ಸಂಶಯದ ಸುಳಿಯಲ್ಲಿ ನರ್ಸ್ ಹೆಝಲ್ ನಿಗೂಢ ಸಾವು: ಕುಟುಂಬಕ್ಕೆ ಇನ್ನೂ ಸಿಗದ ಸಾವಿಗೆ ಸಂಬಂಧಿಸಿದ ಮಾಹಿತಿ

Update: 2018-10-13 14:22 GMT
ಹೆಝಲ್ ಜೋತ್ಸ್ನಾ ಮಥಾಯಸ್

ಉಡುಪಿ, ಅ.13: ಸೌದಿ ಅರೇಬಿಯಾದ ಅಲ್‌ಮಕ್ವಾಹದಲ್ಲಿರುವ ಅಲ್ ಮಕ್ವಾಹ್ ಜನರಲ್ ಆಸ್ಪತ್ರೆಯಲ್ಲಿ ನರ್ಸ್ ಆಗಿದ್ದ ಶಿರ್ವ ಸಮೀಪದ ಕುತ್ಯಾರು ಮೂಲದ ಅಗರ್‌ದಂಡೆ ನಿವಾಸಿ ಹೆಝಲ್ ಜೋತ್ಸ್ನಾ ಮಥಾಯಸ್ (29) ಅವರು ಜುಲೈ 19ರಂದು ನಿಗೂಢ ಆತ್ಮಹತ್ಯೆ ಪ್ರಕರಣ ಆಕೆಯ ಕುಟುಂಬಿಕರಿಗೆ ಈಗಲೂ ಕಗ್ಗಂಟಾಗಿ ಉಳಿದಿದ್ದು, ಸಾವಿನ ನಿಖರ ಕಾರಣಗಳು ಇನ್ನು ಕೂಡಾ ಕನ್ನಡಿಯೊಳಗಿನ ಗಂಟಾಗಿ ಉಳಿದುಕೊಂಡಿದೆ.

ಹೆಝಲ್ ಆರು ವರ್ಷಗಳಿಂದ ಕೆಲಸ ಮಾಡುತಿದ್ದ ಆಸ್ಪತ್ರೆಯ ಸಿಬ್ಬಂದಿ ಯೊಬ್ಬರ ಕಿರುಕುಳದಿಂದ ಬೇಸತ್ತು ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ಹೇಳಲಾಗಿತ್ತು. ಅವರದು ಅಸಹಜ ಸಾವೆಂದು ಅಲ್ಲಿನ ಪೊಲೀಸರು ಕೇಸು ದಾಖಲಿಸಿಕೊಂಡಿದ್ದರಿಂದ ತನಿಖೆ, ನ್ಯಾಯಾಲಯದ ಕಾರಣಗಳಿಗಾಗಿ ಆಕೆಯ ಮೃತದೇಹ ಸುಮಾರು 72 ದಿನಗಳ ಬಳಿಕ ಶಿರ್ವಕ್ಕೆ ಬಂದು ಕಳೆದ ಸೆ.28ರಂದು ಶಿರ್ವದ ಆರೋಗ್ಯ ಮಾತಾ ಚರ್ಚ್‌ನಲ್ಲಿ ಅಂತ್ಯಸಂಸ್ಕಾರ ನಡೆಸಲಾಗಿತ್ತು.

ಆದರೆ ಮೃತದೇಹದೊಂದಿಗೆ ಅಲ್ಲಿನ ಭಾರತೀಯ ರಾಯಭಾರ ಕಚೇರಿಯ ಮೂಲಕ ಕಡ್ಡಾಯವಾಗಿ ಬರಬೇಕಾಗಿದ್ದ ಯಾವುದೇ ದಾಖಲೆಪತ್ರಗಳು, ಕೇಸಿಗೆ ಸಂಬಂಧಿಸಿದ ಆಸ್ಪತ್ರೆ, ಪೊಲೀಸ್ ಹಾಗೂ ನ್ಯಾಯಾಲಯದ ಹೇಳಿಕೆ, ದಾಖಲೆಗಳು, ಪೋಸ್ಟ್‌ಮಾರ್ಟಂ ವರದಿ, ಮಹಜರು ವರದಿ, ಹೆಝರ್ ಅವರ ಬರೆದಿದ್ದರೆನ್ನಲಾದ ಡೆತ್‌ನೋಟ್, ಅವರ ಡೈರಿ ಯಾವುದು ಸಹ ಇದ್ದಿರಲಿಲ್ಲ ಎಂದು ಇದೀಗ ಹೆಝಲ್ ಪ್ರಕರಣದಲ್ಲಿ ಅವರ ಕುಟುಂಬದವರಿಗೆ ನ್ಯಾಯ ದೊರಕಿಸಲು ಹೋರಾಟಕ್ಕಿಳಿದಿರುವ ಉಡುಪಿ ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನದ ಅಧ್ಯಕ್ಷ ಡಾ.ರವೀಂದ್ರನಾಥ್ ಶಾನುಭಾಗ್ ಹೇಳಿದ್ದಾರೆ.

ಹೆಝಲ್ ಅವರ ನಿಗೂಢ ಸಾವಿಗೆ ಸಂಬಂಧಿಸಿದಂತೆ ಯಾವುದೇ ಪ್ರಮುಖ ದಾಖಲೆ-ಪತ್ರಗಳನ್ನು ಕಳುಹಿಸದೇ ಜಿದ್ದಾದಲ್ಲಿರುವ ಭಾರತೀಯ ರಾಯಭಾರ ಕಚೇರಿ, ಅಲ್ಲಿನ ಭಾರತೀಯರ ಹಕ್ಕುಗಳನ್ನು ರಕ್ಷಿಸಬೇಕಾದ ತನ್ನ ಕರ್ತವ್ಯದಲ್ಲಿ ವಿಫಲವಾಗಿದೆ. ಅದು ಪ್ರಾಮಾಣಿಕ ಪ್ರಯತ್ನವನ್ನೇ ನಡೆಸಿಲ್ಲ ಎಂಬುದು ಮೇಲ್ನೋಟಕ್ಕೆ ನಿಚ್ಚಳವಾಗಿದೆ ಎಂದು ಡಾ.ಶಾನುಭಾಗ್, ಹೆಝಲ್ ಅವರ ಪತಿ ಅಶ್ವಿನ್ ಮಥಾಯಸ್, ತಂದೆ ರಾಬರ್ಟ್ ಕ್ವಾಡ್ರಸ್, ತಾಯಿ ಹೆಲೆನಾ ಕ್ವಾಡ್ರಸ್ ಹಾಗೂ ಸಹೋದರ ರಾಯನ್ ಮೆರ್ವಿನ್ ಕ್ವಾಡ್ರಸ್‌ರೊಂದಿಗೆ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಹೆಝಲ್ ಮೃತಪಟ್ಟ ಮೂರು ತಿಂಗಳು ಕಳೆದರೂ ಹೆಝಲ್ ಹೆತ್ತವರಿಗೆ, ಸಾವಿರಾರು ಮೈಲು ದೂರದಲ್ಲಿ ದುಡಿಯುತಿದ್ದ ಮಗಳು ಹೇಗೆ ಸತ್ತಳು ಎಂಬುದೇ ಇನ್ನೂ ಗೊತ್ತಾಗಿಲ್ಲ. ನಿಜವಾಗಿಯೂ ಆಕೆ ಆತ್ಮಹತ್ಯೆ ಮಾಡಿಕೊಂಡಳೇ ಅಥವಾ ಅವರ ಸಾವಿಗೆ ಬೇರೆ ಕಾರಣಗಳಿವೆಯೊ ಎಂಬುದೇ ಅವರ ಪಾಲಿಗೆ ನಿಗೂಢವಾಗಿದೆ.

ತಮ್ಮ ಮಗಳು ಆತ್ಮಹತ್ಯೆ ಮಾಡಿಕೊಳ್ಳುವಷ್ಟು ದುರ್ಬಲ ಮನಸ್ಸಿನವಳಲ್ಲ ಎಂದು ತಂದೆ ರಾಬರ್ಟ್ ಹಾಗೂ ಸಹೋದರ ರಾಯನ್ ಖಚಿತವಾಗಿ ನುಡಿಯುತ್ತಾರೆ. ಅಲ್ಲದೇ ಆಕೆ ಆತ್ಮಹತ್ಯೆ ಮಾಡಿಕೊಂಡಳೆಂದು ಹೇಳಲಾದ ಆಸ್ಪತ್ರೆಯ ನರ್ಸಿಂಗ್ ಹಾಸ್ಟೆಲ್‌ನ ರೂಮಿನಲ್ಲಿ ಆಕೆ ಕೆಥೋಲಿಕ್ ಕೊಂಕಣಿ ಹಾಗೂ ಕನ್ನಡ ಮಿಶ್ರಿತವಾಗಿ ಆಂಗ್ಲ ಭಾಷೆಯಲ್ಲಿ ಬರೆದ ಡೆತ್‌ನೋಟ್ ಸಿಕ್ಕಿದ್ದು, ಇದರಲ್ಲಿ ತನಗೆ ಆಸ್ಪತ್ರೆಯ ಸಿಬ್ಬಂದಿಯಾದ ಇಬ್ರಾಹಿಂ ಅಲ್ ಝರಾನಿ ಎಂಬಾತ ನೀಡುತಿದ್ದ ಕಿರುಕುಳದ ಉಲ್ಲೇಖವಿದೆ ಎಂದು ಹೇಳಲಾಗಿದೆ.

ಆರೋಪಿ ಬಿಡುಗಡೆ

ಈ ಹಿನ್ನೆಲೆಯಲ್ಲಿ ತನಿಖೆ ನಡೆಸುತಿದ್ದ ಸೌದಿ ಪೊಲೀಸರು ಇಬ್ರಾಹಿಂನನ್ನು ಬಂಧಿಸಿ ಸೆರೆಮನೆಗೆ ತಳ್ಳಿದ್ದರು. ಆದರೆ ಆತನನ್ನು ಮೂರು ದಿನಗಳ ಹಿಂದೆ ಬಿಡುಗಡೆ ಮಾಡಲಾಗಿದೆ ಎಂಬುದು ತಮಗೆ ಅಧಿಕೃತವಾಗಿ ತಿಳಿದುಬಂದಿದೆ ಎಂದು ಡಾ.ರವೀಂದ್ರನಾಥ ಶಾನುಭಾಗ್ ತಿಳಿಸಿದರು.

ಹೀಗಾಗಿ ತಮ್ಮ ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾಳಾ ಇಲ್ಲ ಬೇರೆ ಯಾವುದಾದರೂ ಕಾರಣದಿಂದ ಸತ್ತಿದ್ದಾಳಾ ಎಂಬುದನ್ನು ಸ್ಪಷ್ಟವಾಗಿ ಅರಿಯದೇ ನ್ಯಾಯಕ್ಕಾಗಿ ಹೋರಾಟ ನಡೆಸಬೇಕೋ, ಬೇಡವೊ ಎಂಬ ಬಗ್ಗೆ ಹೆತ್ತವರು ಗೊಂದಲದಲ್ಲಿದ್ದಾರೆ ಎಂದರು.

ಸಾವಿನ ಕುರಿತು ಖಚಿತವಾಗಿ ಹೇಳಲು ಪೋಸ್ಟ್‌ಮಾರ್ಟಂ ವರದಿ, ಮಹಜರು ವರದಿ, ಹೆಝಲ್ ಬರೆದಿದ್ದಳೆಂದು ಹೇಳಲಾದ ಡೆತ್‌ನೋಟ್, ಪೊಲೀಸರು ಹಾಕಿದ ಚಾರ್ಜ್‌ಶೀಟ್‌ಗಳಂಥ ಪ್ರಮುಖ ದಾಖಲೆಗಳ ಅಗತ್ಯವಿದೆ. ಅಲ್ಲಿನ ಭಾರತೀಯ ರಾಯಭಾರ ಕಚೇರಿ, ಕೇವಲ ಆಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಆಕೆಯ ದೇಹದ ಮೇಲೆ ಯಾವುದೇ ಗಾಯಗಳಿಲ್ಲ ಎಂಬ ವೈದ್ಯರೊಬ್ಬರ ವರದಿ, ಅದಕ್ಕೆ ಪೂರಕವಾಗಿ ಪೊಲೀಸರು ಸಹ ಆಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆಂದು ನೀಡಿದ ವರದಿಯನ್ನು ಮೃತದೇಹದೊಂದಿಗೆ ಕಳುಹಿಸಿಕೊಟ್ಟಿತ್ತು ಎಂದು ಡಾ.ಶಾನುಭಾಗ್ ವಿವರಿಸಿದರು.

ಅಲ್ ಬಹಾದ ಫೋರೆನ್ಸಿಕ್ ಮೆಡಿಸಿನ್ ಸೆಂಟರ್‌ನ ಡಾ. ಬಂದರ್ ಸಲಾಹಿ ಅಲ್‌ಝರಾನಿ ಸಹಿ ಮಾಡಿದ ಆಕೆಯ ಡೆತ್ ನೋಟಿಪಿಕೇಷನ್‌ನಲ್ಲಿ ಸಾವಿಗೆ ನೇಣು ಬಿಗಿದುಕೊಂಡು ಉಸಿರು ಕಟ್ಟಿರುವುದೇ ಕಾರಣ ಎಂದು ತಿಳಿಸಿದ್ದು, ಅದರಂತೆ ಅಲ್ಲಿನ ವೈದ್ಯರು ಅದನ್ನು ಆತ್ಮಹತ್ಯೆ ಎಂದು ಶರಾ ಬರೆದಿದ್ದಾರೆ.

ಆಶ್ಚರ್ಯದ ವಿಷಯವೆಂದರೆ ಪೋಸ್ಟ್ ಮಾರ್ಟಂ ವರದಿ ಇಲ್ಲದೇ ಅವರು ಆತ್ಮಹತ್ಯೆ ಎಂದು ನಿರ್ಧರಿಸಿಬಿಟ್ಟಿದ್ದಾರೆ ಎಂದು ಡಾ.ಶಾನುಭಾಗ್ ಹೇಳಿದರು.
ವೈದ್ಯರ ವರದಿಯ ಎಲ್ಲೂ ಪೋಸ್ಟ್ ಮಾರ್ಟಂನ ಉಲ್ಲೇಖವೇ ಇಲ್ಲವಾಗಿದ್ದು, ಕುಟುಂಬಿಕರಿಗೆ ಈಗ ಪೋಸ್ಟ್ ಮಾರ್ಟಂ ನಡೆದಿರುವ ಕುರಿತೇ ಸಂಶಯ ಉಂಟಾಗಿದೆ ಎಂದರು. ಈ ವರದಿಯ ಆಧಾರದಲ್ಲಿ ಅಲ್ ಬಹಾ ಜಿಲ್ಲಾ ಪೊಲೀಸ್ ನಿರ್ದೇಶಕರಾದ ಮೇಜರ್ ಜನರಲ್ ಅಲಿ ಬಿನ್ ಮಹಮ್ಮದ್ ಅಲ್ ಹಾದಿ ಅವರು ಸಹ ಅದನ್ನು ಆತ್ಮಹತ್ಯೆ ಎಂದೇ ಹೇಳಿದ್ದಾರೆ. ಅಲ್ಲದೇ ಆಕೆಯ ದೇಹದಲ್ಲಿ ಹಿಂಸೆ ನೀಡಿದ ಅಥವಾ ಹೋರಾಡಿದ ಯಾವುದೇ ಚಿನ್ನೆ ಕಂಡುಬಂದಿಲ್ಲ ಎಂದೂ ಅವರು ಹೇಳಿದ್ದಾರೆಂದು ಡಾ.ಶಾನುಭಾಗ್ ನುಡಿದರು. ಪ್ರಪಂಚದ ಯಾವುದೇ ಪೊಲೀಸ್ ಹೀಗೆ ಆತ್ಮಹತ್ಯೆ ಎಂದು ಘೋಷಿಸಿದ ಉದಾಹರಣೆ ಇರಲಿಕ್ಕಿಲ್ಲ ಎಂದು ಅವರು ವ್ಯಂಗ್ಯವಾಡಿದರು.

ರಾಯಭಾರ ಕಚೇರಿ ಬೇಜವಾಬ್ದಾರಿ:  ಇಡೀ ಪ್ರಕರಣದಲ್ಲಿ ಭಾರತೀಯ ಸಂತ್ರಸ್ಥೆ ಹಾಗೂ ಆಕೆಯ ಕುಟುಂಬದ ಹಿತರಕ್ಷಣೆಗೆ ಮುಂದಾಗಬೇಕಿದ್ದ ಜಿದ್ದಾದ ರಾಜಭಾರ ಕಚೇರಿ ಅತ್ಯಂತ ಬೇಜವಾಬ್ದಾರಿಯಿಂದ ನಡೆದುಕೊಂಡಿದೆ ಎಂದು ಡಾ. ಶಾನುಭಾಗ್ ಹೇಳಿದರು. ಇಡೀ ಪ್ರಕರಣದಲ್ಲಿ ಅದು ಒಮ್ಮೆ ಸಹ ನಮ್ಮ ಕುಟುಂಬವನ್ನು ಸಂಪರ್ಕಿಸಿಲ್ಲ, ಬದಲು ನಾವೇ ಅದನ್ನು ಸಂಪರ್ಕಿಸಿದರೂ ಸರಿಯಾದ ಉತ್ತರ ನೀಡುತ್ತಿರಲಿಲ್ಲ ಎಂದು ಹೆಝಲ್ ಸಹೋದರ ಆರೋಪಿಸಿದರು.

ಮೃತದೇಹದೊಂದಿಗೆ ಪ್ರಕರಣಕ್ಕೆ ಸಂಬಂಧಿಸಿದ ಎಲ್ಲಾ ದಾಖಲೆ ಕಳುಹಿಸಬೇಕಿದ್ದ ರಾಯಭಾರ ಕಚೇರಿ ಕೇವಲ ವೈದ್ಯರ, ಪೊಲೀಸರ ಕಣ್ಣೊರೆಸುವ ವರದಿ ಕಳುಹಿಸಿ ಕೈ ತೊಳೆದುಕೊಂಡಿದೆ. ಅಲ್ಲಿ ದಾಖಲಾದ ಕ್ರಿಮಿನಲ್ ಕೇಸು ಕುರಿತು ಅಲ್ಲಿನ ಅಧಿಕಾರಿ ಸಂಜಯ್‌ಕುಮಾರ್ ಶರ್ಮ ಯಾವುದೇ ಮಾಹಿತಿ ನೀಡಿಲ್ಲ ಎಂದು ಡಾ.ಶಾನುಭಾಗ್ ಆಕ್ರೋಶ ವ್ಯಕ್ತಪಡಿಸಿದರು.

ಇದೀಗ ಭಾರತ ಸರಕಾರ, ಹೆಝಲ್ ಕುಟುಂಬಕ್ಕೆ ಪ್ರಕರಣದ ಸಂಪೂರ್ಣ ಮಾಹಿತಿಯನ್ನು ದೊರಕಿಸಿಕೊಡಬೇಕಾಗಿದೆ. ಈಗಾಗಲೇ ಪ್ರತಿಷ್ಠಾನ ಸಂಪೂರ್ಣ ಮಾಹಿತಿಯನ್ನು ನೀಡುವಂತೆ ಜಿದ್ದಾದ ರಾಯಭಾರ ಕಚೇರಿ, ಅಲ್‌ಮಕ್ವಾಹ್ ಜನರಲ್‌ ಆಸ್ಪತ್ರೆ ಹಾಗೂ ಅಲ್ಲಿನ ಪೊಲೀಸ್ ನಿರ್ದೇಶಕರಿಗೆ ಈಮೇಲ್ ಮೂಲಕ ಪತ್ರ ಕಳುಹಿಸಿದೆ ಎಂದವರು ನುಡಿದರು.

ಮತ್ತೆ ಇಲ್ಲಿ ಪೋಸ್ಟ್‌ಮಾರ್ಟಂಗೆ ಅವಕಾಶವಿದೆ !

ಹೆಝಲ್ ನಿಗೂಢ ಸಾವಿನ ಕುರಿತು ಕುಟುಂಬಕ್ಕೆ ಸಂಶಯವಿದ್ದರೆ, ಇಲ್ಲಿ ದಫನ ಮಾಡಲಾದ ದೇಹವನ್ನು ಹೊರತೆಗೆದು ಮತ್ತೊಮ್ಮೆ ಪೋಸ್ಟ್‌ಮಾರ್ಟಂ ಮಾಡಿಸಲು ಅವಕಾಶವಿದೆ. ಆದರೆ ಇದಕ್ಕೆ ಆಕೆಯ ಕುಟುಂಬಿಕರು ಅನುಮತಿ ನೀಡಬೇಕಾಗಿದೆ ಎಂದು ಡಾ.ಶಾನುಭಾಗ್ ಹೇಳಿದರು.

 ಹೆಝಲ್ ಹೆತ್ತವರು ತುಂಬಾ ಸಂಪ್ರದಾಯಸ್ಥರಾಗಿರುವ ಕಾರಣ ಈ ಬಗ್ಗೆ ಇನ್ನೂ ಯಾವುದೇ ತೀರ್ಮಾನ ತೆಗೆದುಕೊಂಡಿಲ್ಲ. ಅದಕ್ಕೆ ಮುನ್ನ ಅಲ್ಲಿನ ಪೊಲೀಸರು, ಆಸ್ಪತ್ರೆ ಹಾಗೂ ಭಾರತೀಯ ರಾಯಭಾರ ಕಚೇರಿಯಿಂದ ತಾವು ಕೇಳಿರುವ ಎಲ್ಲಾ ದಾಖಲೆಗಳಿಗಾಗಿ ಇನ್ನೂ ಒಂದು ವಾರದವರೆಗೆ ಕಾಯಲು ನಿರ್ಧರಿಸಿದ್ದಾರೆ. ದಾಖಲೆಗಳು ಬಂದರೆ ಅವುಗಳನ್ನು ಪರಿಶೀಲಿಸಿ ಮುಂದಿನ ತೀರ್ಮಾನ ತೆಗೆದುಕೊಳ್ಳಲು ನಿರ್ಧರಿಸಿದ್ದಾರೆ ಎಂದರು.

ಇದರೊಂದಿಗೆ ಹೆಝಲ್ ಕೆಲಸ ಮಾಡುತಿದ್ದ ಆಸ್ಪತ್ರೆಯಿಂದ ಆಕೆಗೆ ಬರಬೇಕಾದ ಎಲ್ಲಾ ಸೌಲಭ್ಯಗಳನ್ನು, ಪರಿಹಾರ ಮೊತ್ತದೊಂದಿಗೆ ಕಳುಹಿಸಲು ಸಹ ಪತ್ರ ಬರೆಯಲಾಗಿದೆ. ಇಡೀ ಪ್ರಕರಣದಲ್ಲಿ ಹೆಝಲ್ ಕುಟುಂಬಕ್ಕೆ ಪ್ರತಿಷ್ಠಾನ ಎಲ್ಲಾ ನೈತಿಕ ಹಾಗೂ ಕಾನೂನಾತ್ಮಕ ಬೆಂಬಲ ನೀಡಲಿದೆ ಎಂದು ಡಾ.ಶಾನುಭಾಗ್ ತಿಳಿಸಿದರು.

ಪೋಟೊ-ಯುಡಿ.ಓ13 ಹಝೆಲ್,1,2, ಆರೋಪಿ ಇಬ್ರಾಹಿಂ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News