ರಾಜಸ್ಥಾನದಲ್ಲಿ 18 ಜನರಲ್ಲಿ ಝಿಕಾ ವೈರಸ್ ಸೋಂಕು

Update: 2018-10-13 14:05 GMT

ಹೊಸದಿಲ್ಲಿ,ಅ.13: ರಾಜಸ್ಥಾನದ ಜೈಪುರ ಜಿಲ್ಲೆಯಲ್ಲಿ ಇನ್ನೂ 18 ಜನರಲ್ಲಿ ಝಿಕಾ ವೈರಸ್ ಸೋಂಕು ಪತ್ತೆಯಾಗಿದ್ದು,ಇದರೊಂದಿಗೆ ಸೋಂಕು ಪೀಡಿತರ ಒಟ್ಟು ಸಂಖ್ಯೆ 50ಕ್ಕೇರಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯವು ಹೇಳಿಕೆಯಲ್ಲಿ ತಿಳಿಸಿದೆ.

ಜೈಪುರದ ಶಾಸ್ತ್ರಿ ನಗರ ಬಡಾವಣೆಯಲ್ಲಿ ಕನಿಷ್ಠ 10 ಹೊಸ ಪ್ರಕರಣಗಳು ಪತ್ತೆಯಾಗಿವೆ ಎಂದು ಸುದ್ದಿಸಂಸ್ಥೆ ವರದಿ ಮಾಡಿದೆ.

ಶುಕ್ರವಾರ ರಾಜಸ್ಥಾನ ಆರೋಗ್ಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ವೀನು ಗುಪ್ತಾ ಅವರ ನೇತೃತ್ವದಲ್ಲಿ ನಡೆದ ಪುನರ್‌ಪರಿಶೀಲನಾ ಸಭೆಯ ಬಳಿಕ ಕೇಂದ್ರ ಸರಕಾರವು ಈ ಮಾಹಿತಿಯನ್ನು ಪ್ರಕಟಿಸಿದೆ. ಝಿಕಾ ವೈರಸ್ ಹರಡುವಿಕೆಯನ್ನು ತಡೆಯಲು ಕೈಗೊಳ್ಳಲಾಗಿರುವ ಕ್ರಮಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಗಿದ್ದು,ಶಾಸ್ತ್ರಿ ನಗರದ ನಿವಾಸಿಗಳಲ್ಲದ ಗರ್ಭಿಣಿಯರು ಆ ಪ್ರದೇಶಕ್ಕೆ ಭೇಟಿ ನೀಡದಂತೆ ಆರೋಗ್ಯ ಇಲಾಖೆಯು ಸೂಚಿಸಿದೆ. ಸೋಂಕುಪೀಡಿತರಲ್ಲಿ 11 ಗರ್ಭಿಣಿಯರು ಸೇರಿದ್ದಾರೆ.

ರಾಜಸ್ಥಾನದಲ್ಲಿನ ಸ್ಥಿತಿಯ ಮೇಲೆ ನಿಗಾಯಿರಿಸಲು ದಿಲ್ಲಿಯಲ್ಲಿ ರಾಷ್ಟ್ರೀಯ ರೋಗ ನಿಯಂತ್ರಣ ಕೇಂದ್ರವನ್ನು ಸ್ಥಾಪಿಸಲಾಗುತ್ತಿದೆ. ಜೈಪುರದಲ್ಲಿನ ಝಿಕಾ ನಿಗಾ ತಂಡಗಳ ಸಂಖ್ಯೆಯನ್ನು 50ರಿಂದ 170ಕ್ಕೆ ಹೆಚ್ಚಿಸಲಾಗಿದೆ ಮತ್ತು ರೋಗಿಗಳಿಗೆ ಚಿಕಿತ್ಸೆ ನೀಡಲು ಹಿರಾ ಬಾಗ್ ಟ್ರೇನಿಂಗ್ ಸೆಂಟರ್‌ನಲ್ಲಿ ಪ್ರತ್ಯೇಕ ವಾರ್ಡ್‌ನ್ನು ರಚಿಸಲಾಗಿದೆ.

ಕೇಂದ್ರವು ಜನರಲ್ಲಿ ಝಿಕಾ ವೈರಸ್ ಬಗ್ಗೆ ಅರಿವು ಮೂಡಿಸಲು ಅಗತ್ಯ ಮಾಹಿತಿಗಳು ಮತ್ತು ಸಂವಹನ ಸಾಮಗ್ರಿಗಳನ್ನು ರಾಜಸ್ಥಾನ ಸರಕಾರಕ್ಕೆ ಒದಗಿಸಿದೆ.

ಮುಂದಿನ ವಾರ ಪ್ರಕರಣಗಳ ಸಂಖ್ಯೆ ಹೆಚ್ಚುವ ನಿರೀಕ್ಷೆಯಿದೆ. ಆದರೆ 2015ರಲ್ಲಿ ಬ್ರೆಝಿಲ್‌ನಲ್ಲಿ ಸಂಭವಿಸಿದ್ದಂತೆ ಪ್ರಕರಣಗಳ ಸಂಖ್ಯೆ ತೀವ್ರವಾಗಿ ಏರಿಕೆಯಾಗಿಲ್ಲ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಅಧಿಕಾರಿಯೋರ್ವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News