖೆಗೆ ನ್ಯಾಯಾಲಯದ ಮೆಟ್ಟಿಲೇರಿದ ಅಲೋಕನಾಥ್ ಪತ್ನಿ

Update: 2018-10-13 13:53 GMT

ಹೊಸದಿಲ್ಲಿ,ಅ.13: ನಟಿ-ಲೇಖಕಿ ವಿಂಟಾ ನಂದಾ ತನ್ನ ಪತಿಯ ವಿರುದ್ಧ ಮಾಡಿರುವ ಅತ್ಯಾಚಾರ ಆರೊಪಗಳ ಕುರಿತು ಪೊಲೀಸ್ ತನಿಖೆಗೆ ಆದೇಶಿಸುವಂತೆ ಕೋರಿ ಬಾಲಿವುಡ್ ನಟ ಅಲೋಕನಾಥ್ ಅವರ ಪತ್ನಿ ಆಶು ನಾಥ್ ಅವರು ಮುಂಬೈನ ನ್ಯಾಯಾಲಯವೊಂದರಲ್ಲಿ ಅರ್ಜಿಯನ್ನು ಸಲ್ಲಿಸಿದ್ದಾರೆ.

“ನಂದಾ ಆರೋಪದ ಕುರಿತು ತನಿಖೆಗೆ ಪೊಲೀಸರಿಗೆ ಆದೇಶಿಸುವಂತೆ ನಾವು ನ್ಯಾಯಾಲಯವನ್ನು ಕೋರಿದ್ದೇವೆ. ನಮ್ಮ ಕಕ್ಷಿದಾರರ ವರ್ಚಸ್ಸಿಗೆ ಕಳಂಕ ಹಚ್ಚಲು ಈ ಆರೋಪವನ್ನು ಮಾಡಲಾಗಿದೆ. ನಮಗೆ ಹಣ ಬೇಕಿಲ್ಲ. ಕೇವಲ ಒಂದು ರೂ.ಪರಿಹಾರ ಕೋರಿ ಸೋಮವಾರ ಮಾನನಷ್ಟ ಪ್ರಕರಣವನ್ನೂ ದಾಖಲಿಸಲಿದ್ದೇವೆ ಎಂದು ಅಲೋಕನಾಥ್ ಪರ ವಕೀಲ ಅಶೋಕ ಸರಾವಗಿ ಅವರು ಸುದ್ದಿಸಂಸ್ಥೆಗೆ ತಿಳಿಸಿದರು.

ನಂದಾ ತನ್ನ ಆರೋಪವನ್ನು ಮಾಡಿದ್ದ ಅವರ ಫೇಸ್‌ಬುಕ್ ಪೋಸ್ಟ್‌ನ್ನು ತೆಗೆಯುವಂತೆಯೂ ನ್ಯಾಯಾಲಯವನ್ನು ಕೋರಲಾಗುವುದು ಎಂದರು.

ಸೋಮವಾರ ನಂದಾ ಅವರು ಎರಡು ದಶಕಗಳ ಹಿಂದೆ ಅಲೋಕನಾಥ್ ತನ್ನ ಮೇಲೆ ಅತ್ಯಾಚಾರ ನಡೆಸಿದ್ದರು ಎಂದು ಆರೋಪಿಸಿದ್ದರು. ನಟಿ ಸಂಧ್ಯಾ ಮೃದುಲ್ ಮತ್ತು ಅಲೋಕನಾಥ್ ನಟನೆಯ 1998ರ ‘ಹಮ್ ಸಾಥ್ ಸಾಥ್ ಹೈ’ ಚಿತ್ರತಂಡದ ಸಿಬ್ಬಂದಿಯಾಗಿದ್ದ ಮಹಿಳೆ ಕೂಡ ಅಲೋಕನಾಥ್ ವಿರುದ್ಧ ಲೈಂಗಿಕ ಕಿರುಕುಳದ ಆರೋಪಗಳನ್ನು ಹೊರಿಸಿದ್ದಾರೆ.

 ಅಲೋಕನಾಥ್ ಮದ್ಯಪಾನ ಮಾಡಿದಾಗ ಅವರ ವ್ಯಕ್ತಿತ್ವವೇ ಬದಲಾಗುತ್ತದೆ ಎನ್ನುವುದು ಚಿತ್ರೋದ್ಯಮಕ್ಕೆ ಚೆನ್ನಾಗಿ ಗೊತ್ತಿದೆ ಎಂದು ಅವರ ಜೊತೆಗೆ ಹಲವಾರು ಚಿತ್ರಗಳಲ್ಲಿ ಮತ್ತು ಟಿವಿ ಕಾರ್ಯಕ್ರಮಗಳಲ್ಲಿ ಕೆಲಸ ಮಾಡಿರುವ ನಟಿ ಹಿಮಾನಿ ಶಿವಪುರಿ ಬಹಿರಂಗಗೊಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News