ನಕಲಿ ಪತಂಜಲಿ ವೆಬ್‌ಸೈಟ್‌ನಿಂದ ವ್ಯಾಪಾರಿಗೆ 4 ಲಕ್ಷ ರೂ.ವಂಚನೆ

Update: 2018-10-13 14:10 GMT

ಥಾಣೆ,ಅ.13: ಥಾಣೆ ಜಿಲ್ಲೆಯ ಕಲ್ಯಾಣ್‌ನ ವ್ಯಾಪಾರಿಯೋರ್ವ ಪತಂಜಲಿ ಆಯುರ್ವೇದ್‌ನ ನಕಲಿ ವೆಬ್‌ಸೈಟ್ ಮೂಲಕ ವ್ಯಕ್ತಿಯೋರ್ವ ಒಡ್ಡಿದ್ದ ವಿತರಕ ನೇಮಕಾತಿಯ ಆಮಿಷಕ್ಕೆ ಬಲಿಯಾಗಿ ನಾಲ್ಕು ಲ.ರೂ.ಗಳನ್ನು ಕಳೆದುಕೊಂಡಿದ್ದಾನೆ. ಪಂಗನಾಮ ಹಾಕಿಸಿಕೊಂಡಿರುವ 22ರ ಹರೆಯದ ಇಂಜಿನಿಯರಿಂಗ್ ವಿದ್ಯಾರ್ಥಿ ಈ ಬಗ್ಗೆ ಪೊಲೀಸ್ ದೂರು ದಾಖಲಿಸಿದ್ದಾನೆ.

ಯುವಕ ಕಲ್ಯಾಣ್‌ನಲ್ಲಿ ಆಯುರ್ವೇದ ಉತ್ಪನ್ನಗಳ ಅಂಗಡಿಯನ್ನು ಹೊಂದಿದ್ದು,ತನ್ನ ವ್ಯವಹಾರವನ್ನು ವಿಸ್ತರಿಸಲು ಬಯಸಿದ್ದ. ಪತಂಜಲಿ ಆಯುರ್ವೇದ ಹೆಸರಿನಲ್ಲಿದ್ದ ನಕಲಿ ವೆಬ್‌ಸೈಟ್‌ನ ಜಾಲಕ್ಕೆ ಸಿಲುಕಿದ್ದ ಆತ ಡಿಸ್ಟ್ರಿಬ್ಯೂಟರ್‌ಶಿಪ್ ಪಡೆಯಲು ಆನ್‌ಲೈನ್‌ನಲ್ಲಿ ಅರ್ಜಿಯನ್ನು ತುಂಬಿದ್ದ. ಕಂಪನಿಯು ಆತನನ್ನು ಆಯ್ಕೆ ಮಾಡಿದ್ದು,ನೀಡಲಾಗಿರುವ ಬ್ಯಾಂಕ್ ಖಾತೆಗೆ ಹಣವನ್ನು ಜಮಾ ಮಾಡುವಂತೆ ಇ-ಮೇಲ್ ಮೂಲಕ ಆತನಿಗೆ ಸೂಚಿಸಲಾಗಿತ್ತು. ಕೆಲ ದಿನಗಳ ಬಳಿಕ ಸಾಗಾಣಿಕೆ ವಾಹನದಲ್ಲಿ ಜಾಗವುಳಿದಿದ್ದು,ಹೆಚ್ಚುವರಿ ಸರಕುಗಳಿಂದ ಅದನ್ನು ಭರ್ತಿ ಮಾಡಲು ಇನ್ನಷ್ಟು ಹಣವನ್ನು ಬ್ಯಾಂಕ್ ಖಾತೆಗೆ ಜಮಾ ಮಾಡುವಂತೆ ಕರೆಯೊಂದು ಬಂದಿತ್ತು.

 ದೂರುದಾರ ಒಟ್ಟು ನಾಲ್ಕು ಲಕ್ಷ ರೂ.ಗಳನ್ನು ವಂಚಕ ಸೂಚಿಸಿದ್ದ ಬ್ಯಾಂಕ್ ಖಾತೆಗೆ ಜಮಾ ಮಾಡಿದ್ದರೂ ಯಾವುದೇ ಸರಕು ಬಂದಿರಲಿಲ್ಲ. ತಾನು ವಂಚಿಸಲ್ಪಟ್ಟಿದ್ದೇನೆ ಎನ್ನುವುದು ಗೊತ್ತಾದಾಗ ದೂರವಾಣಿಯಲ್ಲಿ ಪಿಂಟು ಪಾಸ್ವಾನ್ ಎಂದು ಪರಿಚಯಿಸಿಕೊಂಡಿದ್ದ ವ್ಯಕ್ತಿಯ ವಿರುದ್ಧ ದೂರು ದಾಖಲಿಸಿದ್ದಾನೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News