ಖ್ಯಾತ ಹಿಂದುಸ್ಥಾನಿ ಸಂಗೀತಗಾರ್ತಿ ಅನ್ನಪೂರ್ಣಾ ದೇವಿ ಇನ್ನಿಲ್ಲ

Update: 2018-10-13 13:55 GMT

ಹೊಸದಿಲ್ಲಿ,ಅ.13: ಪದ್ಮಭೂಷಣ ಪ್ರಶಸ್ತಿ ಪುರಸ್ಕೃತೆ,ಖ್ಯಾತ ಹಿಂದುಸ್ಥಾನಿ ಶಾಸ್ತ್ರೀಯ ಸಂಗೀತಗಾರ್ತಿ ಅನ್ನಪೂರ್ಣಾ ದೇವಿ(91) ಅವರು ಶನಿವಾರ ಬೆಳಗಿನ ಜಾವ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ನಿಧನರಾದರು. ಅವರು ಕಳೆದ ಕೆಲವು ವರ್ಷಗಳಿಂದ ವೃದ್ಧಾಪ್ಯ ಸಂಬಂಧಿ ಕಾಯಿಲೆಗಳಿಂದ ಬಳಲುತ್ತಿದ್ದರು.

1927,ಎ.23ರಂದು ಮಧ್ಯಪ್ರದೇಶದ ಮೈಹಾರ್ ಪಟ್ಟಣದಲ್ಲಿ ಉಸ್ತಾದ್ ‘ಬಾಬಾ’ ಅಲ್ಲಾವುದ್ದೀನ್ ಖಾನ್ ಮತ್ತು ಮದೀನಾ ಬೇಗಂ ದಂಪತಿಗೆ ಜನಿಸಿದ್ದ ಅನ್ನಪೂರ್ಣಾ ದೇವಿ ನಾಲ್ವರು ಮಕ್ಕಳಲ್ಲಿ ಕಿರಿಯವರಾಗಿದ್ದರು. ಖ್ಯಾತ ಸರೊದ್ ವಾದಕ ಉಸ್ತಾದ್ ಅಲಿ ಅಕ್ಬರ್ ಖಾನ್ ಅವರ ಸೋದರರಾಗಿದ್ದರು. ಐದನೇ ವಯಸ್ಸಿಗೇ ತಂದೆಯಿಂದ ಸಂಗೀತ ಕಲಿಯಲು ಆರಂಭಿಸಿದ್ದ ಅವರು ಆರಂಭದಲ್ಲಿ ಸಿತಾರ್ ನುಡಿಸುತ್ತಿದ್ದರಾದರೂ ಬಳಿಕ ತನ್ನ ನೆಚ್ಚಿನ ‘ಸುರ್‌ಬಹಾರ್’ ಅನ್ನು ಆಯ್ಕೆ ಮಾಡಿಕೊಂಡು ಪಾರಂಗತರಾಗಿದ್ದರು.

ಸಿತಾರ್ ಮಾಂತ್ರಿಕ ಪಂಡಿತ ರವಿಶಂಕರ್ ಅವರನ್ನು ಮದುವೆಯಾಗಿದ್ದ ಅನ್ನಪೂರ್ಣಾ ದೇವಿಯವರ ಪುತ್ರ ಶುಭೇಂದ್ರ ‘ಶುಭೋ’ ಶಂಕರ್ ಅವರು 1992ರಲ್ಲಿ ನಿಧನರಾಗಿದ್ದರು. 1962ರಲ್ಲಿ ರವಿಶಂಕರ್ ಅನ್ನಪೂರ್ಣಾ ದೇವಿಯವರಿಗೆ ವಿಚ್ಛೇದನ ನೀಡಿದ್ದರು. ಅನ್ನಪೂರ್ಣಾ ದೇವಿ ಬಳಿಕ 1992ರಲ್ಲಿ ಮ್ಯಾನೇಜ್‌ಮೆಂಟ್ ಕನ್ಸಲ್ಟಂಟ್ ಹಾಗೂ ಸಂಗೀತಪ್ರೇಮಿ ಋಷಿಕುಮಾರ ಪಾಂಡ್ಯ ಅವರನ್ನು ಮದುವೆಯಾಗಿದ್ದರು. ಪಾಂಡ್ಯ 2013ರಲ್ಲಿ ನಿಧನರಾಗಿದ್ದರು.

ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅನ್ನಪೂರ್ಣಾ ದೇವಿಯವರ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News